ADVERTISEMENT

ಸಚಿವ ನಿಹಾಲ್‌ ತಲೆದಂಡಕ್ಕೆ ಪಟ್ಟು

ವಿವಾಹಿತ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 17 ಜೂನ್ 2014, 19:30 IST
Last Updated 17 ಜೂನ್ 2014, 19:30 IST

ನವದೆಹಲಿ (ಪಿಟಿಐ): ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿರುವ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆಯ ರಾಜ್ಯ ಸಚಿವ ನಿಹಾಲ್‌ಚಂದ್‌ ಅವರನ್ನು ತಕ್ಷಣ ಸಂಪುಟದಿಂದ ಕೈಬಿಡುವಂತೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು ಒತ್ತಾಯಿಸಿದ್ದಾರೆ.

ಅತ್ಯಾಚಾರ ಪ್ರಕರಣದಲ್ಲಿ ಸಾಮಾನ್ಯ ಆರೋಪಿಗಳಿಗೆ ನೀಡುವ ಶಿಕ್ಷೆಯನ್ನೇ ಸಚಿವರಿಗೂ ನೀಡಬೇಕು ಎಂದು ಆಗ್ರಹಿಸಿರುವ  ಮಹಿಳಾ ಆಯೋಗದ ಅಧ್ಯಕ್ಷೆ ಮಮತಾ ಶರ್ಮಾ ಈ ಕುರಿತು ಪ್ರಧಾನಿಗೆ ಪತ್ರ ಬರೆ­ಯು­ವು­ದಾಗಿ ತಿಳಿಸಿ­ದ್ದಾರೆ. 

ನಿಹಾಲ್‌ಚಂದ್‌ ಹಾಗೂ 16 ಜನರ ವಿರುದ್ಧ ರಾಜ­ಸ್ತಾನದ 24 ವರ್ಷದ ವಿವಾಹಿತ ಮಹಿಳೆ 2011­ರಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಆರೋಪಿಗಳ ಖುದ್ದು ಹಾಜರಾತಿಗೆ ಜೈಪುರ ನ್ಯಾಯಾಲಯ  ನೋಟಿಸ್‌ ನೀಡಿತ್ತು.ನಿಹಾಲ್‌ಚಂದ್‌ ಕೇಂದ್ರ ಸಂಪುಟ­ದ­ಲ್ಲಿ­ರುವ ರಾಜಸ್ತಾನದ ಏಕೈಕ  ಸಂಸದರಾಗಿದ್ದಾರೆ.

‘ಸಚಿವರ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣ ಕುರಿತು  ಪ್ರಧಾನಿ ಯಾಕೆ ಮೌನ ವಹಿಸಿದ್ದಾರೆ ’ ಎಂದು ಕಾಂಗ್ರೆಸ್‌ ಕೆಣಿಕಿದೆ. ಸಚಿವರ ತಲೆದಂಡಕ್ಕೆ ಅದು ಪಟ್ಟು ಹಿಡಿದಿದೆ.

‘ಮಹಿಳೆಯರ ರಕ್ಷಣೆ ಬಗ್ಗೆ ಭಾಷಣ  ಮಾಡುವ ಬದಲು  ಆರೋಪಿ ಸಚಿವ­ರನ್ನು ಸಂಪುಟದಿಂದ ವಜಾ­ಗೊಳಿಸಲಿ’ ಎಂದು ಕಾಂಗ್ರೆಸ್‌ ನಾಯಕಿ ಶೋಭಾ ಓಜಾ ಅವರು  ಪ್ರಧಾನಿಯನ್ನು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.