ADVERTISEMENT

ಸೋನಿಯಾ, ರಾಹುಲ್‌ ರಾಜೀನಾಮೆ ಇಲ್ಲ

ನಾಳೆ ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆ

​ಪ್ರಜಾವಾಣಿ ವಾರ್ತೆ
Published 17 ಮೇ 2014, 20:04 IST
Last Updated 17 ಮೇ 2014, 20:04 IST

ನವದೆಹಲಿ (ಪಿಟಿಐ): ಲೋಕಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾ­ಗಿರುವ ಕಾಂಗ್ರೆಸ್‌ನ ಕಾರ್ಯಕಾರಿಣಿ ಸಮಿತಿ ಸಭೆ (ಸಿಡಬ್ಲುಸಿ) ಸೋಮವಾರ ನಡೆಯಲಿದ್ದು, ಪಕ್ಷದ­ವರಿಂದಲೇ ಟೀಕಾಸ್ತ್ರದ ಕೂರಂಬುಗಳಿಗೆ ವರಿಷ್ಠರು ಎದೆಗೊಡಬೇಕಿದೆ.

ರಾಹುಲ್‌ ಗಾಂಧಿ ಅವರ ಪ್ರಮುಖ ಸಲಹೆಗಾರರ ಬಗ್ಗೆ ಈಗಾಗಲೇ ಕೆಲವು ಮುಖಂಡರು ಖಾಸಗಿಯಾಗಿ ತೀಕ್ಷ್ಣ ಟೀಕೆಗಳನ್ನು ಮಾಡುತ್ತಿದ್ದಾರೆ. ಇನ್ನು ಕೆಲವರು ಟಿಕೆಟ್‌ ಹಂಚಿಕೆ ವೇಳೆ ಆದ ಲೋಪಗಳ ಬಗ್ಗೆ ಸಾರ್ವಜನಿಕವಾಗಿಯೇ ಟೀಕಿಸುತ್ತಿದ್ದಾರೆ. ಜೈರಾಂ ರಮೇಶ್‌, ಮೋಹನ್‌ ಗೋಪಾಲ್‌, ಮಧು ಸೂದನ್‌ ಮಿಸ್ತ್ರಿ, ಮೋಹನ್‌ ಪ್ರಕಾಶ್‌ ಮತ್ತು ಅಜಯ್‌ ಮಾಕೆನ್‌ ಅವರು ಟೀಕೆಯ ಕೂರಂಬುಗಳನ್ನು ಪ್ರಯೋಗಿಸಲು ಸನ್ನದ್ಧವಾಗಿದ್ದಾರೆ.

ಮತ್ತೊಂದೆಡೆ, ಕಾರ್ಯಕಾರಿಣಿ ಸಭೆಗೆ ಮುನ್ನವೇ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂಬ ವದಂತಿಗಳೂ ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಆದರೆ, ‘ಇವರ ರಾಜೀನಾಮೆ ಸಾಧ್ಯತೆ ಇಲ್ಲ’ ಎಂದು ಪಕ್ಷದ ಉನ್ನತ ಮೂಲಗಳು ತಳ್ಳಿಹಾಕಿವೆ.

ರಾಹುಲ್‌ ಗಾಂಧಿ ಅವರ ನಾಯಕತ್ವ, ಪಕ್ಷದ ಒಟ್ಟಾರೆ ಚುನಾವಣೆ ಕಾರ್ಯತಂತ್ರ,  ಮನಮೋಹನ್‌ ಸಿಂಗ್‌ ಅವರ ನಾಯಕತ್ವದಲ್ಲಿ ಯುಪಿಎ–2ರ ಕಾರ್ಯವೈಖರಿಗಳ ಬಗ್ಗೆ ಪ್ರಶ್ನೆಗಳು ಕೇಳಿಬರುತ್ತಿರುವ ಸಂದರ್ಭದಲ್ಲಿ ಈ ಸಭೆ ನಡೆಯುತ್ತಿದೆ.

‘ಕಾಂಗ್ರೆಸ್‌ನ ಕೆಲವು ಅಭ್ಯರ್ಥಿಗಳೇ ಟಿಕೆಟ್‌ ಪಡೆದ ನಂತರ ಪಕ್ಷವನ್ನು ತೊರೆದರು. ಟಿಕೆಟ್‌ ಹಂಚಿಕೆ ನೀತಿಯ ಬಗ್ಗೆ ಇದು ಗಂಭೀರ ಪ್ರಶ್ನೆಗಳನ್ನು ಎತ್ತುವಂತೆ ಮಾಡಿದೆ’ ಎಂದು ಕಾರ್ಯಕಾರಿಣಿ ಸಭೆಗೆ ವಿಶೇಷ ಆಹ್ವಾನಿತರಾದ ಅನಿಲ್‌ ಶಾಸ್ತ್ರಿ ಸ್ಪಷ್ಟಪಡಿಸಿದ್ದಾರೆ.

‘ಪಕ್ಷಾಂತರಿಗಳಿಗೆ ಟಿಕೆಟ್‌ ನೀಡುವುದಿಲ್ಲ’ ಎಂದು ರಾಹುಲ್‌ ಗಾಂಧಿ ಆರಂಭದಲ್ಲಿ ಹೇಳಿದ್ದರು. ಆದರೆ ಎಷ್ಟೋ ಪ್ರಕರಣಗಳಲ್ಲಿ ಇದನ್ನು ಉಲ್ಲಂಘಿಸಲಾಗಿದೆ. ರಾಹುಲ್‌ ಗಾಂಧಿ ಅವರ ಆಶಯಕ್ಕೆ ವಿರುದ್ಧವಾಗಿ ಯಾರು ಹೀಗೆ ಟಿಕೆಟ್‌ ನೀಡಿದರೋ ಅಂಥ ವರು ಈಗ ಸಂಕಷ್ಟದಲ್ಲಿ ಸಿಲುಕುತ್ತಾರೆ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.