ADVERTISEMENT

‘ಆತಂಕ ನಿವಾರಣೆಗೆ ನಿಗಾ ಅಗತ್ಯ’

ಪದ್ಮನಾಭಸ್ವಾಮಿ ಸಂಪತ್ತು ರಕ್ಷಣೆಯಲ್ಲಿ ಲೋಪ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2014, 19:30 IST
Last Updated 23 ಏಪ್ರಿಲ್ 2014, 19:30 IST

ನವದೆಹಲಿ (ಪಿಟಿಐ): ಕೇರಳದ ಶ್ರೀ ಪದ್ಮನಾಭಸ್ವಾಮಿ ದೇಗುಲದ ಆಡಳಿತ ನಿರ್ವಹಣೆ ಹಾಗೂ ಸಂಪತ್ತಿನ ರಕ್ಷಣೆಯಲ್ಲಿ ಭಾರಿ ಲೋಪವಾಗಿದೆ ಎಂದು ನ್ಯಾಯಾಲಯದ ಸಹಾಯಕ ಗೋಪಾಲ ಸುಬ್ರಮಣಿಯಮ್‌ ಎತ್ತಿದ ಆತಂಕಕ್ಕೆ ಸುಪ್ರೀಂಕೋರ್ಟ್‌ನಿಂದ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ.

‘ನಿಜಕ್ಕೂ ಇದೊಂದು ಗಂಭೀರ ವಿಷಯ. ತಕ್ಷಣವೇ ಈ ದಿಸೆಯಲ್ಲಿ ಗಮನಹರಿಸಿ ಪರಿಹಾರ ಕಂಡುಕೊಳ್ಳ­ಬೇಕಾ­ಗಿದೆ’ ಎಂದು ನ್ಯಾಯಮೂರ್ತಿ­ಗಳಾದ ಆರ್‌.ಎಂ.ಲೋಧಾ ಹಾಗೂ ಎ.ಕೆ.ಪಟ್ನಾಯಕ್‌  ಇದ್ದ ಪೀಠ ಬುಧವಾರ ಹೇಳಿದೆ.

ದೇಗುಲದ ದೈನಂದಿನ ವ್ಯವ ಹಾರದಲ್ಲಿ  ಈಗಿನ ಟ್ರಸ್ಟಿ ಹಾಗೂ ಅವರ ಕುಟುಂಬದ ಸದಸ್ಯರು ಮೂಗು ತೂರಿಸದಂತೆ ನಿರ್ದೇಶನ ನೀಡ ಬೇಕೆಂದು ಸುಬ್ರಮಣಿಯಮ್‌ ಕೋರಿಕೊಂಡಿದ್ದರು.

ದೇಗುಲದ ನೆಲಮಾಳಿಗೆಯ ಕೀಲಿ ಕೈಗಳನ್ನು ಜಿಲ್ಲಾ ನ್ಯಾಯಾಧೀಶರಿಂದ ನೇಮಕಗೊಂಡ ಅಧಿಕಾರಿಗೆ ಹಸ್ತಾಂತ­ರಿಸಬೇಕೆಂದೂ ಆಗ್ರಹಿಸಿದ್ದರು.

ಕೀಲಿ ಕೈ ಹಸ್ತಾಂತರ?: ಸುಬ್ರಮಣಿ­ಯಮ್‌ ಕೋರಿಕೆಯಂತೆ ಜಿಲ್ಲಾ ನ್ಯಾಯಾಧೀಶರಿಂದ ನೇಮಕಗೊಂಡ ಅಧಿಕಾರಿಗೆ ನೆಲಮಾಳಿಗೆ ಕೀಲಿ ಕೈಗಳನ್ನು  ಹಸ್ತಾಂತರಿಸುವ ಸುಳಿವನ್ನು ಕೋರ್ಟ್‌ ನೀಡಿದೆ.

ಅರ್ಜಿದಾರರಾದ ತಿರುವಾಂಕೂರು ರಾಜಮನೆತನ, ರಾಜ್ಯ ಸರ್ಕಾರದ ಹೇಳಿಕೆಗಳನ್ನು ದಾಖಲಿಸಿಕೊಂಡು ಗುರುವಾರ ಈ ಸಂಬಂಧ ಆದೇಶ ನೀಡಲಾಗುವುದು ಎಂದು ಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.