ADVERTISEMENT

ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ

ಸುಧಾರಣೆಯಾದ ಸಾಧನೆ * ಹಿಂದುಳಿದ ಖಾಸಗಿ ಶಾಲೆಗಳು

​ಪ್ರಜಾವಾಣಿ ವಾರ್ತೆ
Published 26 ಮೇ 2018, 19:30 IST
Last Updated 26 ಮೇ 2018, 19:30 IST
ಫಲಿತಾಂಶ ಪ್ರಕಟವಾದ ನಂತರ ದೆಹಲಿಯ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರ ಸಂಭ್ರಮ –ಪಿಟಿಐ ಚಿತ್ರ
ಫಲಿತಾಂಶ ಪ್ರಕಟವಾದ ನಂತರ ದೆಹಲಿಯ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರ ಸಂಭ್ರಮ –ಪಿಟಿಐ ಚಿತ್ರ   

ನವದೆಹಲಿ: ಕೇಂದ್ರೀಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ (ಸಿಬಿಎಸ್‌ಇ) 12ನೇ ತರಗತಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆ ಬರೆದಿದ್ದವರಲ್ಲಿ ಶೇ 83ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಈ ಬಾರಿ 11 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಒಟ್ಟಾರೆ ಫಲಿತಾಂಶ ಸ್ವಲ್ಪ ಸುಧಾರಿಸಿದೆ. ಕಳೆದ ವರ್ಷ ಶೇ 82ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಉತ್ತೀರ್ಣರಾದವರಲ್ಲಿ ಬಾಲಕಿಯರ ಪ್ರಮಾಣ ಹೆಚ್ಚಿದೆ.

ಈ ವರ್ಷ ಶೇ 88.31 ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದರೆ, ಶೇ 78.99ರಷ್ಟು ಬಾಲಕರು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಈ ಪ್ರಮಾಣ ಕ್ರಮವಾಗಿ ಶೇ 87.50 ಮತ್ತು ಶೇ 78ರಷ್ಟು ಇತ್ತು. ಬಾಲಕರಿಗೆ ಹೋಲಿಸಿದರೆ ಬಾಲಕಿಯರ ಉತ್ತೀರ್ಣ ಪ್ರಮಾಣ ಶೇ 9.32ರಷ್ಟು ಹೆಚ್ಚು.

ADVERTISEMENT

ಈ ಬಾರಿ ಖಾಸಗಿ ಶಾಲೆಗಳ ಫಲಿತಾಂಶ (ಶೇ 82.50) ಕಡಿಮೆಯಾಗಿದೆ. ಆದರೆ ಕೇಂದ್ರೀಯ ವಿದ್ಯಾಲಯಗಳು ಶೇ 97.78 ಹಾಗೂ ಜವಾಹರ್ ನವೋದಯ ವಿದ್ಯಾಲಯಗಳು ಶೇ 97.07ರಷ್ಟು ಫಲಿತಾಂಶ ದಾಖಲಿಸಿವೆ. ಕೇಂದ್ರೀಯ ಟಿಬೆಟಿಯನ್ ಶಾಲೆಗಳೂ ಶೇ 94.82ರಷ್ಟು ಫಲಿತಾಂಶ ದಾಖಲಿಸಿವೆ.

ಒಟ್ಟಾರೆ, ಸರ್ಕಾರಿ ಶಾಲೆಗಳಿಗಿಂತ (ಶೇ 84.39) ಅನುದಾನಿತ ಶಾಲೆಗಳು (ಶೇ 84.48) ಸ್ವಲ್ಪ ಹೆಚ್ಚು ಫಲಿತಾಂಶ ದಾಖಲಿಸಿವೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಅವರು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಭಿನಂದನೆ ಹೇಳಿದ್ದಾರೆ.

ದೇಶಕ್ಕೆ ಮೇಘನಾ ಪ್ರಥಮ
ನೋಯ್ಡಾದ ಸ್ಟೆಪ್‌ ಬೈ ಸ್ಟೆಪ್ ಶಾಲೆಯ ಮೇಘನಾ ಶ್ರೀವಾಸ್ತವ 500 ಅಂಕಗಳಿಗೆ 499 ಅಂಕಗಳನ್ನು (ಶೇ 99.8) ಪಡೆದು, ಮೊದಲ ಸ್ಥಾನ ಪಡೆದಿದ್ದಾರೆ. ಉತ್ತರ ಪ್ರದೇಶದ ಗಾಜಿಯಾಬಾದ್‌ನ ಅನೌಷ್ಕ ಚಂದ್ರ 498 (ಶೇ 99.6) ಅಂಕಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.

497 ಅಂಕಗಳನ್ನು (ಶೇ 99.4) ಪಡೆದಿರುವ ಏಳು ವಿದ್ಯಾರ್ಥಿಗಳು ಮೂರನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಈ ಒಂಬತ್ತು ವಿದ್ಯಾರ್ಥಿಗಳಲ್ಲಿ ಐವರು ಉತ್ತರ ಪ್ರದೇಶದವರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.