ADVERTISEMENT

ಸಗಣಿ ಖರೀದಿ, ಮಾರಾಟಕ್ಕೆ ಆನ್‌ಲೈನ್ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2018, 19:30 IST
Last Updated 25 ಫೆಬ್ರುವರಿ 2018, 19:30 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ‘ಭಾರಿ ಪ್ರಮಾಣದಲ್ಲಿ ಸಾವಯವ ಗೊಬ್ಬರ ಮತ್ತು ಗೊಬ್ಬರದಿಂದ ಅನಿಲವನ್ನು ಉತ್ಪಾದಿಸಲು ಹಸುವಿನ ಸಗಣಿ ಮತ್ತು ಕೃಷಿ ತ್ಯಾಜ್ಯಗಳನ್ನು ಆನ್‌ಲೈನ್‌ ಮೂಲಕ ಖರೀದಿಸುವ ಯೋಜನೆಯನ್ನು ಶೀಘ್ರವೇ ಜಾರಿಗೆ ತರಲಾಗುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

ಭಾನುವಾರ ಪ್ರಸಾರವಾದ ‘ಮನದ ಮಾತು’ ರೆಡಿಯೊ ಕಾರ್ಯಕ್ರಮದಲ್ಲಿ ಪ್ರಧಾನಿ ಈ ಘೋಷಣೆ ಮಾಡಿದರು.

’ಗೋಬರ್–ಧನ ಯೋಜನೆ’ ರೈತರ ಮತ್ತು ಹೈನುಗಾರರ ಆದಾಯ ಹೆಚ್ಚಿಸಲಿದೆ ಎಂದು ಅವರು ಪ್ರತಿಪಾದಿಸಿದರು.

ADVERTISEMENT

‘ಈ ಯೋಜನೆಯಿಂದ ಗ್ರಾಮೀಣ ಭಾರತೀಯರಿಗೆ ಹೆಚ್ಚು ಅನುಕೂಲವಾಗಲಿದೆ. ಇದರಿಂದ ಭಾರಿ ಪ್ರಮಾಣದಲ್ಲಿ ಉದ್ಯೋಗವೂ ಸೃಷ್ಟಿಯಾಗಲಿದೆ. ಈ ಯೋಜನೆ ಅಡಿ ತ್ಯಾಜ್ಯ ಸಂಗ್ರಹಣೆ, ಸಾಗಾಟದಂತಹ ಉದ್ಯೋಗಗಳಿಗೆ ಹೇರಳ ಅವಕಾಶಗಳಿವೆ. ಈ ಯೋಜ
ನೆಯಿಂದ ಮಹಿಳೆಯರು ಹೆಚ್ಚು ಪ್ರಯೋಜನ ಪಡೆಯಲಿದ್ದಾರೆ’ ಎಂದರು.

‘ರೈತರು ತಾವು ಉತ್ಪಾದಿಸಿದ ಸಾವಯವ ಗೊಬ್ಬರ ಮತ್ತು ಗೋಬರ್ ಅನಿಲವನ್ನು ಮಾರಾಟ ಮಾಡಲೂ ಈ ಆನ್‌ಲೈನ್ ವ್ಯವಸ್ಥೆಯಲ್ಲಿ ಅವಕಾಶವಿರಲಿದೆ. ರೈತರು ಮತ್ತು ಕೃಷಿ ತ್ಯಾಜ್ಯ ಖರೀದಿದಾರರ ಮಧ್ಯೆ ಸಂಪರ್ಕ ಕಲ್ಪಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶ’ ಎಂದು ಅವರು ವಿವರಿಸಿದರು.

‘ಹಸುವಿನ ಸಗಣಿ ಮತ್ತು ಕೃಷಿ ತ್ಯಾಜ್ಯವನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸುವ ಯೋಜನೆಗಳು ಯೂರೋಪ್‌ನ ಕೆಲವು ದೇಶಗಳಲ್ಲಿ ಮತ್ತು ಚೀನಾದಲ್ಲಿ ಜಾರಿಯಲ್ಲಿವೆ. ಸ್ವಚ್ಛ ಭಾರತ ಅಭಿಯಾನದ ಮುಂದಿನ ಹಂತ ಇದೇ ದಿಕ್ಕಿನಲ್ಲಿ ಸಾಗಲಿದೆ’ ಎಂದು ಅವರು ಹೇಳಿದರು.

ಕಾಂಗ್ರೆಸ್‌, ಎನ್‌ಡಿಎ ಆಡಳಿತ ತಾಳೆ ಮಾಡಿ

ಪುದುಚೇರಿ (ಪಿಟಿಐ): ಸುಮಾರು 48 ವರ್ಷ ಒಂದು ಕುಟುಂಬ ನಡೆಸಿದ ಆಡಳಿತ ಮತ್ತು ಎನ್‌ಡಿಎ ಸರ್ಕಾರದ 48 ತಿಂಗಳ ಸಾಧನೆ ಹೋಲಿಸಿ ನೋಡುವಂತೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾನುವಾರ ಬಿಜೆಪಿಯ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನದ್ದು ವಂಶಪಾರಂಪರ್ಯ ಆಡಳಿತವಾದರೆ, ಎನ್‌ಡಿಎ ಸರ್ಕಾರದ್ದು ಅಭಿವೃದ್ಧಿ ಆಶಯದ ಆಡಳಿತ ಎಂದರು.

ಬಿಜೆಪಿ ಮತ್ತು ಕಾಂಗ್ರೆಸ್‌ ಆಡಳಿತದಲ್ಲಿನ ವ್ಯತ್ಯಾಸ ಕುರಿತು ಈ ದೇಶದ ಬುದ್ಧಿಜೀವಿಗಳು ಬಹಿರಂಗ ಚರ್ಚೆ ನಡೆಸಲಿ ಎಂದು ಅವರು ಸವಾಲು ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.