ADVERTISEMENT

ಹಿಂದೂ, ಮುಸ್ಲಿಂ ಒಗ್ಗಟ್ಟು ಪ್ರಧಾನಿ ಮೋದಿ ಕಿವಿಮಾತು

ದಾದ್ರಿ ಹತ್ಯೆ ಘಟನೆ: ಮೊದಲ ಬಾರಿ ನರೇಂದ್ರ ಮೋದಿ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2015, 19:30 IST
Last Updated 8 ಅಕ್ಟೋಬರ್ 2015, 19:30 IST

ನವಾಡ / ಬಿಹಾರ, (ಪಿಟಿಐ): ‘ದೇಶ ಒಗ್ಗಟ್ಟಿನಿಂದ ಇರಬೇಕು. ಬಡತನ ಎನ್ನುವ ಶತ್ರುವಿನ ವಿರುದ್ಧ ಹೋರಾಡುವುದಕ್ಕೆ ಹಿಂದೂ ಹಾಗೂ ಮುಸ್ಲಿಮರು ಒಟ್ಟಾಗಿ ಶ್ರಮಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಇಲ್ಲಿ ಅಭಿಪ್ರಾಯಪಟ್ಟರು.

ದಾದ್ರಿ ಘಟನೆ ಬಳಿಕ ಇದೇ ಮೊದಲ ಬಾರಿ ಪ್ರತಿಕ್ರಿಯೆ ನೀಡಿರುವ ಪ್ರಧಾನಿ, ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಬುಧವಾರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಆಡಿದ ಮಾತುಗಳನ್ನು ಉಲ್ಲೇಖಿಸಿ, ದೇಶವಾಸಿಗಳು ರಾಷ್ಟ್ರಪತಿಗಳ ಸಂದೇಶವನ್ನೂ ಪಾಲಿಸಬೇಕು ಎಂದಿದ್ದಾರೆ.

ಇಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಮುಸ್ಲಿಮರ ವಿರುದ್ಧ ಹೋರಾಡಬೇಕೋ ಅಥವಾ ಬಡತನದ ವಿರುದ್ಧವೋ ಎನ್ನುವುದನ್ನು ಹಿಂದೂಗಳು ನಿರ್ಧರಿಸಬೇಕು. ಮುಸ್ಲಿಮರಿಗೂ ಇದೇ ಮಾತು ಅನ್ವಯಿಸುತ್ತದೆ. ಇಬ್ಬರೂ ಸೇರಿಕೊಂಡು ಬಡತನದ ವಿರುದ್ಧ ಹೋರಾಡಬೇಕಿದೆ. ಒಗ್ಗಟ್ಟು, ಕೋಮು ಸಾಮರಸ್ಯ, ಸಹೋದರತ್ವ ಹಾಗೂ ಶಾಂತಿಯಿಂದ ದೇಶದ ಮುನ್ನಡೆ ಸಾಧ್ಯ’ ಎಂದರು.

ದೊಡ್ಡ ದಿಕ್ಸೂಚಿ: ರಾಷ್ಟ್ರಪತಿ ಬುಧವಾರ ನೀಡಿದ ಸಂದೇಶ ಉಲ್ಲೇಖಿಸುತ್ತಾ, ‘ಇದಕ್ಕಿಂತ ದೊಡ ಸಂದೇಶ, ದೊಡ್ಡ ಮಾರ್ಗಸೂಚಿ, ದೊಡ್ಡ ದಿಕ್ಸೂಚಿ ಬೇರೊಂದಿಲ್ಲ. ಈ ದಿಕ್ಕಿನಲ್ಲಿಯೇ ನಡೆದರೆ  ವಿಶ್ವದ ನಿರೀಕ್ಷೆಗಳನ್ನು ಭಾರತ ಈಡೇರಿಸಬಹುದು’ ಎಂದರು. ಗೋಮಾಂಸ ಸೇವನೆ ಕುರಿತಂತೆ ಎದ್ದಿರುವ ರಾಜಕೀಯ ವಿವಾದದ ಬಗ್ಗೆ ಪ್ರಧಾನಿ ತಮ್ಮ ಭಾಷಣದಲ್ಲಿ ಎಲ್ಲಿಯೂ ಪ್ರಸ್ತಾಪಿಸಲಿಲ್ಲ.

ಗಮನಕೊಡಬೇಡಿ: ‘ಸಣ್ಣ ಪುಟ್ಟ ರಾಜಕಾರಣಿಗಳು ಬೇಜವಾಬ್ದಾರಿಯುತ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆಲ್ಲ ಕಿವಿಗೊಡಬೇಡಿ. ಇವು ಕೊನೆಗೊಳ್ಳಬೇಕು. ಒಂದು ವೇಳೆ ನರೇಂದ್ರ ಮೋದಿ ಇಂತಹ ಹೇಳಿಕೆ ನೀಡಿದರೂ ಸೊಪ್ಪು ಹಾಕಬೇಡಿ’ ಎಂದು  ಪ್ರಧಾನಿ ನುಡಿದರು. ಬಿಜೆಪಿ ಸಚಿವರಾದ ಮಹೇಶ್‌ ಶರ್ಮ, ಸಂಜೀವ್‌ ಬಲ್ಯಾನ್‌ ಹಾಗೂ ಇತರ ಮುಖಂಡರಾದ ಸಾಕ್ಷಿ ಮಹಾರಾಜ್‌, ಯೋಗಿ ಆದಿತ್ಯನಾಥ್‌, ಸಂಗೀತ್‌ ಸೋಮ್‌, ಸಮಾಜವಾದಿ ಪಕ್ಷದ ಅಜಂ ಖಾನ್‌, ಎಐಎಂಐಎಂ ಮುಖಂಡ ಅಸಾದುದ್ದೀನ್‌ ಓವೈಸಿ ಮತ್ತಿತರರು ವಿವಾದಿತ ಹೇಳಿಕೆ ನೀಡಿದ ಬೆನ್ನಲ್ಲಿಯೇ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ.

‘ಪ್ರಧಾನಿ ದಾದ್ರಿ ಘಟನೆ ಖಂಡಿಸಿಲ್ಲ’: ದಾದ್ರಿ ಘಟನೆ ಕುರಿತಂತೆ ಪರೋಕ್ಷವಾಗಿ ಮೋದಿ ಅವರು ಮೌನ ಮುರಿದರೂ, ಅವರು ನಿಜವಾದ ವಿಚಾರ ಮರೆಮಾಚಿದ್ದಾರೆ ಮತ್ತು ಘಟನೆಯನ್ನು ಖಂಡಿಸಿಲ್ಲ ಎಂದು ಕಾಂಗ್ರೆಸ್‌ ತಿರುಗೇಟು ನೀಡಿದೆ. ‘ಮೋದಿ ದಾದ್ರಿ ಘಟನೆಯನ್ನು ಖಂಡಿಸಿಲ್ಲ ’ ಎಂದು ಕಾಂಗ್ರೆಸ್‌ ವಕ್ತಾರ ಆರ್‌.ಪಿ.ಎನ್‌.ಸಿಂಗ್‌ ಹೇಳಿದ್ದಾರೆ.

ಕೋಮುಬಣ್ಣ : ‘ಮೋದಿ ಬಿಹಾರ ಚುನಾವಣೆಗೆ ಕೋಮುಬಣ್ಣ ಬಳಿಯಲು ಯತ್ನಿಸುತ್ತಿದ್ದಾರೆ’ ಎಂದು ಜೆಡಿಯು ನಾಯಕ ನಿತೀಶ್‌ ಕುಮಾರ್‌ ಆರೋಪಿಸಿದ್ದಾರೆ. ‘ಮೋದಿ ಒಳಗಿನ ನಿಜವಾದ ವ್ಯಕ್ತಿ ಈಗ ಅನಾವರಣಗೊಳ್ಳುತ್ತಿದ್ದಾನೆ’ ಎಂದು ಟ್ವೀಟ್ ಮಾಡಿದ ನಿತೀಶ್‌, ದಾದ್ರಿ ಹತ್ಯೆಯನ್ನು ಅವರು ಖಂಡಿಸುವ ಧೈರ್ಯ ಮಾಡಬೇಕು ಎಂದು ಸವಾಲು ಹಾಕಿದ್ದಾರೆ. ಗುಜರಾತ್ ಕೋಮುಗಲಭೆ ವೇಳೆ ಅಟಲ್ ಬಿಹಾರಿ ವಾಜಪೇಯಿ ‘ರಾಜಧರ್ಮ’ ಪಾಲಿಸುವಂತೆ ಮೋದಿ ಅವರಿಗೆ ಬುದ್ಧಿಮಾತು ಹೇಳಿದ್ದು ಯಾಕೆ? ಎಂದು ಪ್ರಶ್ನಿಸಿದ್ದಾರೆ.

‘ಲಾಲು ಪ್ರಸಾದ್‌ ಸೈತಾನ್‌’
ಮುಂಗೇರ್/ಬೆಗುಸರಾಯಿ/ ಪಟ್ನಾ  (ಪಿಟಿಐ): ಹಿಂದುಗಳೂ ಗೋಮಾಂಸ ಸೇವಿಸುತ್ತಾರೆ ಎನ್ನುವ ಮೂಲಕ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌  ಗೋ ಸಂರಕ್ಷಕರು ಮತ್ತು ಕೃಷ್ಣನ ವಂಶಸ್ಥರಾದ ‘ಯದುವಂಶಿ’ಯರಿಗೆ (ಯಾದವರಿಗೆ) ಹಾಗೂ ಬಿಹಾರ ಜನರಿಗೆ ಅಪಮಾನ  ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.

ಲಾಲು ನಾಲಿಗೆ ಮೇಲೆ ‘ಸೈತಾನ’ ನೆಲೆಸಿದ್ದಾನೆ. ಅದರ ಪ್ರಭಾವದಿಂದ ಅವರು ಇಂಥ ಹೇಳಿಕೆ ನೀಡುತ್ತಿದ್ದಾರೆ ಎಂದು ಪ್ರಧಾನಿ ಲೇವಡಿ ಮಾಡಿದರು. ಬಿಹಾರದಲ್ಲಿ ಗುರುವಾರ ಸರಣಿ ಪ್ರಚಾರ ಸಭೆಗಳಲ್ಲಿ ಮಾತನಾಡಿದ ಅವರು, ‘ಇಲ್ಲಿಯವರೆಗೆ ಮನುಷ್ಯರೊಂದಿಗೆ ಹೋರಾಡುತ್ತಿದ್ದ ನಾವು ಈಗ ಸೈತಾನರೊಂದಿಗೆ ಹೋರಾಡಬೇಕಾಗಿದೆ’ ಎಂದು ಲಾಲು ವಿರುದ್ಧ ವಾಗ್ದಾಳಿ ನಡೆಸಿದರು.

ಲಾಲು ತಿರುಗೇಟು: ಹಿಂದುಗಳು ಗೋಮಾಂಸ ತಿನ್ನುತ್ತಾರೆ ಎಂಬ ತಮ್ಮ ಹೇಳಿಕೆ ಹೇಗೆ ‘ಸೈತಾನ’ನಿಗೆ ಹೋಲಿಕೆಯಾಗುತ್ತದೆ ಎಂದು ಮೋದಿ ಮೊದಲು ತೋರಿಸಲಿ ಎಂದು ಲಾಲು ಪ್ರಸಾದ್‌ ಪ್ರಧಾನಿಗೆ ಸವಾಲು ಹಾಕಿದ್ದಾರೆ. ಇಲ್ಲವೇ ಪ್ರಧಾನಿ ಬಿಹಾರ ಜನರ ಬಹಿರಂಗ ಕ್ಷಮೆ ಯಾಚಿಸಲಿ ಎಂದು ಅವರು ತಾಕೀತು ಮಾಡಿದ್ದಾರೆ.
*
ಸಣ್ಣ ಪುಟ್ಟ ರಾಜಕಾರಣಿಗಳು ನೀಡುವ ಬೇಜವಾಬ್ದಾರಿಯುತ ಹೇಳಿಕೆಗಳಿಗೆ ಸೊಪ್ಪು ಹಾಕಬೇಡಿ.  ರಾಷ್ಟ್ರಪತಿ ನೀಡಿರುವ ಸಂದೇಶಕ್ಕೆ ಕಿವಿಗೊಡಿ
ನರೇಂದ್ರ ಮೋದಿ
*

ಮುಖ್ಯಾಂಶಗಳು
* ಒಗ್ಗಟ್ಟು, ಶಾಂತಿ, ಕೋಮುಸಾಮರಸ್ಯ ದಿಂದ ದೇಶದ ಮುನ್ನಡೆ
* ಹಿಂದೂಗಳು, ಮುಸ್ಲಿಮರು ಬಡತನದ ವಿರುದ್ಧ ಹೋರಾಡಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT