ADVERTISEMENT

ಸಂಪುಟ ವಿಸ್ತರಣೆ: ಸುಳಿವು ನೀಡಿದ ಜೇಟ್ಲಿ

​ಪ್ರಜಾವಾಣಿ ವಾರ್ತೆ
Published 27 ಮೇ 2014, 19:30 IST
Last Updated 27 ಮೇ 2014, 19:30 IST

ನವದೆಹಲಿ (ಐಎಎನ್‌ಎಸ್): ಸದ್ಯ­ದಲ್ಲೇ ಕೇಂದ್ರ ಸಂಪುಟ ವಿಸ್ತರಣೆ ಆಗುವ ಸಾಧ್ಯತೆ ಇದೆ ಎಂಬ ಸುಳಿ­ವನ್ನು ಹಣಕಾಸು ಮತ್ತು ರಕ್ಷಣಾ ಸಚಿವ ಅರುಣ್ ಜೇಟ್ಲಿ ಅವರು ನೀಡಿದ್ದಾರೆ.

ಹಣಕಾಸು ಸಚಿವರಾಗಿ ಮಂಗಳ­ವಾರ ಅಧಿಕಾರ ವಹಿಸಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹೆಚ್ಚುವರಿಯಾಗಿ ರಕ್ಷಣಾ ಖಾತೆಯನ್ನು ನೋಡಿಕೊಳ್ಳು­ತ್ತಿದ್ದೇನೆ. ಸಂಪುಟ ವಿಸ್ತರಣೆಯ ನಂತರ ಅದನ್ನು ಬೇರೆಯವರಿಗೆ ವರ್ಗಾಯಿಸ­ಲಾಗು­ವುದು’ ಎಂದು ಹೇಳುವ ಮೂಲಕ ಸಂಪುಟ ವಿಸ್ತರಣೆ ಸುಳಿವು ನೀಡಿದ್ದಾರೆ.

ಸಂಪುಟದಲ್ಲಿ ಅತ್ಯುನ್ನತ ಸಮಿತಿ­ಯಾದ ರಕ್ಷಣಾ ಉಪಸಮಿತಿ ಯಲ್ಲಿ (ಸಿಸಿಎಸ್‌) ಪ್ರಧಾನಿ ಅವರ ಹೊರತಾಗಿ ರಕ್ಷಣೆ, ಹಣಕಾಸು, ಗೃಹ ಮತ್ತು ವಿದೇಶಾಂಗ ಸಚಿವರು ಇರುತ್ತಾರೆ. ಮಹತ್ವದ ರಕ್ಷಣೆ ಮತ್ತು ಹಣಕಾಸು ಎರಡೂ ಖಾತೆಗಳು ಈಗ ಜೇಟ್ಲಿ ಅವರೇ ಸಚಿವರಾಗಿದ್ದಾರೆ.

ಭೂ ಸೇನೆ ಹೊಸ ಮುಖ್ಯಸ್ಥರ ನೇಮಕ ಬಲಾವಣೆ ಇಲ್ಲ– ಸ್ಪಷ್ಟನೆ
ಭೂಸೇನೆಗೆ ಹೊಸ ಮುಖ್ಯಸ್ಥ­ರನ್ನು ನೇಮಕ ಮಾಡಿದ ಹಿಂದಿನ ಸರ್ಕಾರದ ನಿರ್ಧಾರದಲ್ಲಿ ಬದ­ಲಾವಣೆ ಮಾಡುವುದಿಲ್ಲ ಮತ್ತು ವಿವಾದವಾಗಲು ಬಿಡು­ವು­ದಿಲ್ಲ ಎಂದು ನೂತನ ರಕ್ಷಣಾ ಸಚಿವ ಅರುಣ್‌ ಜೇಟ್ಲಿ ಸ್ಪಷ್ಟ ಪಡಿಸಿದ್ದಾರೆ.

ರಕ್ಷಣಾ ಸಚಿವರಾಗಿ ಮಂಗಳ­ವಾರ ಅಧಿಕಾರ ವಹಿಸಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತ­ನಾಡಿದ ಜೇಟ್ಲಿ, ‘ಚುನಾ­ವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ನಡೆದ ಈ ನೇಮಕಾತಿ ಬಗ್ಗೆ ಕೆಲವು ಆಕ್ಷೇಪಗಳು ವ್ಯಕ್ತವಾಗಿದ್ದು ನಿಜ. ಆದರೆ, ಇದು ನಿಯೋಜಿತ ಜನರಲ್‌ ಅವರ ಮೇಲೆ ಯಾವುದೇ ರೀತಿಯಲ್ಲೂ ಪರಿಣಾಮ ಬೀರಬಾರದು’ ಎಂದರು.

ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುವುದಕ್ಕೆ ಎರಡು ದಿನ ಇರುವಾಗ (ಮೇ 14) ಯುಪಿಎ–2 ಸರ್ಕಾರ ಲೆಫ್ಟಿನೆಂಟ್‌ ಜನರಲ್‌ ದಲ್‌ಬೀರ್‌ ಸಿಂಗ್‌ ಸುಹಾಗ್‌ ಅವರನ್ನು ಭೂಸೇನೆಯ ಹೊಸ ಮುಖ್ಯಸ್ಥರ­ನ್ನಾಗಿ ನೇಮಿಸಿತ್ತು. ಇದಕ್ಕೆ ಚುನಾವಣಾ ಆಯೋಗ ಅನುಮತಿ ಕೊಟ್ಟಿತ್ತು. ಆದರೆ, ಈ ನೇಮಕಾತಿಯನ್ನು ವಿರೋಧಿಸಿದ್ದ ಬಿಜೆಪಿ, ಈ ವಿಷಯವನ್ನು ಹೊಸ ಸರ್ಕಾರದ ವಿವೇಚನೆ ಬಿಡುವುದು ಒಳಿತು ಎಂದು ಹೇಳಿತ್ತು. ಹಾಲಿ ಮುಖ್ಯಸ್ಥ ಜನರಲ್‌ ಬಿಕ್ರಂ ಸಿಂಗ್‌ ಅವರು ಜುಲೈ 31ರಂದು ನಿವೃತ್ತರಾಗಲಿದ್ದಾರೆ.

ಅಸ್ಸಾಂನಲ್ಲಿ ನಡೆದ ಸೇನಾ ಗುಪ್ತ ಕಾರ್ಯಾಚರಣೆ ಸಂಬಂಧ ಸುಹಾಗ್‌ ಅವರ ಮೇಲೆ ನೂತನ ಕೇಂದ್ರ ಸಚಿವ ಜನರಲ್‌ ವಿ.ಕೆ. ಸಿಂಗ್‌ ಅವರು ಭೂ ಸೇನೆಯ ನಿವೃತ್ತ ಮುಖ್ಯಸ್ಥರಾಗಿದ್ದ ಸಮಯದಲ್ಲಿ ಶಿಸ್ತುಕ್ರಮ ಜರುಗಿಸಿದ್ದರು. ಬಿಕ್ರಂ ಸಿಂಗ್‌ ಅವರು ಭೂ ಸೇನೆ ಮುಖ್ಯಸ್ಥರಾದ ಮೇಲೆ ಅದನ್ನು (ಮೇ 2012) ವಾಪಸು ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT