ADVERTISEMENT

‘ಉಕ್ಕಿನ ಮಹಿಳೆ’ ಆನಂದಿಬೆನ್‌ ಪಟೇಲ್‌

​ಪ್ರಜಾವಾಣಿ ವಾರ್ತೆ
Published 21 ಮೇ 2014, 19:30 IST
Last Updated 21 ಮೇ 2014, 19:30 IST

ಅಹಮದಾಬಾದ್‌: ಇದು ಸುಮಾರು ವರ್ಷ­ಗಳ ಹಿಂದಿನ ಕಥೆ. ಗುಜರಾತ್‌ನ ಪ್ರಖ್ಯಾತ ಸರ್ದಾರ್‌ ಸರೋವರಕ್ಕೆ ಪ್ರವಾಸಕ್ಕಾಗಿ ಬಂದಿದ್ದ ವಿದ್ಯಾರ್ಥಿನಿಯರಿಬ್ಬರು ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದರು. ತಕ್ಷಣ ದಡದಲ್ಲಿ ನಿಂತಿದ್ದ ಶಿಕ್ಷಕಿಯೊಬ್ಬರು ಹಿಂದುಮುಂದೆ ಯೋಚಿಸದೆ ಹರಿಯುತ್ತಿದ್ದ ನದಿಗೆ ಧುಮುಕಿದರು. ಕೊಚ್ಚಿ ಹೋಗುತ್ತಿದ್ದ ವಿದ್ಯಾರ್ಥಿನಿಯರನ್ನು ಪ್ರಾಣದ ಹಂಗು ತೊರೆದು ರಕ್ಷಿಸಿ ದಡಕ್ಕೆ ಎಳೆದು ತಂದು ರಕ್ಷಿಸಿದರು.

ವಿದ್ಯಾರ್ಥಿನಿಯರನ್ನು ರಕ್ಷಿಸಿದ ಶಿಕ್ಷಕಿಯ ಸಾಹಸ ರಾತ್ರಿ ಬೆಳಗಾಗುವುದರಲ್ಲಿ ಮನೆ­ಮಾತಾ­ಯಿತು. ಶಿಕ್ಷಕಿಯ ಧೈರ್ಯ ಮೆಚ್ಚಿದ ಬಿಜೆಪಿ ಮುಖಂಡರು ಆಕೆಯನ್ನು ಪಕ್ಷಕ್ಕೆ ಕರೆ ತಂದರು. ಈ ಘಟನೆ  ಶಿಕ್ಷಕಿಯ ಜೀವನದ ದಿಕ್ಕನ್ನೇ ಬದಲಿಸಿತು.

ಅಂದು  ಜೀವದ ಹಂಗು ತೊರೆದು ಬಾಲಕಿ­ಯರ ರಕ್ಷಿಸಿದ ಆ  ದಿಟ್ಟ ಶಿಕ್ಷಕಿ ಬೇರಾರು ಅಲ್ಲ...­ಗುಜರಾತ್‌ನ ನಿಯೋಜಿತ ಮುಖ್ಯಮಂತ್ರಿ ಆನಂದಿಬೆನ್‌ ಪಟೇಲ್‌!

ಹೌದು, ಅವರ ಜೀವನ ಇಂತಹ ಹಲವಾರು ರೋಚಕ ಕಥೆಗಳ ಸಂಗಮ. ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಹಾಗೂ ಆನಂದಿಬೆನ್‌ ಓದಿರುವುದು ಒಂದೇ ಶಾಲೆ­ಯಲ್ಲಿ. ಎನ್‌.ಎಂ. ಪ್ರೌಢಶಾಲೆಯ­ಲ್ಲಿಯೇ ಇಬ್ಬರೂ ಪ್ರೌಢಶಿಕ್ಷಣ ಪೂರೈಸಿದ್ದಾರೆ. 

ಉತ್ತರ ಗುಜರಾತ್‌ನ ವಿಜಾಪುರ್‌ ಜಿಲ್ಲೆಯ ಖರೋಡ್‌ ಗ್ರಾಮದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ (21–11–1941) ಆನಂದಿಬೆನ್‌ ಬಾಲ್ಯದಿಂದಲೂ ಭಾರಿ ದಿಟ್ಟ ಮನೋ­ಭಾವದ ಬಾಲಕಿ. 

ಮಹಿಳೆಯರಿಗೆ ಶಿಕ್ಷಣ ಗಗನಕುಸುಮ­ವಾ­ಗಿದ್ದ ಕಾಲದಲ್ಲಿ ಪೋಷಕರ ವಿರೋಧದ ನಡುವೆಯೂ ಹಠ  ಬಿಡದೆ ಶಾಲೆಯ  ಮೆಟ್ಟಿಲೇರಿದಾಕೆ.
ಬಾಲಕಿಯರಿಗೆ  ಪ್ರತ್ಯೇಕ ಶಾಲೆ ಇಲ್ಲದ ಆ ಕಾಲದಲ್ಲಿ ಪಟ್ಟು ಬಿಡದೆ ಬಾಲಕರ ಶಾಲೆ ಸೇರಿ­ ದಾಕೆ. ಇಡೀ ಶಾಲೆಯ­ಲ್ಲಿದ್ದ  ಏಕೈಕ ಹುಡುಗಿ ಆನಂದಿ­ಬೆನ್‌.  ಪ್ರೌಢ­ಶಾಲೆ­ಯಲ್ಲಿದ್ದ ಮೂವರು ಬಾಲಕಿಯರ ಪೈಕಿ ಇವರೂ ಒಬ್ಬರಾಗಿದ್ದರು. ಮತ್ತೇ ಪದವಿಗಾಗಿ  ವಿಜ್ಞಾನ ಕಾಲೇಜು ಸೇರಿದಾಗಲೂ ಆ ಕಾಲೇಜಿ­ನಲ್ಲಿದ್ದ ಏಕೈಕ ಯುವತಿ ಆನಂದಿಬೆನ್‌!

ಬಂಗಾರ ಪದಕದೊಂದಿಗೆ ಸ್ನಾತಕೋತ್ತರ ವಿಜ್ಞಾನ ಪದವಿ ಮತ್ತು ಶಿಕ್ಷಣ ಪದವಿ ಪಡೆದ ಬೆನ್‌ ತನ್ನ ಪ್ರೀತಿಯ ಶಿಕ್ಷಕ ವೃತ್ತಿ ಆಯ್ದು­ಕೊಂಡರು.  
ಅಂದು ಸರ್ದಾರ್‌ ಸರೋವರದಲ್ಲಿ ನಡೆದ ಆ  ಘಟನೆಯೇ  ಅವರ ಆಕಸ್ಮಿಕ ರಾಜಕೀಯ ಪ್ರವೇ­ಶಕ್ಕೆ ನಾಂದಿಯಾಯಿತು. ಆಕೆ ಕನಸು, ಮನಸ್ಸಿನಲ್ಲಿಯೂ ರಾಜಕೀಯ ಸೇರುವ ಯೋಚನೆ ಮಾಡಿರಲಿಲ್ಲ. ಆಕಸ್ಮಿಕವಾಗಿ ಈ ಕ್ಷೇತ್ರಕ್ಕೆ ಕಾಲಿಟ್ಟರು.

ಶಾಲೆ, ಕಾಲೇಜಿನಂತೆಯೇ ಅವರು 1987­ರಲ್ಲಿ ಅಧಿಕೃತವಾಗಿ  ಬಿಜೆಪಿ ಸೇರಿದಾಗ ಆ ಪಕ್ಷ­ದಲ್ಲಿ ಮಹಿಳೆಯರಿರಲಿಲ್ಲ.  ದಾಢಸಿ ವ್ಯಕ್ತಿತ್ವ, ಮುನ್ನುಗ್ಗುವ ಛಾತಿ ಹಾಗೂ ಆಡಳಿತ ಚಾಕಚಕ್ಯತೆಯಿಂದ  ಬೆನ್‌ ಪಕ್ಷ­ದಲ್ಲಿ ಬೇಗ ಮೇಲುರುತ್ತ ಹೋದರು. ಮುರುಳಿ­ಮನೋಹರ ಜೋಷಿ 1992ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಕೈಗೊಂಡ ‘ಏಕತಾ ಯಾತ್ರೆ’ ಅವರ ರಾಜಕೀಯ ಜೀವನಕ್ಕೆ ಮತ್ತೊಂದು ತಿರುವು ನೀಡಿತು. ಯಾತ್ರೆಯಲ್ಲಿ ಭಾಗವಹಿಸಿದ್ದ ಏಕೈಕ ಮಹಿಳಾ ನಾಯಕಿಯಾ­ಗಿದ್ದ ಬೆನ್‌ ಸಹಜವಾಗಿ ರಾಷ್ಟ್ರೀಯ ನಾಯಕರ ಗಮನ ಸೆಳೆದರು.

ನರೇಂದ್ರ ಮೋದಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯ­ದರ್ಶಿಯಾದ ನಂತರ ಬೆನ್‌ ಅವರನ್ನು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರನ್ನಾಗಿ ನೇಮಕ ಮಾಡಿದರು. ಮುಂದೆ 1994ರಲ್ಲಿ ಅವರು ರಾಜ್ಯಸಭೆಯನ್ನೂ ಪ್ರವೇಶಿಸಿದರು. ನಂತರ ರಾಜ್ಯ ರಾಜಕೀಯಕ್ಕೆ ಮರಳಿದ ಅವರು ಸತತವಾಗಿ ಮೂರು ಅವಧಿಗೆ ಶಾಸಕರಾಗಿ ಆಯ್ಕೆಯಾದರು. ಅಲ್ಲಿಂದ ಮುಂದೆ ನಡೆದಿದ್ದು ಇತಿಹಾಸ.

1998ರಲ್ಲಿ ಕೇಶುಭಾಯ್‌ ಪಟೇಲ್‌ ನೇತೃ­ತ್ವದ ಸರ್ಕಾರದಿಂದ ಮೋದಿ ಸರ್ಕಾರದವ­ರೆಗೂ ಬೆನ್‌ ಸಂಪುಟದಲ್ಲಿದ್ದಾರೆ.  ಪಟನ್‌ ವಿಧಾನಸಭಾ ಕ್ಷೇತ್ರದಿಂದ ಮೂರು ಅವಧಿಗೆ ಆಯ್ಕೆಯಾದ ಅವರು ಶಿಕ್ಷಣ ಸಚಿವೆಯಾಗಿದ್ದ ಜಾರಿಗೆ ಯೋಜನೆಗಳು ಅವರಿಗೆ ಭಾರಿ ಹೆಸರು ತಂದುಕೊಟ್ಟವು.
ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ­ಯಾದ ಮೋದಿ ಪ್ರಚಾರಕ್ಕೆ ತೆರಳಿದ ನಂತರ ಗುಜರಾತ್‌ ಆಡಳಿತ ನಿರ್ವಹಣೆಯ ಹೊಣೆ ಬೆನ್‌ ಹೆಗಲೇರಿತ್ತು.

ಪಕ್ಷದ ಕೆಳಹಂತದ ಕಾರ್ಯಕರ್ತರು ಮತ್ತು ಕೆಲವು ನಾಯಕರರೊಂದಿಗೆ   ಹೇಳಿಕೊಳ್ಳು­ವಂತಹ ಸಂಬಂಧ ಹೊಂದಿರದ ಬೆನ್‌ ಹಾಗೂ  ಮೋದಿ ಆಪ್ತ ಅಮಿತ್‌ ಷಾ  ಅವರಿಗೂ ಅಷ್ಟ­ಕ್ಕಷ್ಟೆ.  ನೇರ ಹಾಗೂ ನಿಷ್ಠುರ ನಿಲುವಿನಿಂದ ಅನೇ­ಕ­ರನ್ನು ಎದುರು ಹಾಕಿಕೊಂಡಿದ್ದಾರೆ. ‘ಉಕ್ಕಿನ ಮಹಿಳೆ’ ಎಂದು ಖ್ಯಾತರಾಗಿದ್ದಾರೆ.

ಮೋದಿ ಅವರ ಕಷ್ಟದ ಕಾಲದಲ್ಲೂ ಬೆನ್‌ ಅವರೊಂದಿಗೆ ಇದ್ದರು. ಹೀಗಾಗಿ ಮೋದಿ ಅವರಿಂದ ತೆರವಾದ ಸ್ಥಾನ ಇವರಿಗೆ ಒಲಿದು ಬಂದಿದೆ.
ಗುಜರಾತ್‌ನಲ್ಲಿ ‘ಸಾಹೇಬ್‌’ ಎಂದರೆ ಮೋದಿ, ‘ಬೆನ್‌’ ಎಂದರೆ ಅದು ಅನಂದಿಬೆನ್‌ ಪಟೇಲ್‌ ಎಂದರ್ಥ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.