ADVERTISEMENT

ಸ್ವಿಸ್‌ನಿಂದ ದಾಖಲೆ ಚಿನ್ನ ರಫ್ತು!

ಕಪ್ಪುಹಣದ ತನಿಖೆಗೆ ಹೆಚ್ಚಿದ ಭಾರತದ ಒತ್ತಡ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2014, 19:30 IST
Last Updated 26 ಅಕ್ಟೋಬರ್ 2014, 19:30 IST

ನವದೆಹಲಿ/ ಬರ್ನ್‌ (ಪಿಟಿಐ): ಸ್ವಿಟ್ಜ­ರ್‌­ಲೆಂಡ್‌ ಬ್ಯಾಂಕುಗಳಲ್ಲಿ ಭಾರತೀ­ಯರು ಇರಿಸಿರುವ ಕಪ್ಪುಹಣದ ಬಗ್ಗೆ ತನಿಖೆಗಾಗಿ ಒತ್ತಡ ಹೆಚ್ಚುತ್ತಿರುವ ಸಂದ­ರ್ಭದಲ್ಲೇ ಆ ರಾಷ್ಟ್ರದಿಂದ ಭಾರತಕ್ಕೆ ರಫ್ತಾಗಿರುವ ಚಿನ್ನದ ಮೌಲ್ಯ ದಾಖಲೆ ₨ 70,000 ಕೋಟಿ ಮುಟ್ಟಿದೆ.

ಸೆಪ್ಟೆಂಬರ್‌ ಒಂದರಲ್ಲೇ ಅಲ್ಲಿಂದ ಭಾರತಕ್ಕೆ ಸುಮಾರು ₨ 15,000 ಕೋಟಿ ಚಿನ್ನ ರಫ್ತಾಗಿದೆ. ಇದು ಆ ಹಿಂದಿನ ಆಗಸ್‌್ಟನಲ್ಲಿ ಅಲ್ಲಿಂದ ಬಂದಿ­ರುವ ಚಿನ್ನದ ಮೌಲ್ಯಕ್ಕಿಂತ ದುಪ್ಪಟ್ಟಾ­ಗಿದೆ. ಸ್ವಿಸ್‌ ಸರ್ಕಾರದ ಸಾಗರೋತ್ತರ ವಹಿವಾಟು ಮೇಲ್ವಿಚಾರಣಾ ಸಂಸ್ಥೆಯ ಅಂಕಿಅಂಶಗಳ ಪ್ರಕಾರ, ಜನವರಿಯಿಂದ ಈವರೆಗೆ ಸುಮಾರು ₨ 70 ಸಾವಿರ ಕೋಟಿ ಮೌಲ್ಯದ ಚಿನ್ನವು ಭಾರತಕ್ಕೆ ರಫ್ತಾಗಿದೆ.

ದೀಪಾವಳಿ ಮತ್ತಿತರ ಹಬ್ಬಗಳಿಗಾಗಿ ಬೇಡಿಕೆ ಅಧಿಕವಾಗಿರುವುದು ಈ ಹೆಚ್ಚ­ಳಕ್ಕೆ ಒಂದು ಕಾರಣವಿರಬಹುದು. ಜತೆಗೆ, ಸ್ವಿಸ್‌ ಬ್ಯಾಂಕುಗಳಲ್ಲಿರುವ ಕಪ್ಪು­ಹಣ ಮರೆಮಾಚಲು ಖಾತೆದಾರರು ಚಿನ್ನ ಖರೀದಿಸಿ, ರವಾನಿಸುತ್ತಿ­ರುವುದು ಇದಕ್ಕೆ ಮುಖ್ಯ ಕಾರಣ ಎಂಬ ಮಾತು ಉದ್ಯಮ ವಲಯದಲ್ಲಿ ಕೇಳಿಬರುತ್ತಿದೆ.

ತನ್ನ ಕಪ್ಪುಹಣದ ಖಾತೆದಾರರ ಬಗ್ಗೆ ಬಿಗಿ ತನಿಖೆ ನಡೆಸಲು ಭಾರತ ಸರ್ಕಾರ ನಿರ್ಧರಿಸಿರುವುದರಿಂದ ಸ್ವಿಟ್ಜರ್‌ಲೆಂಡ್‌ ಹಾಗೂ ಯುರೋಪಿನ ಇತರ ಬ್ಯಾಂಕು­ಗಳ ಸ್ವಿಸ್‌ ಘಟಕಗಳಿಗೆ ಭಾರತದ ಖಾತೆದಾರರೊಂದಿಗೆ ವ್ಯವಹರಿಸು­ವುದು ತಲೆನೋವಾಗಿ ಪರಿಣಮಿಸಿದೆ.

ಹೀಗಾಗಿ ಜಾಗತಿಕವಾಗಿ ಹೆಸರು ಮಾಡಿ­ರುವ ಮೂರು ಬ್ಯಾಂಕುಗಳು ಸೇರಿದಂತೆ ಬಹುತೇಕ ಸ್ವಿಸ್‌ ಬ್ಯಾಂಕು­ಗಳು ತಮ್ಮ ಭಾರತೀಯ ಗ್ರಾಹಕರಿಂದ, ‘ಮುಂದಿನ ಆಗುಹೋಗುಗಳಿಗೆಲ್ಲಾ ನಾನೇ ಹೊಣೆ’ ಎಂಬ ಮುಚ್ಚಳಿಕೆ ಬರೆ­ಸಿಕೊಳ್ಳುತ್ತಿವೆ. ಅಲ್ಲದೇ, ತಮ್ಮ ಖಾತೆಗ­ಳನ್ನು ರದ್ದುಗೊಳಿಸಿಕೊಳ್ಳು­ವಂತೆ, ಇಲ್ಲವೇ ತಮ್ಮ ನಿಧಿಯನ್ನು ಬಂಗಾರದ ರೂಪಕ್ಕೆ ಪರಿವರ್ತಿಸಿಕೊಳ್ಳುವಂತೆ ಸಲಹೆ ನೀಡುತ್ತಿವೆ.

ಒಟ್ಟಾರೆ ಬೆಳವಣಿಗೆಯಿಂದ ಚಿಂತೆ­ಗೀಡಾ­ಗಿರುವ ಸ್ವಿಸ್‌ ಬ್ಯಾಂಕುಗಳು, ಭಾರತ ಸರ್ಕಾರದೊಂದಿಗೆ ಹಂಚಿಕೊ­ಳ್ಳುವ ಯಾವುದೇ ಮಾಹಿತಿಯಿಂದ ತಮ್ಮ ಬ್ಯಾಂಕಿಂಗ್‌ ವ್ಯವಸ್ಥೆಗೆ ಬಾಧಕ­ವಾಗದಂತೆ ಎಚ್ಚರ ವಹಿಸುವಂತೆಯೂ  ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ.

‘ಹೆಸರು ಬಹಿರಂಗದಿಂದ ತನಿಖೆಗೆ ಭಂಗ’
ವಿದೇಶಿ ಬ್ಯಾಂಕುಗಳಲ್ಲಿ ಕಪ್ಪುಹಣ ಇರಿಸಿರುವ ಖಾತೆದಾರರ ಹೆಸರನ್ನು ಆತುರಾತುರದಲ್ಲಿ ಬಹಿರಂಗಗೊಳಿಸಿದರೆ ಈ ಕುರಿತ ತನಿಖೆ ಉದ್ದೇಶಕ್ಕೇ ಭಂಗ ಬರುತ್ತದೆ ಎಂದು ಉದ್ದಿಮೆಗಳ ಸಂಘಟನೆಯಾದ ‘ಅಸೋಚಾಮ್‌’ ಹೇಳಿದೆ. ಹೀಗೆ ಮಾಡಿದರೆ 88 ದೇಶಗಳೊಂದಿಗೆ ಮಾಡಿಕೊಂಡಿರುವ ‘ದ್ವಿತೆರಿಗೆ ತಡೆ ಒಪ್ಪಂದ’ದ (ಡಿಟಿಎಟಿ) ಕರಾರುಗಳನ್ನು ಉಲ್ಲಂಘಿಸಿದಂತೆ ಆಗುತ್ತದೆ ಎಂದು ಸಂಘಟನೆಯ ಕಾರ್ಯದರ್ಶಿ ಡಿ.ಎಸ್‌.ರಾವತ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT