ADVERTISEMENT

ಸಿಬಿಐ ಹಿರಿಯ ಅಧಿಕಾರಿಯಿಂದ ಮಾಹಿತಿ ಸೋರಿಕೆ: ಆರೋಪ

ಸುಪ್ರೀಂಕೋರ್ಟ್‌ಗೆ ರಂಜಿತ್‌ ಸಿನ್ಹಾ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2014, 19:30 IST
Last Updated 19 ನವೆಂಬರ್ 2014, 19:30 IST

ನವದೆಹಲಿ (ಪಿಟಿಐ): ಸಿಬಿಐ ಹಿರಿಯ ಅಧಿಕಾರಿ­ಯೊಬ್ಬರು ಪೂರೈಸಿದ ದಾಖಲೆಗಳ ಆಧಾರದಲ್ಲಿ   2ಜಿ  ಹಗರಣದಲ್ಲಿ ಭಾಗಿಯಾದ ಆರೋಪಿಗಳ ಜತೆ ತಮಗೆ ಸಂಪರ್ಕ ಇದೆ ಎಂದು ಪ್ರಶಾಂತ್‌ ಭೂಷಣ್‌ ಅವರು ಆರೋಪಿಸಿದ್ದಾರೆ ಎಂದು ಸಿಬಿಐ ನಿರ್ದೇಶಕ ರಂಜಿತ್‌ ಸಿನ್ಹಾ ಸುಪ್ರೀಂಕೋರ್ಟ್‌ಗೆ ತಿಳಿಸಿದ್ದಾರೆ.

  ರಂಜಿತ್‌ ಸಿನ್ಹಾ ವಿರುದ್ಧ ಪ್ರಶಾಂತ್‌ ಭೂಷಣ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಬುಧವಾರ ನಡೆದಾಗ ಸಿನ್ಹಾ ಹಾಗೂ ಪ್ರಶಾಂತ್‌ ಭೂಷಣ್‌ ವಕೀಲರ ನಡುವೆ ಭಾರಿ ವಾಗ್ವಾದ ನಡೆಯಿತು. ವಕೀಲರಿಬ್ಬರ ವಾಗ್ವಾದವನ್ನು ನಿಲ್ಲಿಸಲು ಮುಖ್ಯ ನ್ಯಾಯಮೂರ್ತಿ ಎಚ್‌. ಎಲ್‌. ದತ್ತು ಅವರಿದ್ದ ಪೀಠ ಮಧ್ಯಪ್ರವೇಶಿಸಬೇಕಾಯಿತು.

  ರಂಜಿತ್‌ ಸಿನ್ಹಾ ವಿರುದ್ಧ ದೂರು ಸಲ್ಲಿಸಿರುವ ಸ್ವಯಂಸೇವಾ ಸಂಸ್ಥೆ ‘ಸೆಂಟರ್‌ ಫಾರ್‌ ಪಬ್ಲಿಕ್‌ ಇಂಟರೆಸ್ಟ್‌ ಲಿಟಿಗೇಷನ್‌’ಗೆ ಸಿಬಿಐನಲ್ಲಿ ಡಿಐಜಿ ದರ್ಜೆಯ ಅಧಿಕಾರಿಯಾಗಿರುವ ಸಂತೋಷ್ ರಸ್ತೋಗಿ ದಾಖಲೆಗಳು ಹಾಗೂ ಟಿಪ್ಪಣಿಗಳನ್ನು ಹಸ್ತಾಂತರಿಸಿದ್ದಾರೆ ಎಂದು ಸಿನ್ಹಾ ಪರ ವಕೀಲ ವಿಕಾಸ್ ಸಿಂಗ್‌ ವಾದಿಸಿದರು.

 ಅರ್ಜಿದಾರರು ಈ ಬಗ್ಗೆ ಮಾಹಿತಿ ನೀಡಿದವರ ಹೆಸರು  ಬಹಿರಂಗಪಡಿಸಲೇಬೇಕು ಎಂದೂ ವಿಕಾಸ್‌ ಸಿಂಗ್‌ ಪಟ್ಟು ಹಿಡಿದರು. ಪ್ರಶಾಂತ್‌ ಭೂಷಣ್‌ ಹಾಗೂ ಸ್ವಯಂಸೇವಾ ಸಂಸ್ಥೆ ಪರವಾಗಿ ಹಾಜರಾದ ವಕೀಲ ದುಷ್ಯಂತ್‌ ದವೆ, ಸಿನ್ಹಾ ವಿರುದ್ಧದ ಆರೋಪಗಳ ಕುರಿತು ಸ್ವತಂತ್ರ ತನಿಖೆ ನಡೆಸಬೇಕು ಎಂದರು.

ಸಿನ್ಹಾ ವಿರುದ್ಧ ತಮ್ಮ ಕಕ್ಷಿದಾರರು ಮಾಡಿರುವ ಆರೋಪಗಳು ಸುಳ್ಳಾದಲ್ಲಿ ಅವರು ಶಿಕ್ಷೆ ಎದುರಿಸಲೂ ಸಿದ್ಧ.   ರಂಜಿತ್‌ ಸಿನ್ಹಾ ಸಿಬಿಐನ ನಿರ್ದೇಶಕರು. ಆರೋ­ಪಿ­ಗಳ ಜತೆ ಅವರು ಭೇಟಿಯಾಗಿದ್ದ ಏಕೆ? ನಮ್ಮ ಸಾಂವಿ­ಧಾನಿಕ ಮೌಲ್ಯಗಳನ್ನು ಗಾಳಿಗೆ ತೂರಲಾಗದು ಎಂದು ದವೆ ಹೇಳಿದರು. ವಕೀಲರ ವಾದ ಪೂರ್ಣಗೊಳ್ಳದ ಕಾರಣ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡ­ಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.