ADVERTISEMENT

ಸಿಬಿಐ ಹೆಚ್ಚುವರಿ ನಿರ್ದೇಶಕಿಯಾಗಿ ಅರ್ಚನಾ

ಉನ್ನತ ದರ್ಜೆಗೆ ಏರಿದ ಮೊದಲ ಮಹಿಳೆ

​ಪ್ರಜಾವಾಣಿ ವಾರ್ತೆ
Published 8 ಮೇ 2014, 19:30 IST
Last Updated 8 ಮೇ 2014, 19:30 IST

ನವದೆಹಲಿ (ಪಿಟಿಐ): ಐಪಿಎಸ್‌ ಅಧಿಕಾರಿ ಅರ್ಚನಾ ರಾಮಸುಂದರಂ ಅವರು ಗುರುವಾರ ಸಿಬಿಐ ಹೆಚ್ಚುವರಿ ನಿರ್ದೇಶಕಿಯಾಗಿ ಅಧಿಕಾರ ವಹಿಸಿ­ಕೊಂಡರು. ಇದರೊಂದಿಗೆ ಈ ತನಿಖಾ ಸಂಸ್ಥೆಯಲ್ಲಿ ಈ ದರ್ಜೆಗೆ ಏರಿದ ಮೊದಲ ಮಹಿಳೆ ಎಂಬ ಹಿರಿಮೆಯೂ ಅವರದ್ದಾಗಿದೆ.

1980ನೇ ತಂಡದ ತಮಿಳುನಾಡು ಶ್ರೇಣಿಯ ಅಧಿಕಾರಿಯಾದ ಅವರು ಈ ಮುಂಚೆ ಕೇಂದ್ರೀಯ ತನಿಖಾ ಸಂಸ್ಥೆಯ (ಸಿಬಿಐ) ಡಿಐಜಿಯಾಗಿ, ನಂತರ ಮೊತ್ತ ಮೊದಲ ಮಹಿಳಾ ಜಂಟಿ ನಿರ್ದೇಶಕಿ ಯಾಗಿ ಸೇವೆ ಸಲ್ಲಿಸಿದ್ದರು.

1999ರಿಂದ 2006ರ ಅವಧಿಯಲ್ಲಿ ತೆಲಗಿ ಛಾಪಾ ಕಾಗದ ಹಗರಣ ಸೇರಿದಂತೆ ಹಲವು ಆರ್ಥಿಕ ಅಪರಾಧಗಳ ತನಿಖೆಯನ್ನು ನಿರ್ವಹಿಸಿದ ಅನುಭವ ಅವರಿಗಿದೆ.

56 ವರ್ಷದ ಅರ್ಚನಾ ಅವ­ರನ್ನು ಈ ಹುದ್ದೆಗೆ ನೇಮಿಸುವಂತೆ ಸಿಬಿಐ ನಿರ್ದೇಶಕ ರಂಜಿತ್‌ ಸಿನ್ಹಾ ಶಿಫಾರಸು ಮಾಡಿದ್ದರು. ಪ್ರಧಾನಿ ಮನ­ಮೋಹನ್‌ ಸಿಂಗ್‌ ನೇತೃತ್ವದ ‘ನೇಮಕಾತಿ ಸಂಪುಟ ಸಮಿತಿ’ ಅದನ್ನು ಅನುಮೋದಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.