ADVERTISEMENT

ಸ್ವರ್ಣ ಮಂದಿರದಲ್ಲಿ ಮಾರಾಮಾರಿ

ಸಿಖ್ಖರ ಗುಂಪುಗಳ ನಡುವೆ ಘರ್ಷಣೆ: 12 ಜನರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 6 ಜೂನ್ 2014, 20:39 IST
Last Updated 6 ಜೂನ್ 2014, 20:39 IST

ಅಮೃತಸರ (ಪಿಟಿಐ): ಸ್ವರ್ಣ ಮಂದಿ­ರದ ಆವರಣದಲ್ಲಿ ಶುಕ್ರವಾರ ಬೆಳಗ್ಗೆ ಸುಮಾರು ಅರ್ಧ ತಾಸು ಕಾಲ ಸಿಖ್ಖರ ಎರಡು ಗುಂಪುಗಳ ನಡುವೆ ಮಾರಾ­ಮಾರಿ ನಡೆದಿದೆ. ಘಟನೆಯಲ್ಲಿ  ಕನಿಷ್ಠ 12 ಜನರು ಗಾಯಗೊಂಡಿದ್ದಾರೆ.

ಸ್ವರ್ಣ ಮಂದಿರ ಸಂಕೀರ್ಣದೊಳಗಿನ ಅಕಾಲ್‌ ತಖ್ತ್‌ (ಸಿಖ್ಖರ ಐದು ಧಾರ್ಮಿಕ ಪೀಠಗಳಲ್ಲಿ ಒಂದು) ಕಟ್ಟ­ಡದ ಹೊರಗೆ ಉದ್ರಿಕ್ತ ಜನರು ಖಡ್ಗ, ಭರ್ಚಿ ಮತ್ತು ದೊಣ್ಣೆಗಳಿಂದ ಹೊಡೆ­ದಾಡಿದರು. ಕೆಲವರು ರಕ್ಷಣೆಗಾಗಿ ಓಡಿ ಹೋದರು.

ನಿವೃತ್ತ ಐಪಿಎಸ್‌ ಅಧಿಕಾರಿ ಸಿಮ್ರನ್‌ಜಿತ್‌ ಸಿಂಗ್‌ ಮಾನ್‌ ನೇತೃತ್ವದ ಅಕಾಲಿ ದಳದ ಒಂದು ಬಣವು ಅಕಾಲ್‌ ತಖ್ತ್‌ನ ವೇದಿಕೆಯಿಂದ ಖಲಿಸ್ತಾನ ಪರ­ವಾದ ಘೋಷಣೆಗಳನ್ನು ಕೂಗಲು ಯತ್ನಿಸಿತು. ಇದೇ ಸಂಘರ್ಷಕ್ಕೆ ಕಾರಣವಾಯಿತು.

ಬ್ಲೂಸ್ಟಾರ್‌ ಕಾರ್ಯಾಚರಣೆಯ 30ನೇ ವರ್ಷದ ಸಂಬಂಧ ಆಯೋಜಿಸ­ಲಾಗಿದ್ದ ಕಾರ್ಯಕ್ರಮದಲ್ಲಿ ಮಾತ­ನಾಡ­ದಂತೆ ಮಾನ್‌ ಅವರನ್ನು ತಡೆಯಲಾಯಿತು. ಹೀಗಾಗಿ ಶಿರೋ­ಮಣಿ ಅಕಾಲಿ ದಳ (ಅಮೃತಸರ) ಮತ್ತು ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿಯ (ಎಸ್‌ಜಿಪಿಸಿ) ಸ್ವಯಂ ಸೇವಕರ ನಡುವೆ ಘರ್ಷಣೆ ನಡೆಯಿತು. ಖಡ್ಗ, ಭರ್ಚಿ, ದೊಣ್ಣೆ ಉಪಯೋಗಿಸಿ ಹಲ್ಲೆ ನಡೆಸಲಾಯಿತು.
ಇದರಿಂದಾಗಿ ಎಸ್‌ಜಿಪಿಸಿಯ ಐವರು ಸದಸ್ಯರು ಗಾಯಗೊಂಡಿದ್ದಾರೆ ಎಂದು ಅಮೃತಸರ ಪೊಲೀಸ್‌ ಆಯುಕ್ತ ಜತೀಂದರ್‌ ಸಿಂಗ್‌ ಔಲಖ್‌ ತಿಳಿಸಿದ್ದಾರೆ.

ಸ್ವರ್ಣ ಮಂದಿರದೊಳಗೆ ಪೊಲೀಸ್‌ ಸಿಬ್ಬಂದಿಗೆ ಪ್ರವೇಶ ಇಲ್ಲ. ಇಲ್ಲಿನ ಭದ್ರತೆ ಮತ್ತು ಇತರ ಎಲ್ಲ ನಿಯಂತ್ರಣವೂ ಎಸ್‌ಜಿಪಿಸಿಯದ್ದಾಗಿದೆ ಎಂದು ಔಲಕ್‌ ಹೇಳಿ­ದ್ದಾರೆ. ಈಗ ಪರಿಸ್ಥಿತಿಯನ್ನು ನಿಯಂ­ತ್ರಣಕ್ಕೆ ತರಲಾಗಿದೆ. ಸ್ವರ್ಣ ಮಂದಿ­ರ­ದಲ್ಲಿನ ಪ್ರಾರ್ಥನೆಗೆ ಯಾವುದೇ ತೊಡಕು ಉಂಟಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಸಮಾಜವಿರೋಧಿ ಶಕ್ತಿಗಳು ಈ ಘಟನೆಗೆ ಕಾರಣವಾಗಿದ್ದು, ತನಿಖೆ ನಡೆಯುತ್ತಿದೆ ಎಂದು  ಅವರು ಹೇಳಿದ್ದಾರೆ.
ದೇಗುಲ ನಗರಿ ಅಮೃತಸರದಲ್ಲಿ ಬ್ಲೂಸ್ಟಾರ್‌ ಕಾರ್ಯಾಚರಣೆಯ 30ನೇ ವರ್ಷದ ಸಂಬಂಧ ಗುರುವಾರ ಬಂದ್‌ಗೂ ಕರೆ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.