ನವದೆಹಲಿ (ಪಿಟಿಐ): ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ಅಧಿಕಾರದ ಅವಧಿ ಮುಗಿಯಲು ಇನ್ನೊಂದು ವಾರ ಬಾಕಿ ಇರುವಾಗಲೇ ಹೊಸ ನಿರ್ದೇಶಕರ ನೇಮಕಕ್ಕೆ ಕೇಂದ್ರ ಪ್ರಕ್ರಿಯೆಗಳನ್ನು ಪ್ರಾರಂಭಿಸಿದೆ.
ಸಿಬಿಐ ನಿರ್ದೇಶಕರನ್ನು ನೇಮಕ ಮಾಡುವುದಕ್ಕೆ ಸಂಬಂಧಿಸಿದಂತೆ ಸಮಿತಿ ರಚನೆ ಮಾಡಲು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಓಪಿಟಿ) ಅರ್ಹತಾ ಮಾನದಂಡಗಳನ್ನು ಹೊಂದಿರುವ ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರುಗಳನ್ನು ಕೋರಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ಅಧಿಕಾರದ ಅವಧಿ ಡಿ.2 ರಂದು ಕೊನೆಗೊಳ್ಳಲಿದೆ.
ಲೋಕಪಾಲ್ ಕಾಯಿದೆಯಂತೆ ಸಿಬಿಐ ನಿರ್ದೇಶಕರ ಆಯ್ಕೆಯನ್ನು ಪ್ರಧಾನಿ ನೇತೃತ್ವದಲ್ಲಿ ವಿರೋಧ ಪಕ್ಷದ ನಾಯಕ ಮತ್ತು ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳು ಅಥವಾ ಅವರು ನಾಮನಿರ್ದೇಶನ ಮಾಡುವ ನ್ಯಾಯಮೂರ್ತಿಯೊಬ್ಬರು ಸದಸ್ಯರಾಗಿರುವ ಆಯ್ಕೆ ಸಮಿತಿಯು ಸೂಚಿಸಿದ ಹೆಸರಿನ ಅಧಾರದ ಮೇಲೆ ಕೇಂದ್ರ ಸರ್ಕಾರ ನಡೆಸಲಿದೆ.
ಸೇವಾ ಹಿರಿತನ, ಸಮಗ್ರತೆ ಮತ್ತು ಭ್ರಷ್ಟಾಚಾರ ಪ್ರಕರಣಗಳ ತನಿಖೆಯ ಅನುಭವದ ಆಧಾರದ ಮೇಲೆ ಐಪಿಎಸ್ ಅಧಿಕಾರಿಗಳ ಪಟ್ಟಿಯನ್ನು ಗೃಹ ಖಾತೆಯು ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ನೀಡುತ್ತದೆ. ಈ ಪಟ್ಟಿಯನ್ನು ಆಯ್ಕೆ ಸಮಿತಿಗೆ ಕಳುಹಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.