ADVERTISEMENT

ಸೋನಿಯಾ ವಿರುದ್ಧ ವಾಗ್ದಾಳಿ

ಯುಪಿಎ ಆಡಳಿತದಲ್ಲಿ ಸಂವಿಧಾನಬಾಹಿರ ಅಧಿಕಾರ ಚಲಾವಣೆ: ಮೋದಿ ಟೀಕೆ

ಎಂ.ಕೆ.ರಾಜ್ದಾನ್‌
Published 27 ಮೇ 2015, 19:30 IST
Last Updated 27 ಮೇ 2015, 19:30 IST

ನವದೆಹಲಿ (ಪಿಟಿಐ): ಸೋನಿಯಾ ಗಾಂಧಿ ತಮ್ಮ ಮೇಲೆ ನಡೆಸಿರುವ ವಾಗ್ದಾಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ಯುಪಿಎ ಸರ್ಕಾರದ ಅವಧಿಯಲ್ಲಿ ಸೋನಿಯಾ ಅವರೇ ಸಂವಿಧಾನಬಾಹಿರವಾಗಿ ಅಧಿಕಾರ ಚಲಾಯಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.

‘ಎನ್‌ಡಿಎ ಸರ್ಕಾರ ಸಂಸತ್ತಿನಲ್ಲಿ ಆಕ್ರಮಣಕಾರಿ ಧೋರಣೆ ಪ್ರದರ್ಶಿಸುತ್ತಿದೆ ಹಾಗೂ ಇದು ಒಬ್ಬರೇ ವ್ಯಕ್ತಿಯಿಂದ ನಡೆಯುತ್ತಿರುವ ಸರ್ಕಾರ’ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿರುವ ಮೋದಿ, ಬಹುಶಃ ಈ ಹಿಂದಿನ ಸರ್ಕಾರದ ಬಗ್ಗೆ ಸೋನಿಯಾ ಪ್ರಸ್ತಾಪಿಸಿರಬಹುದು ಎಂದು ವ್ಯಂಗ್ಯವಾಡಿದ್ದಾರೆ.

‘ಈ ಹಿಂದೆ ಸಾಂವಿಧಾನಿಕ ಹುದ್ದೆಯಲ್ಲಿ ಇಲ್ಲದೇ ಇರುವವರು ಅಧಿಕಾರ ಚಲಾಯಿಸುತ್ತಿದ್ದರು. ಈಗ ಸಂವಿಧಾನಕ್ಕೆ ಅನುಗುಣವಾಗಿ ಆಡಳಿತ ನಡೆಸಲಾಗುತ್ತಿದೆ. ಸಾಂವಿಧಾನಿಕ ಹುದ್ದೆಯಲ್ಲಿ ಇಲ್ಲದವರ ಮಾತು ಕೇಳದೇ ಅಧಿಕಾರ ನಡೆಸುತ್ತಿರುವುದಕ್ಕೆ ಆರೋಪ ಮಾಡುತ್ತಿರುವುದಾದಲ್ಲಿ ಅದಕ್ಕಾಗಿ ನಾನು ಕ್ಷಮೆ ಯಾಚಿಸುತ್ತೇನೆ’ ಎಂದೂ ಮೋದಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

ಎನ್‌ಡಿಎ ಸರ್ಕಾರ ಎರಡನೇ ವರ್ಷಕ್ಕೆ ಕಾಲಿಟ್ಟ ಕಾರಣ ಬುಧವಾರ ಸುದ್ದಿ ಸಂಸ್ಥೆ ‘ಪಿಟಿಐ’ಗೆ ಸಂದರ್ಶನ ನೀಡಿದ ಅವರು,  ಭೂಸ್ವಾಧೀನ ಮಸೂದೆ, ಜಿಎಸ್‌ಟಿ ಮಸೂದೆ, ವಿದೇಶ ಪ್ರವಾಸಗಳು ಹಾಗೂ ಪ್ರಧಾನಿ ಕಚೇರಿ ಯಲ್ಲಿ ಅಧಿಕಾರ ಕೇಂದ್ರೀಕೃತವಾಗಿರುವ ಬಗ್ಗೆ ಸೋನಿಯಾ ಹಾಗೂ ರಾಹುಲ್‌ ಗಾಂಧಿ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿದರು.

ಪೂರ್ವಗ್ರಹದ ಪ್ರಶ್ನೆ: ‘ಪಿಎಂಒ’ (ಪ್ರಧಾನಿ ಕಚೇರಿ) ದಲ್ಲಿ ಅಧಿಕಾರ ಕೇಂದ್ರೀಕೃತವಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೋದಿ, ‘ನಿಮ್ಮ  ಪ್ರಶ್ನೆ ಪೂರ್ವಗ್ರಹದಿಂದ ಕೂಡಿದೆ. ಸಾಂವಿಧಾನಿಕ ಹುದ್ದೆಯಲ್ಲಿ ಇಲ್ಲದೇ ಇರುವವರು ಪಿಎಂಒ ಮೇಲೆ ಅಧಿಕಾರ ಚಲಾಯಿಸುವಾಗ ಈ ಪ್ರಶ್ನೆ ಕೇಳಬೇಕಿತ್ತು ’ ಎಂದರು.

‘ಸರ್ಕಾರದ ವ್ಯವಹಾರದಲ್ಲಿ ನಾವು ಯಾವುದೇ ಬದಲಾವಣೆ ಮಾಡಿಲ್ಲ. ಯಾರಿಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಇದೆಯೋ ಅವರೇ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಪ್ರಧಾನಿ ಮತ್ತು ಪ್ರಧಾನಿ ಕಚೇರಿ ಸಂವಿಧಾನದ ವ್ಯಾಪ್ತಿಯ
ಲ್ಲಿಯೇ ಬರುತ್ತದೆ’ ಎಂದರು.

‘ವರ್ಷದ ಹಿಂದೆ ನಾನು ಆಡಳಿತ ಚುಕ್ಕಾಣಿ ಹಿಡಿದಾಗ ಅಧಿಕಾರದ ಮೊಗಸಾಲೆಯ ತುಂಬ ವಶೀಲಿಬಾಜಿತನದ ಗಲೀಜು ಇತ್ತು.  ಇದನ್ನು ಸ್ವಚ್ಛಗೊಳಿಸುವುದು ನಮಗೆ ದೊಡ್ಡ ಕೆಲಸವಾಗಿತ್ತು’ ಎಂದು  ಮೋದಿ ಅವರು ಹೇಳಿದ್ದಾರೆ. ರಾಹುಲ್‌ ಗಾಂಧಿ ಅವರ ‘ಸೂಟು– ಬೂಟಿನ ಸರ್ಕಾರ’ ಎಂಬ ಟೀಕೆಗೆ ಉತ್ತರಿಸಿದ ಪ್ರಧಾನಿ, ‘ಲೋಕಸಭಾ ಚುನಾವಣೆಯಾಗಿ ವರ್ಷ ಕಳೆದರೂ ಕಾಂಗ್ರೆಸ್‌ಗೆ ತನ್ನ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ’ ಎಂದರು.

ಕಲಿಯದ ಪಾಠ:‘ಅವರು ಮಾಡಿದ ಪಾಪಗಳಿಗಾಗಿ ಜನ ಅವರನ್ನು ಶಿಕ್ಷಿಸಿ ದ್ದಾರೆ. ಅದರಿಂದ ಅವರು ಪಾಠ ಕಲಿಯುತ್ತಾರೆ ಅಂದುಕೊಂಡಿದ್ದೆವು ಎಂದರು. ಭೂಸ್ವಾಧೀನ ಮಸೂದೆಯ ಬಗ್ಗೆ ಮಾತನಾಡಿದ ಪ್ರಧಾನಿ, ರಾಜಕೀಯ ಕೆಸರೆರಚಾಟದಲ್ಲಿ ಸಿಲುಕಿಕೊಳ್ಳುವುದು ತಮಗೆ ಇಷ್ಟವಿಲ್ಲ ಎಂದರು.‘ಭೂಸ್ವಾಧೀನದ ವಿಚಾರಕ್ಕೂ ಕೇಂದ್ರ ಸರ್ಕಾರಕ್ಕೂ ಸಂಬಂಧವಿಲ್ಲ. ಭೂಮಿಗೆ ಸಂಬಂಧಿಸಿದ ಎಲ್ಲ ಹಕ್ಕುಗಳು ರಾಜ್ಯಗಳ ಬಳಿ ಇರುತ್ತವೆ.

‘ಹಿಂದಿನ ಯುಪಿಎ ಸರ್ಕಾರ, 120 ವರ್ಷಗಳ ಹಿಂದಿನ ಭೂಸ್ವಾಧೀನ ಮಸೂದೆಯನ್ನು ಸಂಸತ್ತಿನಲ್ಲಿ ಯಾವುದೇ ಚರ್ಚೆ ನಡೆಸದೇ 120 ನಿಮಿಷಗಳಲ್ಲಿ ಅಂಗೀಕರಿಸಿತ್ತು. ರೈತರಿಗೆ ಒಳ್ಳೆಯದಾಗುತ್ತದೆ ಎಂಬ ಕಾರಣಕ್ಕೆ ಆಗ ನಾವು ಸಹ ಅದನ್ನು ಬೆಂಬಲಿಸಿದ್ದೆವು. ಆನಂತರ ರಾಜ್ಯಗಳಿಂದ ದೂರುಗಳು ಬರಲಾರಂಭಿಸಿದವು. ರಾಜ್ಯಗಳ ಬೇಡಿಕೆಯಂತೆ ಲೋಪ–ದೋಷಗಳನ್ನು ನಿವಾರಿಸಲು ಮಸೂದೆಗೆ ತಿದ್ದುಪಡಿ ತರಲಾಯಿತು. ರಾಜಕೀಯ ಕನ್ನಡಕ ಹಾಕಿಕೊಳ್ಳದೇ ನಾವು ತಂದಿರುವ ತಿದ್ದುಪಡಿ ನೋಡಿದಲ್ಲಿ ನಮಗೇ ಎಲ್ಲರೂ ಪೂರ್ಣ ಅಂಕ ನೀಡುತ್ತಾರೆ.

ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಯ ಬಗ್ಗೆ ಪ್ರಶ್ನಿಸಿದಾಗ, ‘ಕಾನೂನಿನ ಅನ್ವಯ ದಾಳಿ ಮಾಡಿದ
ವರ ಮೇಲೆ ಕ್ರಮ ಜರುಗಿಸಲಾಗುವುದು. ಯಾವುದೇ ಸಮುದಾಯದ ವಿರುದ್ಧ ಹಿಂಸೆ ಹಾಗೂ ತಾರತಮ್ಯವನ್ನು ಸಹಿಸಲಾ
ಗದು ಎಂದು ಹಿಂದೆಯೂ ಹೇಳಿದ್ದೆ. ಈಗಲೂ ಹೇಳುತ್ತೇನೆ’ ಎಂದರು.

ಕೆಲ ಸ್ವಯಂಸೇವಾ ಸಂಸ್ಥೆಗಳ ವಿರುದ್ಧ ಕೈಗೊಂಡ ಕ್ರಮದ ಬಗ್ಗೆ ಕೇಳಿದಾಗ, ‘ಹಿಂದಿನ ಸರ್ಕಾರ ರೂಪಿಸಿದ್ದ ಕಾಯ್ದೆಯನ್ನು ನಾವು ಜಾರಿಗೊಳಿಸುತ್ತಿದ್ದೇವೆ. ಕಾಯ್ದೆಗೆ ವಿರುದ್ಧವಾಗಿ ಯಾವುದೂ ನಡೆದಿಲ್ಲ. ಯಾವುದೇ ದೇಶಪ್ರೇಮಿಯೂ ಇದಕ್ಕೆ ಆಕ್ಷೇಪ ಎತ್ತಲಾರ’ ಎಂದರು.‌

ವಿದೇಶ ಪ್ರವಾಸ: ವಿದೇಶ ಪ್ರವಾಸಗಳ ಬಗ್ಗೆ ಕೇಳಿಬಂದ ಟೀಕೆಗೆ ಪ್ರತಿಕ್ರಿಯಿಸಿದ ಪ್ರಧಾನಿ, ‘ನೇಪಾಳಕ್ಕೆ 17 ವರ್ಷಗಳ ನಂತರ ಪ್ರಧಾನಿಯೊಬ್ಬರು ಭೇಟಿ ನೀಡಿದ್ದು ಉತ್ತಮ ಸನ್ನಿವೇಶವಲ್ಲವೇ’ ಎಂದು ಪ್ರಶ್ನಿಸಿದರು. ‘ನಾವು ದೊಡ್ಡ ದೇಶ ಎಂಬ ಕಾರಣಕ್ಕೆ ಸಣ್ಣ ದೇಶವನ್ನು ನಿರ್ಲಕ್ಷ್ಯಿಸಲು ಸಾಧ್ಯವಿಲ್ಲ. ನಾವೀಗ ಬೇರೆ ಯುಗದಲ್ಲಿದ್ದೇವೆ. ಭಯೋತ್ಪಾದನೆ ಜಾಗತಿಕ ಸಮಸ್ಯೆಯಾಗಿದ್ದು ಜಗತ್ತಿನ ಯಾವುದೋ ಮೂಲೆಯಿಂದ ಬರುವ ಸಾಧ್ಯತೆಯಿದೆ.

ವಂಚಕ (con) ಎಂಬುದು ವೃತ್ತಿಪರ (pro) ಎಂಬುದರ ವಿರುದ್ಧಾರ್ಥಕ ಪದವಾದರೆ, ಕಾಂಗ್ರೆಸ್‌ (congress) ಎಂಬುದು ಪ್ರೊಗ್ರೆಸ್‌ (progress) ಎಂಬುದರ ವಿರುದ್ಧಾರ್ಥಕ ಪದ
ನರೇಂದ್ರ ಮೋದಿ, ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದಾರೆ. ಅಪರೂಪಕ್ಕಾದರೂ ಸತ್ಯ ಮಾತನಾಡಬೇಕು
ಶಕೀಲ್‌ ಅಹ್ಮದ್‌, ಕಾಂಗ್ರೆಸ್‌ ವಕ್ತಾರ

ಭೂಮಸೂದೆ ಸಲಹೆಗಳಿಗೆ ಮುಕ್ತ
ಭೂಸ್ವಾಧೀನ ಮಸೂದೆಗೆ ಸಂಬಂಧಿಸಿದಂತೆ ಸರ್ಕಾರ ಸಲಹೆಗಳಿಗೆ ಮುಕ್ತವಾಗಿದೆಯೇ ಎಂಬ ಪ್ರಶ್ನೆಗೆ, ‘ಗಾಂವ್‌, ಗರೀಬ್‌, ಕಿಸಾನ್(ಹಳ್ಳಿ, ಬಡವ, ರೈತ)’ ವರ್ಗಗಳಿಗೆ ಒಳ್ಳೆಯದಾಗುವುದಾದರೆ ನಾವು ಅದನ್ನು ಸ್ವೀಕರಿಸುತ್ತೇವೆ ಎಂದರು.

ADVERTISEMENT

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹಾಗೂ ಭೂಸ್ವಾಧೀನ ಮಸೂದೆಯಿಂದ ದೇಶಕ್ಕೆ ಲಾಭವಾಗುತ್ತಿದ್ದು, ಇನ್ನೇನು ಮಸೂದೆ ಅಂಗೀಕಾರವಾಗುವುದಷ್ಟೇ ಬಾಕಿ ಉಳಿದಿದೆ ಎಂದು ಅವರು ತಿಳಿಸಿದರು. ರೈತರ ಆತ್ಮಹತ್ಯೆ ಬಗ್ಗೆ ಮಾತನಾಡಿದ ಪ್ರಧಾನಿ, ಈ ಸಮಸ್ಯೆ ಹಲವು ವರ್ಷಗಳಿಂದ ಇದೆ. ರಾಜಕೀಯವಾಗಿ ಮೇಲುಗೈ ಸಾಧಿಸಲು ಈ ವಿಚಾರ ಬಳಸಿಕೊಳ್ಳಬಾರದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.