ADVERTISEMENT

ಸಾಧನೆಗಳ ಪರಿಚಯಿಸಲು ಸಮಾವೇಶ

​ಪ್ರಜಾವಾಣಿ ವಾರ್ತೆ
Published 23 ಮೇ 2015, 13:01 IST
Last Updated 23 ಮೇ 2015, 13:01 IST

ನವದೆಹಲಿ (ಪಿಟಿಐ): ಎನ್‌ಡಿಎ ಸರ್ಕಾರಕ್ಕೆ ಇದೀಗ ಮೊದಲ ವರ್ಷಾಚರಣೆಯ ಸಂಭ್ರಮ. ಈ ಅಂಗವಾಗಿ ಮೊದಲ ವರ್ಷದ ಸಾಧನೆಗಳನ್ನು ಸಾರ್ವತ್ರಿಕ ಚುನಾವಣೆಗೂ ಮುನ್ನ ನಡೆಸಿದ್ದ ಪ್ರಚಾರದ ಮಾದರಿಯಲ್ಲಿ ದೇಶವ್ಯಾಪಿ ಸಮಾರಂಭಗಳನ್ನು ಹಮ್ಮಿಕೊಂಡು ಜನತೆಗೆ ತಲುಪಿಸಲು ಬಿಜೆಪಿ ನಿರ್ಧರಿಸಿದೆ. ಈ ಸಂಬಂಧ 200 ರ‍್ಯಾಲಿಗಳು ಹಾಗೂ 5 ಸಾವಿರ ಸಾರ್ವಜನಿಕ ಸಭೆಗಳನ್ನೂ ಆಯೋಜಿಸಲು ಕೇಸರಿ ಪಕ್ಷ ಮುಂದಾಗಿದೆ.

ಮೇ 25ರಂದು ದೀನ ದಯಾಳ ಉಪಾದ್ಯಾಯ ಅವರ ಸ್ವಗ್ರಾಮದಲ್ಲಿ ಮೊದಲ ರ‍್ಯಾಲಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡಲಿದ್ದಾರೆ.ಪಕ್ಷದ ಕಾರ್ಯಕ್ರಮಗಳ ಬಗ್ಗೆ ಕೇಂದ್ರ ಸಚಿವರೂ ಆಗಿರುವ ಬಿಜೆಪಿ ಹಿರಿಯ ಮುಖಂಡ ಅನಂತ್ ಕಮಾರ್ ಅವರು ಮಾಹಿತಿ ನೀಡಿದ್ದಾರೆ.

ಬಿಜೆಪಿ ಸಂಭ್ರಮಾಚರಣೆಯ ಭಾಗವಾಗಿ ಮೇ 25ರಿಂದ ಮೇ 30ರ ವರೆಗೆ ‘ಜನ ಕಲ್ಯಾಣ ಪರ್ವ’ ಸಮಾರಂಭ ನಡೆಯಲಿದೆ. ಕೇಂದ್ರದ ಎಲ್ಲಾ ಸಚಿವರು, ಪಕ್ಷದ ಸಂಸದರು, ಮುಖ್ಯಮಂತ್ರಿಗಳು ಹಾಗೂ ಶಾಸಕರು ಸೇರಿದಂತೆ ಪಕ್ಷದ ಕೇಂದ್ರ ಹಾಗೂ ರಾಜ್ಯದ ಪದಾಧಿಕಾರಿಗಳು ಸರ್ಕಾರದ ಸಾಧನೆಗಳನ್ನು ಜನತೆಗೆ ಮುಟ್ಟಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ADVERTISEMENT

ಅಲ್ಲದೇ, ಉಪಾದ್ಯಾಯ ಅವರ ಸ್ವಗ್ರಾಮವಾದ ಉತ್ತರ ಪ್ರದೇಶ ಮಥುರಾ ಜಿಲ್ಲೆಯ ನಗ್ಲಾದಲ್ಲಿ ಮೋದಿ ಅವರು ಸೋಮವಾರ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಇನ್ನು, ಮೋದಿ ನೇತೃತ್ವದ ಸರ್ಕಾರವು ಜನತೆಗಾಗಿ ಕೈಗೊಂಡಿರುವ ಉತ್ತೇಜನಾ ಕ್ರಮಗಳ ಬಗ್ಗೆ ತಿಳಿಸಿಲು ಒಟ್ಟು 200 ಪತ್ರಿಕಾಗೋಷ್ಠಿಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಇದಲ್ಲದೇ ಸುಮಾರು 5 ಸಾವಿರ ‘ಗ್ರಾಮಸಭೆ’ಗಳನ್ನು ನಡೆಸಲು ಹಾಗೂ ಸರ್ಕಾರದ ಸಾಧನೆಗಳ ಬಗ್ಗೆ 500 ಪ್ರದರ್ಶನಗಳನ್ನು ಏರ್ಪಡಿಸಲು ಪಕ್ಷ ನಿರ್ಧರಿಸಿದೆ ಎಂದೂ ಅನಂತ್‌ಕುಮಾರ್‌ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.