ADVERTISEMENT

ಹೂಡಾ ವಿರುದ್ಧ ಕ್ರಮಕ್ಕೆ ಪ್ರಧಾನಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2014, 13:35 IST
Last Updated 6 ಅಕ್ಟೋಬರ್ 2014, 13:35 IST

ಹರಿಯಾಣ(ಪಿಟಿಐ): ರಾಬರ್ಟ್‌ ವಾಧ್ರಾ ಮತ್ತು ಡಿಎಲ್‌ಎಫ್‌ ಕಂಪೆನಿ ಜತೆಗಿನ ಭೂವ್ಯವಹಾರಕ್ಕೆ ಸಂಬಂಧಿಸಿದಂತೆ  ಹರಿಯಾಣದ ಮುಖ್ಯಮಂತ್ರಿ ಭೂಪಿಂದರ್ ಸಿಂಗ್‌ ಹೂಡಾ ಅವರ ವಿರುದ್ಧ ಕಠಿಣ  ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.

ಅ.15ರಂದು ನಡೆಯಲಿರುವ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲು ಅನುಭವಿಸುವುದು ನಿಶ್ಚಿತ. ಇದನ್ನು ಅರಿತ ಹೂಡಾ ಅವರು ತರಾತುರಿಯಲ್ಲಿ ಈ  ಭೂವ್ಯವಹಾರಗಳನ್ನು ಇತ್ಯರ್ಥ ಪಡಿಸಿದ್ದಾರೆ ಎಂದು ಅವರು ಸೋಮವಾರ ಇಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿದರು.

ಚುನಾವಣೆ ಪೂರ್ವದಲ್ಲೇ ಭೂ ವ್ಯವಹಾರ ಇತ್ಯರ್ಥ ಪಡಿಸುವಂತೆ ಕಾಂಗ್ರೆಸ್‌ ಹೈಕಮಾಂಡ್‌ ಹೂಡಾ ಮೇಲೆ  ಒತ್ತಡ ಹೇರಿರಬೇಕು ಎಂದು ಪ್ರಧಾನಿ ಅಭಿಪ್ರಾಯಪಟ್ಟರು. ಒಂದು ವೇಳೆ ಈ ವ್ಯವಹಾರದಲ್ಲಿ ಚನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಯೋಗವನ್ನು ಆಗ್ರಹಿಸಿದರು.

ಜೈಲಿನಿಂದಲೇ ಕೆಲವರು ಹರಿಯಾಣದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಕನಸು ಕಾಣುತ್ತಿದ್ದಾರೆ ಎಂದು ಅವರು, ಪರೋಕ್ಷವಾಗಿ ಹರಿಯಾಣದ ಮಾಜಿ ಮುಖ್ಯಮಂತ್ರಿ  ಹಾಗೂ ಐಎನ್‌ಎಲ್‌ಡಿ ನಾಯಕ ಓಂ ಪ್ರಕಾಶ್‌ ಚೌಟಾಲಾ ಅವರನ್ನು ಟೀಕಿಸಿದರು.

ಕುಟುಂಬ ರಾಜಕೀಯದಿಂದಾಗಿ ಹರಿಯಾಣ ನಾಶವಾಗಿದೆ. ಸರ್ಕಾರದಲ್ಲಿರುವವರು ‘ಕೌನ್‌ ಬನೇಗ ಅರಬ್‌ಪತಿ’ ಎಂಬ ಆಟ ಆಡುತ್ತಿದ್ದಾರೆ ಎಂದು ಅವರು ಹೂಡಾ ಸರ್ಕಾರವನ್ನು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT