ADVERTISEMENT

ಸಾಮೂಹಿಕ ಅತ್ಯಾಚಾರ ಐವರಿಗೆ ಆಜೀವ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2014, 19:30 IST
Last Updated 20 ಅಕ್ಟೋಬರ್ 2014, 19:30 IST

ನವದೆಹಲಿ (ಐಎಎನ್‌ಎಸ್‌): ಕಾಲ್‌ ಸೆಂಟರ್‌ ಉದ್ಯೋಗಿ ಮೇಲೆ ಸಾಮೂ­ಹಿಕ ಅತ್ಯಾಚಾರ ಎಸಗಿದ ಐವರನ್ನು ಇದೇ 14ರಂದು ಅಪರಾಧಿಗಳು ಎಂದು ಘೋಷಿಸಿದ್ದ ದೆಹಲಿ ನ್ಯಾಯಾಲಯ, ಸೋಮವಾರ ಅವರೆಲ್ಲರಿಗೂ ಜೀವಾವಧಿ ಶಿಕ್ಷೆ ವಿಧಿಸಿದೆ.

2010ರ ಅಕ್ಟೋಬರ್‌ 24ರಂದು 30 ವರ್ಷದ ಯುವತಿ ಮೇಲೆ ಈ ಐವರು ಅತ್ಯಾಚಾರ ಎಸಗಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚು­ವರಿ ಸೆಷನ್ಸ್‌ ನ್ಯಾಯಾಧೀಶ ವೀರೇಂದ್ರ ಭಟ್‌ ಅವರು ಶಿಕ್ಷೆ ವಿಧಿಸಿದ್ದಾರೆ.

ಶಂಶದ್ ಆಲಿ­ಯಾಸ್  ಉಸ್ಮಾನ್ ಕೌತ್ಕನ್‌, ಉಸ್ಮಾನ್‌ ಆಲಿ ಯಾಸ್ ಕಾಳೆ, ಶಾಹೀದ್ ಆಲಿಯಾಸ್ ಛೋಟಾ ಬಿಲ್ಲಿ, ಇಕ್ಬಾಲ್ ಆಲಿಯಾಸ್ ಬಡಾ ಬಿಲ್ಲಿ ಮತ್ತು ಕಮರುದ್ದೀನ್‌ಗೆ ಆಜೀವ ಕಾರಾಗೃಹ  ಶಿಕ್ಷೆ ಹಾಗೂ    ಐವರಿಗೂ ತಲಾ ₨ 50 ಸಾವಿರ ದಂಡ   ವಿಧಿಸಿದ್ದಾರೆ.

ಕಾಲ್‌ಸೆಂಟರ್‌ನಲ್ಲಿ ಕಾರ್ಯ­ನಿರ್ವಾಹಕಿಯಾಗಿದ್ದ ಯುವತಿ ತನ್ನ ಪಾಳಿ ಮುಗಿದ ನಂತರ ಸ್ನೇಹಿತೆ­ಯೊಂದಿಗೆ ಮನೆಗೆ ನಡೆದುಕೊಂಡು ಹೋಗುವಾಗ ಆಕೆಯನ್ನು ಅಪಹರಿಸಿ ದೌಲಾ ಕುಂವಾ ಪ್ರದೇಶದಲ್ಲಿ ಅತ್ಯಾಚಾರ ಎಸಗಲಾಗಿತ್ತು   ಎಂದು ಪೊಲೀಸರು ಆರೋಪಿ ಪಟ್ಟಿಯಲ್ಲಿ ಹೇಳಿದ್ದರು.

ಯುವತಿಯನ್ನು ಮಂಗೋಲ್‌ಪುರಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ ನಂತರ, ನಿರ್ಜನ ಪ್ರದೇಶದ ರಸ್ತೆ ಬಳಿ ಬಿಟ್ಟು ಹೋಗಲಾಗಿತ್ತು.  ಹರಿಯಾಣದ ಮೆವತ್‌ ಎಂಬಲ್ಲಿ ಈ ಐವರು ಆರೋಪಿಗಳನ್ನು ಬಂಧಿಸಲಾಗಿತ್ತು.

ಈ ಪ್ರಕರಣ ನಡೆದ ಬಳಿಕ ಮಹಿಳಾ ಉದ್ಯೋಗಿಗಳ ಪಾಳಿ ನಂತರ ಅವರನ್ನು ಮನೆಯವರೆಗೂ ಬಿಡಬೇಕು ಎಂದು ದೆಹಲಿ ಪೊಲೀಸರು ಎಲ್ಲ ಬಿಪಿಒಗಳಿಗೆ ಸೂಚನೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.