ADVERTISEMENT

ಸರ್ಕಾರದ ಸ್ಥಿರತೆ ಎನ್‌ಸಿಪಿ ಹೊಣೆಯಲ್ಲ

ಉಲ್ಟಾ ಹೊಡೆದ ಶರದ್‌ ಪವಾರ್‌

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2014, 19:30 IST
Last Updated 18 ನವೆಂಬರ್ 2014, 19:30 IST

ಅಲಿಬಾಗ್‌ (ಪಿಟಿಐ): ಮಹಾರಾಷ್ಟ್ರದ ಬಿಜೆಪಿ ಅಲ್ಪಮತದ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡುವುದಾಗಿ ಘೋಷಿಸಿರುವ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಈಗ ಉಲ್ಟಾ ಹೊಡೆದಿದ್ದಾರೆ. 18 ದಿನಗಳ ಹಿಂದೆ ರಚನೆಯಾದ ರಾಜ್ಯ ಸರ್ಕಾರ ಸ್ಥಿರ­ವಾಗಿ­ರುವಂತೆ ನೋಡಿಕೊಳ್ಳುವುದು ಎನ್‌ಸಿಪಿಯ ಜವಾಬ್ದಾರಿ ಅಲ್ಲ  ಎಂದಿರುವ ಪವಾರ್‌, ಮಧ್ಯಾಂತರ ಚುನಾವಣೆಗೆ ಸಿದ್ಧರಾಗುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ರಾಯಗಡ ಜಿಲ್ಲೆಯ ಅಲಿಬಾಗ್‌ನಲ್ಲಿ ನಡೆದ ಪಕ್ಷದ ಎರಡುದಿನಗಳ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು. ಮಹಾರಾಷ್ಟ್ರದ ಈಗಿನ ಪರಿಸ್ಥಿತಿ ದೀರ್ಘ ಕಾಲ ರಾಜಕೀಯ ಸ್ಥಿರತೆ ಒದಗಿಸುವಂತಿಲ್ಲ. ರಾಜಕೀಯ ಅಸ್ಥಿರತೆ ಹೀಗೆಯೇ ಮುಂದುವರಿದರೆ ನಾಲ್ಕರಿಂದ ಆರು ತಿಂಗಳಲ್ಲಿ ಚುನಾವಣೆ ಬರಬಹದು. ಅದು ಮಹಾರಾಷ್ಟ್ರಕ್ಕೆ ಒಳ್ಳೆಯದಲ್ಲ ಎಂದೂ ಅವರು ಹೇಳಿದರು.

ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬಂದಿಲ್ಲ. ಹಾಗಾಗಿ ಫಲಿತಾಂಶದ ಮರುದಿನವೇ ಬಿಜೆಪಿ ಸರ್ಕಾರ ರಚಿಸಿದರೆ ಬೇಷರತ್‌ ಬಾಹ್ಯ ಬೆಂಬಲ ನೀಡುವುದಾಗಿ ಪವಾರ್‌ ಘೋಷಿಸಿದ್ದರು. ಆದರೆ ಈಗ ದೇವೇಂದ್ರ ಫಡಣವೀಸ್‌ ಸರ್ಕಾರಕ್ಕೆ ನೀಡಿರುವ ಬೆಂಬಲದ ಬಗ್ಗೆ ಪವಾರ್‌ ಮರು ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಫಡಣವೀಸ್‌ ಸರ್ಕಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಪಡೆದುಕೊಂಡ ಒಂದೇ ವಾರದೊಳಗೆ ಪವಾರ್‌ ಹೀಗೆ ಮಾತನಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.