ADVERTISEMENT

ಹೃತಿಕ್‌ರೋಶನ್‌–ಸುಸಾನೆ ವಿಚ್ಛೇದನ

14 ವರ್ಷದ ದಾಂಪತ್ಯಕ್ಕೆ ಇತಿಶ್ರೀ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2014, 19:30 IST
Last Updated 1 ನವೆಂಬರ್ 2014, 19:30 IST

ಮುಂಬೈ (ಪಿಟಿಐ): ಬಾಲಿವುಡ್‌ನ ತಾರಾ ದಂಪತಿ ಹೃತಿಕ್‌ ರೋಶನ್‌ ಮತ್ತು ಸುಸಾನೆ ಖಾನ್‌ ಅವರ 14 ವರ್ಷಗಳ ದಾಂಪತ್ಯ ಕೊನೆಗೂ ಮುರಿದುಬಿದ್ದಿದೆ. ವಿವಾಹ ವಿಚ್ಛೇದನ ಕೋರಿ ವರ್ಷದ ಹಿಂದೆ ದಂಪತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸ್ಥಳೀಯ ಕೌಟುಂಬಿಕ ನ್ಯಾಯಾಲಯ ಶನಿವಾರ ವಿಚ್ಛೇದನದ ತೀರ್ಪು ನೀಡಿತು.

‘ಪರಸ್ಪರ ಒಪ್ಪಿಗೆಯ ಮೇರೆಗೆ ಅವರಿಗೆ ಕೋರ್ಟ್‌ ವಿಚ್ಛೇದನ ನೀಡಿದೆ’ ಎಂದು ಹೃತಿಕ್‌ ರೋಷನ್‌ ಪರ ವಕೀಲೆ ಮೃಣಾಲಿನಿ ದೇಶಮುಖ್‌ ತಿಳಿಸಿದರು. ಬಾಲ್ಯಸ್ನೇಹಿತರಾಗಿದ್ದ ಹೃತಿಕ್‌ ಮತ್ತು ಸುಸಾನೆ 14 ವರ್ಷಗಳ ಹಿಂದೆ ಮದುವೆಯಾಗಿದ್ದರು. ಕೌಟುಂಬಿಕ ಭಿನ್ನಾಭಿಪ್ರಾಯಗಳ ಕಾರಣ ಕಳೆದ ಏಪ್ರಿಲ್‌ನಲ್ಲಿ ಕೋರ್ಟ್‌ಗೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ ಬಳಿಕ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.

ಸುಸಾನೆ ತಮ್ಮಿಂದ ದೂರವಾಗಲು ಬಯಸಿದ್ದಾರೆ ಎಂದು ಹೃತಿಕ್ ಹೇಳಿ ದರೆ, ‘ನಾವಿಬ್ಬರೂ ಪ್ರಬುದ್ಧ ವ್ಯಕ್ತಿಗಳು. ನಮ್ಮ ನಮ್ಮ ತೀರ್ಮಾ ನಗಳನ್ನು ತೆಗೆದುಕೊಂಡಿದ್ದೇವೆ. ನಾವು ಅದ್ಭುತವಾದ ಇಬ್ಬರು ಮಕ್ಕಳ ತಂದೆ ತಾಯಿ. ಅವರ ಜವಾಬ್ದಾರಿ ಹೊರುವ ಹೊಣೆಗಾರಿಕೆ ಯಥಾಸ್ಥಿತಿ ಮುಂದು ವರಿಯುತ್ತದೆ. ಅದನ್ನು ಯಾರೂ ಬದಲಾಯಿಸಲಾಗದು’ ಎಂದು ಸುಸಾನೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.