ADVERTISEMENT

ಹನಿಪ್ರೀತ್‌ ವಿರುದ್ಧ ಎಫ್‌ಐಆರ್‌ ದಾಖಲು

ಪಿಟಿಐ
Published 19 ಸೆಪ್ಟೆಂಬರ್ 2017, 19:30 IST
Last Updated 19 ಸೆಪ್ಟೆಂಬರ್ 2017, 19:30 IST
ಹನಿಪ್ರೀತ್‌ ವಿರುದ್ಧ ಎಫ್‌ಐಆರ್‌ ದಾಖಲು
ಹನಿಪ್ರೀತ್‌ ವಿರುದ್ಧ ಎಫ್‌ಐಆರ್‌ ದಾಖಲು   

ಚಂಡೀಗಡ: ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಮ್ ಸಿಂಗ್‌ ದತ್ತು ಪುತ್ರಿ ಹನಿಪ್ರೀತ್‌ ಸಿಂಗ್‌ ಇನ್ಸಾನ್‌ ವಿರುದ್ಧ ಹರಿಯಾಣ ಪೊಲೀಸರು ಮಂಗಳವಾರ ಎಫ್‌ಐಆರ್‌ ದಾಖಲಿಸಿದ್ದಾರೆ.

ಅತ್ಯಾಚಾರ ಪ್ರಕರಣದಲ್ಲಿ ಗುರ್ಮೀತ್ ರಾಮ್ ರಹೀಮ್ ಸಿಂಗ್‌ ತಪ್ಪಿತಸ್ಥ ಎಂದು ಆ. 25 ರಂದು ವಿಶೇಷ ನ್ಯಾಯಾಲಯ ತೀರ್ಪು ನೀಡಿದ ಸಂದರ್ಭದಲ್ಲಿ ಪಂಚಕುಲಾದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಹನಿಪ್ರೀತ್‌ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಸದ್ಯ ತಲೆಮರೆಸಿಕೊಂಡಿರುವ ಹನಿಪ್ರೀತ್‌, ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪಿ ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆದಿತ್ಯ ಇನ್ಸಾನ್‌, ಸುರಿಂದರ್‌ ಧಿಮಾನ್‌ ಸೇರಿದಂತೆ ಇತರರ ಜೊತೆಗೆ ಹನಿಪ್ರೀತ್‌ ಹೆಸರು ಸಹ ಎಫ್‌ಐಆರ್‌ನಲ್ಲಿ ದಾಖಲಾಗಿದೆ’ ಎಂದು ಪಂಚಕುಲಾ ಪೊಲೀಸ್‌ ಆಯುಕ್ತ ಎ.ಎಸ್‌.ಚಾವ್ಲಾ ತಿಳಿಸಿದ್ದಾರೆ.

ADVERTISEMENT

‘ಹನಿಪ್ರೀತ್‌ ಬಂಧಿಸಲು ಶೋಧ ಕಾರ್ಯ ಮುಂದುವರಿದಿದೆ. ಅವಳು ನೇಪಾಳದಲ್ಲಿದ್ದಾಳೆ ಎಂಬುದಕ್ಕೆ ನಿರ್ದಿಷ್ಟ ಮಾಹಿತಿ ಇಲ್ಲ. ನಮಗೆ ಸಿಕ್ಕಿರುವ ಮಾಹಿತಿಗಳನ್ನು ಆಧರಿಸಿ ಅವಳ ಹುಡುಕಾಟ ನಡೆದಿದೆ. ಹನಿಪ್ರೀತ್‌ ಶೋಧಕ್ಕಾಗಿ ಪೊಲೀಸರ ಹಲವು ತಂಡಗಳು ಬೇರೆ ಬೇರೆ ಪ್ರದೇಶಗಳಿಗೆ ತೆರಳಿದ್ದು, ಅಕ್ಕಪಕ್ಕದ ರಾಜ್ಯಗಳ ಪೊಲೀಸರೊಂದಿಗೂ ಸಂಪರ್ಕದಲ್ಲಿದ್ದೇವೆ’ ಎಂದು ಪೊಲೀಸ್‌ ಮಹಾನಿರ್ದೇಶಕ (ಡಿಜಿಪಿ) ಬಿ.ಎಸ್‌.ಸಂಧು ಹೇಳಿದರು.

ಹನಿಪ್ರೀತ್‌ ಪತ್ತೆಗಾಗಿ, ಬಂಧನಕ್ಕೊಳಗಾಗಿರುವ ಡೇರಾ ಅನುಯಾಯಿಗಳಾದ ದಿಲಾವರ್‌ ಇನ್ಸಾನ್‌ ಹಾಗೂ ಪ್ರದೀಪ್‌ ಗೋಯಲ್‌ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಪಂಚಕುಲಾ ಮತ್ತು ಇತರ ಕಡೆಗಳಲ್ಲಿ ನಡೆದ ಹಿಂಸಾಚಾರ ಹಾಗೂ ಹನಿಪ್ರೀತ್‌ ನಾಪತ್ತೆಗೆ ಸಂಬಂಧಿಸಿದಂತೆ ಹರಿಯಾಣದ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಸೋಮವಾರ ಡೇರಾ ಸಚ್ಚಾ ಸೌದಾದ ಅಧ್ಯಕ್ಷೆ ವಿಪಶ್ಯನಾ ಇನ್ಸಾನ್‌ ಅವರ ವಿಚಾರಣೆ ನಡೆಸಿದ್ದರು.

ಹನಿಪ್ರೀತ್‌ ಪತ್ತೆಹಚ್ಚುವುದಕ್ಕಾಗಿ ಪೊಲೀಸರು ಮತ್ತೊಬ್ಬ ಆರೋಪಿ ಸುರಿಂದರ್‌ ಧಿಮಾನ್‌ ಇನ್ಸಾನ್‌ನನ್ನು ಸಹ ವಿಚಾರಣೆಗೆ ಒಳಪಡಿಸಿದ್ದಾರೆ. ಹನಿಪ್ರೀತ್‌ ಹಾಗೂ ಆದಿತ್ಯ ಇನ್ಸಾನ್‌ ವಿರುದ್ಧ ಪೊಲೀಸರು ಈಗಾಗಲೇ ‘ಲುಕ್‌ಔಟ್‌’ ನೋಟಿಸ್‌ ಜಾರಿ ಮಾಡಿದ್ದಾರೆ.

ಹನಿಪ್ರೀತ್‌ಗಾಗಿ ಭಾರತ–ನೇಪಾಳ ಗಡಿಯಲ್ಲಿ ಹುಡುಕಾಟ
ಲಖನೌ: ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ನ ದತ್ತು ಪುತ್ರಿ ಎಂದು ಹೇಳಲಾದ ಹನಿಪ್ರೀತ್ ಸಿಂಗ್‌ ಇನ್ಸಾನ್‌ ನೇಪಾಳಲ್ಲಿದ್ದಾಳೆ ಎಂಬ ವರದಿಗಳ ಆಧಾರದಲ್ಲಿ ಭದ್ರತಾ ಪಡೆಗಳು ಭಾರತ–ನೇಪಾಳ ಗಡಿ ಭಾಗದಲ್ಲಿ ತೀವ್ರ ಹುಡುಕಾಟ ಆರಂಭಿಸಿವೆ.

ಉತ್ತರ ಪ್ರದೇಶದ ಗೋರಖಪುರ, ಮಹಾರಾಜ್‌ಗಂಜ್‌ ಸೇರಿದಂತೆ ಇತರ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಗಡಿ ದಾಟುವ ಪ್ರತಿ ವಾಹನ ಮತ್ತು ಪ್ರತಿ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ತಪಾಸಣೆಗೆ ಒಳಪಡಿಸುತ್ತಿದ್ದಾರೆ.

ಡೇರಾದ ಇತರ ಅನುಯಾಯಿಗಳು ಕೂಡ ನೇಪಾಳಕ್ಕೆ ಪಲಾಯಾನ ಮಾಡಲು ಯತ್ನಿಸುವ ಸಾಧ್ಯತೆ ಇದೆ ಎಂದು ಮಹಾರಾಜ್‌ಗಂಜ್‌ ಜಿಲ್ಲೆಯ ಪೊಲೀಸರು ಹೇಳಿದ್ದಾರೆ.

ಹರಿಯಾಣ ಪೊಲೀಸರು ಬಿಡುಗಡೆ ಮಾಡಿರುವ ಕುಖ್ಯಾತ ಆರೋ‍ಪಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಹನಿಪ್ರೀತ್‌ ಸಿಂಗ್‌ ನೇ‍ಪಾಳದಲ್ಲಿ ಇರುವುದು ಪತ್ತೆಯಾಗಿದೆ ಎಂದು ಹೇಳಲಾಗಿದೆ. ಆದರೆ, ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿರುವ ಗಡಿ ಜಿಲ್ಲೆಗಳ ಪೊಲೀಸರು ಇದನ್ನು ದೃಢಪಡಿಸಿಲ್ಲ.

ನೇಪಾಳ ಗಡಿಗೆ ಸಂಪರ್ಕಿಸುವ ಎಲ್ಲ ರಸ್ತೆಗಳಲ್ಲೂ ಹನಿಪ್ರೀತ್‌ ಭಾವಚಿತ್ರಗಳನ್ನು ಅಂಟಿಸಲಾಗಿದೆ. ಗಡಿ ಪ್ರದೇಶದತ್ತ ಸಂಚರಿಸುವ ಬಸ್‌ಗಳಲ್ಲಿ ಪ್ರಯಾಣಿಸುವವರಿಗೂ ಚಿತ್ರಗಳು ಕಾಣಿಸುವಂತಿವೆ ಎಂದು ಪೊಲೀಸರು ಹೇಳಿದ್ದಾರೆ.

ಜೈಲಿನಲ್ಲಿ ತರಕಾರಿ ಬೆಳೆಯುತ್ತಿರುವ ರಾಮ್‌ ರಹೀಮ್
ಚಂಡೀಗಢ: ಡೇರಾ ಸಚ್ಚಾ ಸೌದಾ ಮುಖ್ಯಸ್ಥನಾಗಿದ್ದ ಸ್ವಯಂಘೋಷಿತ ದೇವಮಾನವ ಗುರ್ಮೀತ್ ರಾಮ್‌ ರಹೀಮ್‌ ಸಿಂಗ್ ಜೈಲಿನಲ್ಲಿ ದಿನಕ್ಕೆ 8 ತಾಸು ಕೆಲಸ ಮಾಡಲಿದ್ದಾನೆ.

ಗುರ್ಮೀತ್ ಮಾಡುವ ಕೃಷಿ ಕೆಲಸ ಕೌಶಲ್ಯರಹಿತ ವಿಭಾಗದಲ್ಲಿ ಬರುತ್ತದೆ. ಈ ಕೆಲಸಕ್ಕೆ ದಿನಕ್ಕೆ ₹20 ನೀಡಲಾಗುತ್ತದೆ.

ರೋಹ್ಟಕ್‌ನ ಸುನರಿಯಾ ಜೈಲಿನಲ್ಲಿರುವ ಗುರ್ಮೀತ್ ದಿನನಿತ್ಯ ತರಕಾರಿ ಬೆಳೆಯುವುದು, ಮರಗಳ ಕೊಂಬೆಗಳನ್ನು ಕತ್ತರಿಸುವ ಕೆಲಸ ಆರಂಭಿಸಿದ್ದಾನೆ. ಈತ ಬೆಳೆಯುವ ತರಕಾರಿಗಳನ್ನು ಜೈಲಿನ ಮೆಸ್‌ನಲ್ಲಿ ಬಳಸಲಾಗುವುದು ಎಂದು ಹರಿಯಾಣದ ಪೊಲೀಸ್‌ ವರಿಷ್ಠಾಧಿಕಾರಿ (ಕಾರಾಗೃಹ) ಕೆ.ಪಿ. ಸಿಂಗ್‌ ಅವರು ತಿಳಿಸಿದ್ದಾರೆ.

ಗುರ್ಮೀತ್‌ಗೆ ವಿಶೇಷ ಸೌಲಭ್ಯ ನೀಡಲಾಗುತ್ತಿದೆ ಎನ್ನುವ ವರದಿಯನ್ನು ಅವರು ನಿರಾಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.