ADVERTISEMENT

ಹಲ್ಲೆ ಆರೋಪ: ಎಎಪಿ ಶಾಸಕನ ಬಂಧನ

​ಪ್ರಜಾವಾಣಿ ವಾರ್ತೆ
Published 29 ಮೇ 2016, 19:30 IST
Last Updated 29 ಮೇ 2016, 19:30 IST

ನವದೆಹಲಿ (ಪಿಟಿಐ): ತ್ಯಾಜ್ಯ ನಿರ್ವಹಣಾ ಸಂಸ್ಥೆಯೊಂದರ ವ್ಯವಸ್ಥಾಪಕನ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಆಮ್‌ ಆದ್ಮಿ ಪಕ್ಷದ (ಎಎಪಿ) ಹರಿನಗರ ಶಾಸಕ ಜಗದೀಪ್‌ ಸಿಂಗ್‌ ಅವರನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ನಂತರ ಟ್ವೀಟ್‌ ಮಾಡಿದ ಸಿಂಗ್‌, ‘ಬಂಧಿಸಲಾಗಿದೆ ಎಂಬುದು ವದಂತಿ. ನಾನು ಮನೆಯಲ್ಲಿಯೇ ಇದ್ದೇನೆ’ ಎಂದು ಹೇಳಿದ್ದಾರೆ. ವಿವಿಧ ಪ್ರಕರಣಗಳಲ್ಲಿ ಈವರೆಗೆ ಎಎಪಿಯ ಏಳು ಶಾಸಕರು ಬಂಧನಕ್ಕೆ ಒಳಗಾಗಿದ್ದಾರೆ.

ಹರಿನಗರ ಪ್ರದೇಶದ ತ್ಯಾಜ್ಯ ವಿಲೇವಾರಿ ಗುತ್ತಿಗೆ ಪಡೆದಿರುವ ಸಂಸ್ಥೆಯ ವ್ಯವಸ್ಥಾಪಕ ಮೋಹಿತ್‌ ಅವರನ್ನು 21ರಂದು ಸಂಪರ್ಕಿಸಿದ್ದ ಸ್ಥಳೀಯರು ಮುಸ್ಲಿಮರ ಹಬ್ಬದ (ಶಬ್‌–ಎ–ಬರಾತ್‌) ಸಂಭ್ರಮಾಚರಣೆಗೆ ಲಾರಿಯೊಂದನ್ನು ನೀಡುವಂತೆ ಕೋರಿದ್ದರು. ಆದರೆ ಲಾರಿ ನೀಡಲು ಮೋಹಿತ್‌ ನಿರಾಕರಿಸಿದ್ದರು.

ಬಳಿಕ ಜನರು ಬಲವಂತವಾಗಿ ಲಾರಿಯನ್ನು ತೆಗೆದುಕೊಂಡು ಹೋಗಿದ್ದರು. ಆಗ ಸ್ಥಳೀಯರು ಮತ್ತು ಸಂಸ್ಥೆಯ ಸಿಬ್ಬಂದಿ ನಡುವೆ ವಾಗ್ವಾದ ಉಂಟಾಗಿತ್ತು. ಮಧ್ಯಪ್ರವೇಶಿಸಿದ್ದ  ಸಿಂಗ್‌ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮೋಹಿತ್‌ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.