ADVERTISEMENT

ಸಿದ್ದು,ಚಾಂಡಿ ಹೋಗಲ್ಲ; ಜಯಾ ನಡೆ ನಿಗೂಢ

​ಪ್ರಜಾವಾಣಿ ವಾರ್ತೆ
Published 25 ಮೇ 2014, 14:14 IST
Last Updated 25 ಮೇ 2014, 14:14 IST

ಬೆಂಗಳೂರು/ತಿರುವಂತಪುರ/ಚೆನ್ನೈ (ಪಿಟಿಐ): ಕೇರಳ ಹಾಗೂ ಕರ್ನಾಟಕದ ಮುಖ್ಯಮಂತ್ರಿಗಳಾದ ಉಮ್ಮನ್‌ ಚಾಂಡಿ ಹಾಗೂ ಸಿದ್ದರಾಮಯ್ಯ ಅವರು ಸೋಮವಾರ ನಡೆಯಲಿರುವ ನರೇಂದ್ರ ಮೋದಿ ಅವರ ಪದಗ್ರಹಣ ಸಮಾರಂಭಕ್ಕೆ ಗೈರಾಗಲಿದ್ದಾರೆ.

ಆದರೆ ಪ್ರಮಾಣ ವಚನ ಸಮಾರಂಭಕ್ಕೆ ಶ್ರೀಲಂಕಾ ಅಧ್ಯಕ್ಷ  ಮಹಿಂದಾ ರಾಜಪಕ್ಸೆ ಅವರನ್ನು ಆಹ್ವಾನಿಸಿದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಮೋದಿ ಅವರ ಪದಗ್ರಹಣ ಕಾರ್ಯಕ್ರಮವನ್ನು ಬಹಿಷ್ಕರಿಸಲಿದ್ದಾರೆ ಎಂಬ ಊಹಾಪೋಹಗಳಿದ್ದು, ಈ ಸಂಬಂಧ ಅವರು ತಮ್ಮ ಗುಟ್ಟು ಬಿಟ್ಟುಕೊಟ್ಟಿಲ್ಲ.

ದೆಹಲಿಯಲ್ಲಿ ನಾಳೆ (ಸೋಮವಾರ) ನಡೆಯಲಿರುವ ಮೋದಿ ಅವರ ಪ್ರಮಾಣ ವಚನ ಸಮಾರಂಭಕ್ಕೆ ಸಿದ್ದರಾಮಯ್ಯ ಅವರು ಗೈರಾಗಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಎಂ ಕಚೇರಿ ಬಿಡುಗಡೆಗೊಳಿಸಿದ ಸೋಮವಾರದ ಕಾರ್ಯಕ್ರಮಗಳ ಪಟ್ಟಿಯ ಅನ್ವಯ ಸಿದ್ದರಾಮಯ್ಯ ಅವರು ಬೆಂಗಳೂರು ನಗರದ ಹಲವಡೆ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಇನ್ನೊಂದೆಡೆ, ಪೂರ್ವ ನಿಗದಿತ ಕಾರ್ಯಕ್ರಮಗಳಿಂದಾಗಿ ಮುಖ್ಯಮಂತ್ರಿ ಚಾಂಡಿ ಅವರು ಮೋದಿ ಅವರ ಪದಗ್ರಹಣ ಸಮಾರಂಭಕ್ಕೆ ಹಾಜರಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಾಂಡಿ ಅವರಿಗೆ ಮೋದಿ ಅವರಿಂದ ಆಹ್ವಾನ ಪತ್ರ ಬಂದಿತ್ತು. ಆದರೆ ರಾಜ್ಯದಲ್ಲಿರುವ ಪೂರ್ವ ನಿಗದಿತ ಕಾರ್ಯಕ್ರಮಗಳಿಂದಾಗಿ ಸಮಾರಂಭಕ್ಕೆ ಹಾಜರಾಗುವುದು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಲಾಗಿದೆ  ಎಂದು ಅವರ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಇನ್ನು, ಜಯಲಲಿತಾ ಅವರು ಸಮಾರಂಭದಲ್ಲಿ ಪಾಲ್ಗೊಳ್ಳುವ ಬಗ್ಗೆ ಸೋಮವಾರ ನಿಗೂಢತೆಯನ್ನು ಕಾಯ್ದುಕೊಂಡಿದ್ದು, ಅವರು ಸಮಾರಂಭ ಬಹಿಷ್ಕರಿಸುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.