ADVERTISEMENT

ಸಿಇಸಿ ಉಸ್ತುವಾರಿ ಸಮಿತಿ: ಶ್ರೀನಿವಾಸ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2014, 19:30 IST
Last Updated 7 ಜುಲೈ 2014, 19:30 IST

ನವದೆಹಲಿ: ರಾಜ್ಯದ ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯಲ್ಲಿ ನಡೆದ ಅಕ್ರಮ ಗಣಿಗಾರಿಕೆ ತನಿಖೆಗೆ ಸುಪ್ರೀಂ ಕೋರ್ಟ್‌ ರಚಿಸಿದ್ದ ‘ಕೇಂದ್ರ ಉನ್ನತಾಧಿಕಾರದ ಸಮಿತಿ’ (ಸಿಇಸಿ) ಅದಿರು ಹರಾಜು ಉಸ್ತುವಾರಿಗೆ ನಿಯೋಜಿಸಿದ್ದ ಸಮಿತಿ­ಯಿಂದ ಬಿಹಾರ ಕೇಡರ್‌ ಐಎಎಸ್‌ ಅಧಿಕಾರಿ ಎಚ್‌.ಆರ್. ಶ್ರೀನಿವಾಸ ಅವರನ್ನು ಬಿಡುಗಡೆ­ಗೊಳಿಸಲು  ನ್ಯಾಯಾಲಯ ಒಪ್ಪಿಗೆ ನೀಡಿತು.

ನ್ಯಾ. ಜೆ.ಎಸ್‌. ಕೇಹರ್‌, ಜೆ. ಚಲಮೇಶ್ವರ್ ಹಾಗೂ ನ್ಯಾ. ಎ.ಕೆ. ಸಿಕ್ರಿ ಅವರನ್ನೊಳಗೊಂಡ ಹಸಿರು ಪೀಠವು ಸೋಮವಾರ ಬಿಹಾರದ ಸಾಲಿಸಿಟರ್‌ ಜನ­ರಲ್‌ ರಂಜಿತ್ ಕುಮಾರ್‌ ಅವರು ಮಾಡಿದ ಮನವಿಗೆ ಸಮ್ಮತಿಸಿತು. ಶ್ರೀನಿವಾಸ ಅವರು, ಕರ್ನಾ­ಟಕದ ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕ­ರಾಗಿದ್ದಾಗ ಅದಿರು ಹರಾಜು ಉಸ್ತುವಾರಿ ಸಮಿತಿಗೆ ನೇಮಕ­ಗೊಂಡಿ­ದ್ದರು. ಈಗ ಮೂಲ ರಾಜ್ಯಕ್ಕೆ ಹಿಂತಿರು­ಗಿದ ಬಳಿಕವೂ ಉಸ್ತುವಾರಿ ಸಮಿತಿ ಸೇವೆಗೆ ಬಳಕೆ ಮಾಡು­ತ್ತಿ­ರುವುದರಿಂದ ರಾಜ್ಯದ ಕೆಲಸಕಾರ್ಯಗಳು ಕುಂಠಿತ­ಗೊಂಡಿವೆ ಎಂದು ಸಾಲಿಸಿಟರ್‌ ಜನರಲ್‌ ಹೇಳಿದರು.

ಕರ್ನಾಟಕದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರಾಗಿ ಈಗಾಗಲೇ ಮಹೇಶ್ವರರಾವ್ ನೇಮಕ­ಗೊಂಡಿದ್ದಾರೆ. ಅವರಿಗೆ ಶ್ರೀನಿವಾಸ ಅವರ ಜವಾಬ್ದಾರಿ ವಹಿಸಬ­ಹುದು ಎಂದು ರಂಜಿತ್‌ ಕುಮಾರ್‌ ಪ್ರತಿಪಾದಿಸಿದರು. ಸಿಇಸಿ ಉಸ್ತುವಾರಿ ಸಮಿತಿಯಿಂದ ಶ್ರೀನಿವಾಸ ಅವರನ್ನು ಬಿಡುಗಡೆ ಮಾಡಲು ಸಮಾಜ ಪರಿವರ್ತನಾ ಸಮುದಾಯದ ವಕೀಲ ಪ್ರಶಾಂತ ಭೂಷಣ್‌ ಆಕ್ಷೇಪ ವ್ಯಕ್ತಪಡಿಸಿದರು.

ಬಿಹಾರದ ಸಾಲಿಸಿಟರ್‌ ಜನರಲ್‌ ವಾದ ನ್ಯಾಯಸಮ್ಮತವೆಂದು ಕಂಡು­ಬಂದ ಹಿನ್ನೆಲೆಯಲ್ಲಿ ನ್ಯಾಯಪೀಠ ಶ್ರೀನಿವಾಸ ಅವರನ್ನು ಸಿಇಸಿ ಉಸ್ತುವಾರಿ ಸಮಿತಿಯಿಂದ ಬಿಡುಗಡೆ ಮಾಡಲು ಒಪ್ಪಿಗೆ ನೀಡಿತು. ಸರ್ವೋಚ್ಚ ನ್ಯಾಯಾಲಯ ಎಸಿಸಿಎಫ್‌ ದೀಪಕ್‌ ಶರ್ಮ, ಸಿಸಿಎಫ್‌ ಯು.ವಿ. ಸಿಂಗ್‌ ಮತ್ತು ಶ್ರೀನಿವಾಸ ನೇತೃತ್ವದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಉದ್ಯಮಿಗಳಿಂದ ವಶಪಡಿಸಿಕೊಂಡ ಅದಿರು ಇ– ಹರಾಜಿಗೆ ಈ ಉಸ್ತುವಾರಿ ಸಮಿತಿ ರಚಿಸಿದೆ.

ಅನುಮತಿಗೆ ಮನವಿ: ಈ ಮಧ್ಯೆ, ಎ ಹಾಗೂ ಬಿ ವರ್ಗದ ಗಣಿಗಳಲ್ಲಿ ಗಣಿಗಾರಿಕೆ ಪುನರಾ­ರಂಭಿ­ಸಲು ಕಾಲಮಿತಿಯೊಳಗೆ ಕಾನೂನು­­ಬದ್ಧ ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡ­ಬೇಕೆಂದು ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಗಣಿ ಗುತ್ತಿಗೆದಾರರನ್ನು ಒಳಗೊಂಡಿರುವ ‘ಫಿಮಿ’ ನ್ಯಾಯಾಲಯಕ್ಕೆ ಮನವಿ ಮಾಡಿದೆ.

ಎ ಹಾಗೂ ಬಿ ಗುಂಪಿನ 72 ಗಣಿಗಳಲ್ಲಿ ಗಣಿಗಾರಿಕೆ ಪುನರಾ­ರಂಭಿಸಲು ಕೋರ್ಟ್‌ ಸೂಚಿಸಿದ್ದರೂ 18 ಗಣಿಗಳಲ್ಲಿ ಮಾತ್ರವೇ ಚಟುವಟಿಕೆ ಆರಂಭವಾಗಿದೆ ಎಂದು ಹಿರಿಯ ವಕೀಲ ಕೆ.ಕೆ. ವೇಣುಗೋಪಾಲ್‌ ಪ್ರತಿಪಾದಿಸಿದರು.

ಗಣಿ ಗುತ್ತಿಗೆಗಳಿಗೆ ತಾತ್ಕಾಲಿಕ ಅನುಮತಿ ನೀಡುವಂತೆ ಸಿಇಸಿ ಮಾಡಿರುವ ಶಿಫಾರಸು ಜಾರಿಗೊಳಿ­ಸುವಂತೆ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಸೂಚಿಸುವಂತೆ ವಕೀಲರು ಕೋರ್ಟ್‌ಗೆ ಮನವಿ ಮಾಡಿದರು.

ಗಣಿ ಗುತ್ತಿಗೆ ಪರವಾನಗಿ ನವೀಕರ­ಣಕ್ಕೆ ಗುತ್ತಿಗೆದಾರರು ಪಡುತ್ತಿರುವ ಕಷ್ಟವನ್ನು ಕೋರ್ಟ್‌ ಗಮನಕ್ಕೆ ತಂದರು. ಈ ಅರ್ಜಿ ವಿಚಾರಣೆ ಅಪೂರ್ಣ­ಗೊಂಡಿದ್ದು, ಮುಂದಿನ ಮಂಗಳವಾರ ಮುಂದು­ವರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.