ADVERTISEMENT

ಸುಗ್ರೀವಾಜ್ಞೆ: ಇಂದು ಉನ್ನತಾಧಿಕಾರಿಗಳ ಸಭೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2015, 19:30 IST
Last Updated 29 ಜನವರಿ 2015, 19:30 IST

ನವದೆಹಲಿ (ಪಿಟಿಐ): ಇತ್ತೀಚೆಗೆ ಹೊರಡಿ­ಸಿದ ಸುಗ್ರೀವಾಜ್ಞೆ­ಗಳಿಗೆ ಬಜೆಟ್‌ ಅಧಿವೇಶನದಲ್ಲಿ ಅಂಗೀಕಾರ ಪಡೆಯುವ ಸಂಬಂಧ ವಿವಿಧ ಸಚಿವಾಲ­ಯಗಳ ಉನ್ನತಾಧಿಕಾರಿಗಳು ಶುಕ್ರವಾರ ಸಭೆ ಸೇರಲಿದ್ದಾರೆ.

ಸಂಸದೀಯ ವ್ಯವಹಾರಗಳ ಸಚಿ­ವಾಲಯ ಕರೆದಿರುವ ಈ ಸಭೆಯಲ್ಲಿ ಗೃಹ, ಹಣಕಾಸು, ಕಾನೂನು, ಗ್ರಾಮೀ­ಣಾ­ಭಿ­ವೃದ್ಧಿ, ಉಕ್ಕು ಮತ್ತು ಗಣಿ, ಕೃಷಿ, ಕಲ್ಲಿದ್ದಲು– ಭೂಸಾರಿಗೆ ಸಚಿವಾಲ­ಯಗಳ ಕಾರ್ಯದರ್ಶಿಗಳು ಹಾಗೂ ಅಧಿಕಾರಿಗಳು ಪಾಲ್ಗೊಳ್ಳುವರು. ಎನ್‌ಡಿಎ ಸರ್ಕಾರವು ತನ್ನ ಏಳು ತಿಂಗಳ ಅಧಿಕಾರಾ­ವಧಿಯಲ್ಲಿ ಎಂಟು ಸುಗ್ರೀವಾಜ್ಞೆಗಳನ್ನು ಹೊರಡಿಸಿದೆ.

ವಿಮೆ ಹಾಗೂ ಕಲ್ಲಿದ್ದಲು  ಕ್ಷೇತ್ರಕ್ಕೆ ಸಂಬಂಧಿಸಿದ ಸುಗ್ರೀವಾಜ್ಞೆಗಳಿಗೆ ಅನುಮೋದನೆ ಪಡೆದುಕೊಳ್ಳುವುದಕ್ಕೆ ಸರ್ಕಾರದ ಮೇಲೆ ಭಾರಿ ಒತ್ತಡ ಇದೆ.
ಸಂಸತ್‌ ಅಧಿವೇಶನ ಶುರುವಾಗಿ ೪೨ ದಿನಗಳ ಒಳಗೆ ಸುಗ್ರೀವಾಜ್ಞೆಗೆ ಅನುಮೋದನೆ ಸಿಗಬೇಕು. ಇಲ್ಲದಿದ್ದರೆ ಅದು ರದ್ದಾಗುತ್ತದೆ.

ಸರ್ಕಾರವು ಹೊಸ ನೀತಿಗಳ ಜಾರಿಗಾಗಿ ಸುಗ್ರೀವಾಜ್ಞೆ ಮಾರ್ಗ ಹಿಡಿದಿರುವುದಕ್ಕೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಇತ್ತೀಚೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಸಂಬಂಧ ಜ.೨೦ರಂದು ಸಂಸದೀಯ ವ್ಯವಹಾರಗಳ ಸಚಿವ ಎಂ.ವೆಂಕಯ್ಯ ನಾಯ್ಡು ಅವರು ಹಿರಿಯ ಸಚಿವರ ಸಭೆ ಕರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.