ADVERTISEMENT

ಸ್ವೀಡನ್‌ ಪತ್ರಿಕೆ ಧೋರಣೆಗೆ ಆಕ್ಷೇಪ

ರಾಷ್ಟ್ರಪತಿ ಪ್ರಣವ್‌ ಅನೌಪಚಾರಿಕ ಮಾತು ಪ್ರಕಟಣೆ

​ಪ್ರಜಾವಾಣಿ ವಾರ್ತೆ
Published 27 ಮೇ 2015, 19:30 IST
Last Updated 27 ಮೇ 2015, 19:30 IST

ನವದೆಹಲಿ (ಪಿಟಿಐ): ಸಂದರ್ಶನದ ಸಂದರ್ಭದಲ್ಲಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ‘ಬಾಯ್ತಪ್ಪಿ’ ಆಡಿದ ಮಾತುಗಳನ್ನು ಪ್ರಕಟಿಸಿರುವ ಸ್ವೀಡನ್ನಿನ ಡಾಜೆನ್ಸ್‌ ನೈಹೆಟರ್‌ ಪತ್ರಿಕೆ ವಿರುದ್ಧ  ಭಾರತ ಬಲವಾದ ಪ್ರತಿಭಟನೆ ದಾಖಲಿಸಿದೆ.

‘ಇದು ವೃತ್ತಿಪರ ನಡೆ ಅಲ್ಲ ಮತ್ತು ನೈತಿಕವೂ ಅಲ್ಲ’ ಎಂದು ಸ್ವೀಡನ್‌ನಲ್ಲಿ ಭಾರತದ ರಾಯಭಾರಿಯಾಗಿರುವ ಬನಶ್ರೀ ಬೋಸ್‌ ಹ್ಯಾರಿಸನ್‌ ಹೇಳಿದ್ದಾರೆ. ಪತ್ರಿಕೆಯ ಪ್ರಧಾನ ಸಂಪಾದಕ ಪೀಟರ್‌ ವೊಲೊಡರ್‌ಸ್ಕಿ ಅವರಿಗೆ ಪತ್ರ ಬರೆದಿರುವ ಬನಶ್ರೀ, ಭಾರತದ ಅತೃಪ್ತಿಯನ್ನು ತಿಳಿಸುವಂತೆ ಸರ್ಕಾರ ಸೂಚನೆ ನೀಡಿದ್ದು ಅದರಂತೆ ಪತ್ರ ಬರೆದಿರುವುದಾಗಿ ಹೇಳಿದ್ದಾರೆ.

‘ಸಂದರ್ಶನ ಮುಗಿದ ನಂತರ ರಾಷ್ಟ್ರಪತಿಯವರು ಅನೌಪಚಾರಿಕ ಮಾತುಕತೆಯಲ್ಲಿ ಬಾಯ್ತಪ್ಪಿ ಆಡಿರುವ ಮಾತುಗಳನ್ನು ಸಂದರ್ಶನದಲ್ಲಿ ಸೇರಿಸಿರುವುದು ವೃತ್ತಿಪರತೆಯೂ ಅಲ್ಲ, ನೈತಿಕತೆಯೂ ಅಲ್ಲ. ದೇಶದ ಮುಖ್ಯಸ್ಥರೊಬ್ಬರಿಗೆ ತೋರಿಸಬೇಕಾದ ಗೌರವ ಮತ್ತು ಸೌಜನ್ಯವನ್ನು ಮುಖರ್ಜಿ ಅವರಿಗೆ ತೋರಿಸಲಾಗಿಲ್ಲ’ ಎಂದೂ ಪತ್ರದಲ್ಲಿ ಹೇಳಲಾಗಿದೆ.

ಸಂದರ್ಶನದಲ್ಲಿ ಮೂರನೇ ಪ್ರಶ್ನೆಯಾಗಿ ಬೊಫೋರ್ಸ್‌ ಬಗ್ಗೆ ಕೇಳಲಾಗಿತ್ತು. ಆದರೆ, ಅದೇ ಮೊದಲ ಪ್ರಶ್ನೆ ಎಂಬಂತೆ ಬಿಂಬಿಸಲಾಗಿದೆ. ಇದರಿಂದಾಗಿ ಪತ್ರಿಕಾ ಸ್ವಾತಂತ್ರ್ಯವನ್ನು ಓದುಗರ ದಾರಿ ತಪ್ಪಿಸಲು ಬಳಸಿಕೊಂಡಂತಾಗಿದೆ ಎಂದೂ ಬನಶ್ರೀ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಕಚೇರಿಗೆ ಕರೆ ಮಾಡಿದ್ದ ರಾಯಭಾರಿ ಬನಶ್ರೀ ಅವರು ಬೊಫೋರ್ಸ್‌ ಪ್ರಸ್ತಾಪ ಇರುವ ಭಾಗಗಳನ್ನು ಕೈಬಿಡುವಂತೆ ಕೋರಿದ್ದರು ಎಂದು ‘ಡಾಜೆನ್ಸ್‌ ನೈಹೆಟರ್‌’ ತನ್ನ ಅಂತರ್ಜಾಲ ಆವೃತ್ತಿಯಲ್ಲಿ ಹೇಳಿಕೊಂಡಿದೆ.

ಇದರಿಂದಾಗಿ ರಾಷ್ಟ್ರಪತಿಯವರ ಸ್ವೀಡನ್‌ ಭೇಟಿ ಕೂಡ ರದ್ದಾಗಬಹುದು ಎಂದೂ ಬನಶ್ರೀ ಹೇಳಿರುವುದಾಗಿ ಪತ್ರಿಕೆ ಹೇಳಿಕೊಂಡಿದೆ.
‘ಬೊಫೋರ್ಸ್‌ ಹಗರಣವೇ ಅಲ್ಲ, ಅದು ಮಾಧ್ಯಮದ ಸೃಷ್ಟಿ’ ಎಂದು ಸಂದರ್ಶನದಲ್ಲಿ ರಾಷ್ಟ್ರಪತಿ ಹೇಳಿದ್ದಾಗಿ ಡಾಜೆನ್ಸ್‌ ನೈಹೆಟರ್‌ ಪತ್ರಿಕೆ ಪ್ರಕಟಿಸಿತ್ತು. ಅದು ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.