ADVERTISEMENT

ಹಿಂಸೆ ಮುಕ್ತ ಸಮಾಜ: ಪ್ರಣವ್ ಪ್ರತಿಪಾದನೆ

ಅಧಿಕಾರಾವಧಿಯ ಕೊನೆಯ ದಿನ ದೇಶಕ್ಕೆ ಅಹಿಂಸೆಯ ಸಂದೇಶ lಎಲ್ಲರನ್ನೂ ಒಳಗೊಂಡ ಪ್ರಗತಿಗೆ ಕರೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2017, 19:15 IST
Last Updated 24 ಜುಲೈ 2017, 19:15 IST
ಪ್ರಣವ್ ಮುಖರ್ಜಿ
ಪ್ರಣವ್ ಮುಖರ್ಜಿ   

ನವದೆಹಲಿ:  ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಎಲ್ಲ ವರ್ಗದ ಜನರು ಭಾಗಿಯಾಗಬೇಕಾದರೆ  ಹಿಂಸೆಯಿಂದ ಮುಕ್ತವಾದ ಸಮಾಜ ಅತ್ಯಗತ್ಯ ಎಂದು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಪ್ರತಿಪಾದಿಸಿದ್ದಾರೆ.

ಆದರೆ, ದಿನ ಕಳೆದಂತೆ ಹಿಂಸಾಚಾರ ಹೆಚ್ಚುತ್ತಿದೆ ಎಂಬ ಬಗ್ಗೆ ಅವರು ವಿಷಾದ ವ್ಯಕ್ತಪಡಿಸಿದರು. ತಮ್ಮ ಅಧಿಕಾರಾವಧಿಯ ಕೊನೆಯ ದಿನ ದೇಶವನ್ನು ಉದ್ದೇಶಿಸಿ ಅವರು ಭಾಷಣ ಮಾಡಿದರು.

ಹಣ ಗಳಿಕೆಯ ಅವಕಾಶ ಎಲ್ಲರಿಗೂ ಸಮಾನವಾಗಿ ದೊರೆಯಬೇಕು ಎಂಬುದು ನೀತಿ ನಿರೂಪಕರ ಗಮನದಲ್ಲಿ ಸದಾ ಇರಬೇಕು. ಪ್ರಗತಿ ನೀತಿಯ ಫಲಗಳು ಸರತಿ ಸಾಲಿನ ಕೊನೆಯ ವ್ಯಕ್ತಿಗೂ ತಲುಪುವಂತೆ ನೋಡಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ADVERTISEMENT

ತಮ್ಮ ಐದು ವರ್ಷಗಳ ಅಧಿಕಾರಾವಧಿಯನ್ನು ಪ್ರಣವ್‌ ನೆನಪಿಸಿಕೊಂಡರು. ಇತಿಹಾಸದ ವಿಮರ್ಶಾತ್ಮಕ ದೃಷ್ಟಿ ತಮ್ಮ ಸಾಧನೆಯನ್ನು ಅಳೆಯಲಿದೆ ಎಂದರು.

ಜವಾಬ್ದಾರಿ ಬಗ್ಗೆ  ತಮಗೆ ಸದಾ ಎಚ್ಚರ ಇತ್ತು. ಜನರ ಜತೆಗಿನ ಒಡನಾಟ ಮತ್ತು ದೇಶದಾದ್ಯಂತ ನಡೆಸಿದ ಪ್ರವಾಸಗಳಿಂದ ಬಹಳಷ್ಟು ಕಲಿಕೆ ಸಾಧ್ಯವಾಯಿತು ಎಂದು ಅವರು ತಿಳಿಸಿದರು.

ಕಳೆದ 50 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಸಂವಿಧಾನವೇ ತಮ್ಮ ಪವಿತ್ರ ಗ್ರಂಥವಾಗಿತ್ತು. ಸಂಸತ್ತು ದೇವಾಲಯವಾಗಿತ್ತು ಮತ್ತು ಜನ ಸೇವೆಯೇ ಧ್ಯೇಯವಾಗಿತ್ತು ಎಂದು ಹೇಳಿದರು.

ತಮ್ಮ ನೆಚ್ಚಿನ ಕ್ಷೇತ್ರವಾದ ಶಿಕ್ಷಣದ ಬಗ್ಗೆಯೂ ಪ್ರಣವ್ ಮಾತನಾಡಿದರು. ಶಿಕ್ಷಣ ಭಾರತವನ್ನು ಸುವರ್ಣಯುಗಕ್ಕೆ ಒಯ್ಯಲಿದೆ. ಶಿಕ್ಷಣ ಸಂಸ್ಥೆಗಳನ್ನು ಜಾಗತಿಕ ಮಟ್ಟಕ್ಕೆ ಏರಿಸಬೇಕಿದೆ ಎಂದು ಹೇಳಿದರು.ಪರಿಸರದ ರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು. ಭವಿಷ್ಯ ನಮಗೆ ಇನ್ನೊಂದು ಅವಕಾಶ ನೀಡುವುದಿಲ್ಲ ಎಂದು ಅವರು ಎಚ್ಚರಿಸಿದರು.

***

ಇಂದಿನಿಂದ ಕೋವಿಂದ್‌ ಮೊದಲ ಪ್ರಜೆ

ನವದೆಹಲಿ: ದೇಶದ 14ನೇ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ್‌ ಅವರು ಮಂಗಳವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಸಂಸತ್‌ ಭವನದ ಸೆಂಟ್ರಲ್‌ ಹಾಲ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಜೆ.ಎಸ್‌. ಖೇಹರ್‌ ಅವರು ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ.

ಸಮಾರಂಭ ಮಧ್ಯಾಹ್ನ 12.15ಕ್ಕೆ ಆರಂಭವಾಗಲಿದೆ. ಇದಕ್ಕೂ ಮೊದಲು ಕೋವಿಂದ್‌ ಅವರು ನಿರ್ಗಮಿತ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರೊಂದಿಗೆ ರಾಷ್ಟ್ರಪತಿ ಭವನದಿಂದ ಮೆರವಣಿಗೆಯಲ್ಲಿ ಸಂಸತ್‌ ಭವನಕ್ಕೆ ಬರಲಿದ್ದಾರೆ.

ರಾಷ್ಟ್ರಪತಿ ಹುದ್ದೆಗೆ ಏರುವುದಕ್ಕೂ ಮುನ್ನ ಕೋವಿಂದ್‌ ಅವರು ಮಹಾತ್ಮ ಗಾಂಧೀಜಿ ಅವರ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸುವ ನಿರೀಕ್ಷೆ ಇದೆ.

* ಕೋವಿಂದ್‌ ಅವರು ಮೊದಲಿಗೆ ರಾಷ್ಟ್ರಪತಿ ಭವನಕ್ಕೆ ತೆರಳಿ, ಅಲ್ಲಿಂದ ಮುಖರ್ಜಿ ಅವರ ಜತೆ ಬೆಂಗಾವಲು ಪಡೆಯೊಂದಿಗೆ  ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಗಮನ. ಇಬ್ಬರೂ ಒಂದೇ ಕಾರಲ್ಲಿ ಪ್ರಯಾಣ
* ಸಂಸತ್‌ ಭವನದಲ್ಲಿ ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಸಭಾಪತಿ ಮತ್ತು ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್‌ ಅವರಿಂದ ಇಬ್ಬರಿಗೂ ಸ್ವಾಗತ.
* ಕೋವಿಂದ್‌ ಪ್ರಮಾಣ ವಚನ ಸ್ವೀಕರಿಸಿದ ನಂತರ 21 ಸುತ್ತು ಗುಂಡು ಹಾರಿಸಿ ಅವರಿಗೆ ಗೌರವ ವಂದನೆ ಸಲ್ಲಿಕೆ
* ಹೊಸ ರಾಷ್ಟ್ರಪತಿಯಿಂದ ಭಾಷಣ
* ಸಮಾರಂಭದ ಬಳಿಕ, ರಾಷ್ಟ್ರಪತಿ ಭವನಕ್ಕೆ ತೆರಳಲಿರುವ ಕೋವಿಂದ್‌ ಅವರಿಗೆ ಆಂತರಿಕ ಸಿಬ್ಬಂದಿಯಿಂದ ಗೌರವ ವಂದನೆ
* ನಿರ್ಗಮಿತ ರಾಷ್ಟ್ರಪತಿಗೂ ವಂದನೆ ಸಲ್ಲಿಸುವ ಕಾರ್ಯಕ್ರಮ
* ರಾಜಾಜಿ ಮಾರ್ಗದಲ್ಲಿರುವ ಹೊಸ ನಿವಾಸಕ್ಕೆ (ಮನೆ ಸಂಖ್ಯೆ 10) ಬರಲಿರುವ ಮುಖರ್ಜಿ

***

ರಾಷ್ಟ್ರಪತಿ ಹೇಳಿದ್ದೇನು...

* ನಾಳೆ ನಾನು ನಿಮ್ಮೊಂದಿಗೆ ಮಾತನಾಡುವಾಗ ರಾಷ್ಟ್ರಪತಿ ಅಲ್ಲ, ನಿಮ್ಮ ಹಾಗೆಯೇ ಒಬ್ಬ ಪ್ರಜೆ. ಪ್ರಗತಿಯೆಡೆಗಿನ ಭಾರತದ ಯಾತ್ರೆಯಲ್ಲಿ ಸಹಭಾಗಿ
* ಹೊಸ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಗೆ ಅಭಿನಂದನೆ ಮತ್ತು ಸ್ವಾಗತ. ಅವರಿಗೆ ಯಶಸ್ಸನ್ನು ಹಾರೈಸುತ್ತೇನೆ
* ಬಹುಸಂಸ್ಕೃತಿ, ಬಹುಭಾಷೆ ಮತ್ತು ಬಹು ಧರ್ಮಗಳೇ ಈ ದೇಶವನ್ನು ವಿಶಿಷ್ಟವಾಗಿಸಿವೆ
* ಸಾರ್ವಜನಿಕ ಸಂವಾದದಲ್ಲಿ ವಿವಿಧ ಅಭಿಪ್ರಾಯಗಳಿರುತ್ತವೆ. ನಾವು ವಾಗ್ವಾದ ನಡೆಸಬಹುದು,  ಇನ್ನೊಬ್ಬರ ವಾದವನ್ನು ನಾವು ಒಪ್ಪಬಹುದು ಅಥವಾ ಒಪ್ಪದಿರಬಹುದು. ಆದರೆ ಇನ್ನೊಬ್ಬರಿಗೆ ಅಭಿಪ್ರಾಯವೇ ಇರಬಾರದು ಎಂದು ಹೇಳಬಾರದು
* ಹಿಂಸೆಯ ಆಳದಲ್ಲಿ ಇರುವುದು ಕತ್ತಲೆ, ಭೀತಿ ಮತ್ತು ಅಪನಂಬಿಕೆ. ನಮ್ಮ ಸಾರ್ವಜನಿಕ ಸಂವಾದ ದೈಹಿಕ ಮತ್ತು ಮೌಖಿಕವಾದ ಎಲ್ಲ ಹಿಂಸೆಗಳಿಂದ ಮುಕ್ತವಾಗಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.