ADVERTISEMENT

ಹೇಳಿಕೆಗೆ ಬದ್ಧ ಎಂದ ಮುಖ್ಯಮಂತ್ರಿ ಮುಫ್ತಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2015, 13:20 IST
Last Updated 2 ಮಾರ್ಚ್ 2015, 13:20 IST

ಜಮ್ಮು (ಪಿಟಿಐ): ಜಮ್ಮು ಮತ್ತು ಕಾಶ್ಮೀರದ ಶಾಂತಿಯುತ ಚುನಾವಣೆಗೆ ಅವಕಾಶ ಕಲ್ಪಿಸಿದಕ್ಕಾಗಿ ಉಗ್ರರನ್ನು ಹೊಗಳಿದ್ದ ತಮ್ಮ ಹೇಳಿಕೆಗೆ ಈಗಲೂ ಬದ್ಧ ಎಂದು ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಅವರು ಸೋಮವಾರ ಸ್ಪಷ್ಟಪಡಿಸಿದ್ದಾರೆ.

ಅಲ್ಲದೇ, ಎದುರಾಳಿಗಳ ಟೀಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಅವರು, ‘ಸಾಸುವೆಯಷ್ಟು ಇರುವುದನ್ನು ಗುಡ್ಡದಷ್ಟು ಮಾಡಲು’ ಕೋಲಾಹಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

‘ಪಾಕಿಸ್ತಾನ, ಹುರಿಯತ್ ಬಗ್ಗೆ ನಾನು ಭಾನುವಾರ ಏನು ಹೇಳಿದ್ದೆನೋ ಅದಕ್ಕೆ ಬದ್ಧನಾಗಿರುವೆ. ಮತಪತ್ರ ಮಾತ್ರವೇ ಜನರ ಭವಿಷ್ಯ ನಿರ್ಧರಿಸಬಲ್ಲದೆ ಹೊರತು ಗುಂಡು ಅಥವಾ ಗ್ರೇನಡ್‌ಗಳಲ್ಲ ಎಂಬುದನ್ನು ಪಾಕಿಸ್ತಾನ ಹಾಗೂ ಹುರಿಯತ್ ಒಪ್ಪಿಕೊಂಡು ಮಾನ್ಯ ಮಾಡಿವೆ’ ಎಂದು ನುಡಿದಿದ್ದಾರೆ.

‘ಹಾಗೆಯೇ ಚುನಾವಣೆಯ ಅವಕಾಶವನ್ನು ನಮಗೆ ಕಲ್ಪಿಸಿದ್ದು ಭಾರತದ ಸಂವಿಧಾನ. ಜಮ್ಮು ಮತ್ತು ಕಾಶ್ಮೀರದ ಜನರು ಈ ಪ್ರಕ್ರಿಯೆಯಲ್ಲಿ ಹೆಚ್ಚು ನಂಬಿಕೆ ಇಟ್ಟಿದ್ದಾರೆ. ಹಿಂದಿನ ಚುನಾವಣೆಗಳಲ್ಲಿ ಮಾಡಿದಂತೆ ಅವರು (ಗಡಿಯಾಚೆಗಿನ ಜನರು ಹಾಗೂ ಹುರಿಯತ್) ಈ ಬಾರಿ ಹಸ್ತಕ್ಷೇಪ ಮಾಡಿರಲಿಲ್ಲ’ ಎಂದಿದ್ದಾರೆ.

ADVERTISEMENT

ತಮ್ಮ ಹೇಳಿಕೆಗೆ ವ್ಯಕ್ತವಾಗಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಮುಫ್ತಿ, ‘ಅವರು ಸಾಸುವೆಯಷ್ಟು ಇರುವುದನ್ನು ಬೆಟ್ಟದಷ್ಟು ಮಾಡಲು ಬಯಸುತ್ತಾರೆ. ನಾನು ಭಾನುವಾರ ಹೇಳಿದ್ದ ಸಕಾರಾತ್ಮಕ ಅಂಶಗಳನ್ನು ಎತ್ತಿ ಹೇಳಿಲ್ಲ. ಕೇವಲ ಮುಫ್ತಿ ಏನು ಹೇಳಿದರು ಎಂಬುದರ ಸುತ್ತವೇ ಗಮನ ಹರಿಸಲಾಗುತ್ತಿದೆ. ಮುಫ್ತಿ ಹೇಳಿದಿಷ್ಟೇ: ಭಾರತದ ಸಂವಿಧಾನದಿಂದ ಕಾಶ್ಮೀರಕ್ಕೆ ದೊರೆತಿರುವ ಪ್ರಜಾತಾಂತ್ರಿಕ ಹಕ್ಕು ಹಾಗೂ ಮತ ಪ್ರಕ್ರಿಯೆಯ ಮೂಲಕ ಸಿಕ್ಕಿರುವ ಬಲವನ್ನು ಅವರು ಮಾನ್ಯ ಮಾಡಿದ್ದಾರೆ’ ಎಂದು ಅವರು ವಿವರಿಸಿದ್ದಾರೆ.‌

‘ಅವರು ಸರ್ವವನ್ನೂ ಪ್ರಯತ್ನಿಸಿದ್ದಾರೆ. ಅವರು (ಗಡಿಯಾಚೆಗಿನ ಪಡೆಗಳು) ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಮಾನ್ಯ ಮಾಡಿದ್ದಾರೆ. ಈ ಬಗ್ಗೆ ಏನು ಹೇಳಿರುವೆನೋ ಅದಕ್ಕೆ ಬದ್ಧನಾಗಿರುವೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಹೇಳಿದ್ದರಲ್ಲಿ ತಪ್ಪೇನೂ ಇಲ್ಲ: ಮತ್ತೊಂದೆಡೆ, ತಮ್ಮ ತಂದೆಯ ಹೇಳಿಕೆಯನ್ನು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಸಮರ್ಥಿಸಿಕೊಂಡಿದ್ದಾರೆ.

‘ನಮ್ಮ ತಂದೆ ಹೇಳಿರುವುದರಲ್ಲಿ ತಪ್ಪೇನೂ ಇಲ್ಲ. ಲೋಕಸಭೆ ಚುನಾವಣೆಗೆ ಹೋಲಿಸಿದರೇ ವಿಧಾನಸಭೆ ಚುನಾವಣೆಯಲ್ಲಿ ಹಿಂಸಾಚಾರ ಕಡಿಮೆ ಇತ್ತು. ಅವರ ಹೇಳಿಕೆ ನಾನು ಬದ್ಧ’ ಎಂದು ಅವರು ನುಡಿದಿದ್ದಾರೆ.

ಅಲ್ಲದೇ, ‘ದೆಹಲಿಯಲ್ಲಿ ಫಾರೂಖ್ ಅವರು ಹೇಳುವಂತೆ, ಪಾಕಿಸ್ತಾನದ ಮೇಲೆ ಬಾಂಬ್ ಹಾಕಿ, ಹರಿಯತ್ ನಾಯಕರನ್ನು ಜೈಲಿಗಟ್ಟಿ ಎಂದು ನಮ್ಮ ತಂದೆ ಹೇಳುತ್ತಾರೆ ಎಂದು ಕೆಲವರು ನಿರೀಕ್ಷಿಸಿದ್ದರೇ ಅದು ತಪ್ಪು. ನಮ್ಮ ತಂದೆ ಅಂಥ ಭಾಷೆ ಬಳಸುವುದಿಲ್ಲ’ ಎಂದು ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.