ADVERTISEMENT

‘ಕೇಂದ್ರದ ಏಳು ಸಚಿವರ ಪ್ರವೇಶಕ್ಕೆ ನಿರ್ಬಂಧ’

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2014, 19:30 IST
Last Updated 19 ನವೆಂಬರ್ 2014, 19:30 IST

ಪಟ್ನಾ (ಪಿಟಿಐ): ವಿವಾದಾತ್ಮಕ ಹೇಳಿಕೆ­ಗಳಿಗೆ ಖ್ಯಾತರಾಗಿರುವ ಬಿಹಾರದ ಮುಖ್ಯ­ಮಂತ್ರಿ ಜಿತನ್‌ ರಾಮ್ ಮಾಂಝಿ ಅವರು ಈಗ ಮತ್ತೊಂದು ವಿವಾದಕ್ಕೆ ಕಾರಣರಾಗಿದ್ದಾರೆ. ಬಿಹಾರದ ಹಿತಾಸಕ್ತಿಯನ್ನು ಕೇಂದ್ರ ಸರ್ಕಾರ ಕಡೆಗಣಿಸುತ್ತಿದೆ ಎಂದು ಆರೋಪಿಸಿರುವ ಅವರು, ರಾಜ್ಯಕ್ಕೆ ನಿರೀಕ್ಷಿತ ನೆರವು ತಾರದೇ ಇದ್ದರೆ ಏಳು ಕೇಂದ್ರ ಸಚಿವರನ್ನು ಬಿಹಾರಕ್ಕೆ ಕಾಲಿಡಲು ಬಿಡುವುದಿಲ್ಲ ಎಂದು ಗುಡುಗಿದ್ದಾರೆ.

‘ವಿಶ್ವ ಶೌಚಾಲಯ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಂಝಿ ಅವರು, ರಾಜ್ಯಕ್ಕೆ ಅಗತ್ಯ ಇರುವ ನೆರವನ್ನು ಕೇಂದ್ರದಿಂದ ತರುವಂತೆ ಏಳು ಸಚಿವರಿಗೆ ಮನವಿ ಮಾಡಿಕೊಂಡರು. ನೆರವು ತಾರದೇ ಇದ್ದರೆ ಬಿಹಾರಕ್ಕೆ ಕಾಲಿಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಮಾಂಝಿ ಅವರು ಸಚಿವರ ಹೆಸರು ಉಲ್ಲೇಖಿಸಲಿಲ್ಲ. ಆದರೆ ಬಿಹಾರದ ರಾಧಾ ಮೋಹನ್‌ ಸಿಂಗ್‌, ರವಿ ಶಂಕರ್‌ ಪ್ರಸಾದ್‌, ರಾಮ್‌ ವಿಲಾಸ್‌ ಪಾಸ್ವಾನ್‌, ರಾಜೀವ್‌ ಪ್ರತಾಪ್‌ ರೂಡಿ, ಉಪೇಂದ್ರ ಕುಶ್ವಾಹ, ರಾಮ್‌ ಕೃಪಾಲ್‌ ಯಾದವ್‌ ಮತ್ತು ಗಿರಿರಾಜ್‌ ಸಿಂಗ್‌ ಕೇಂದ್ರದಲ್ಲಿ ಸಚಿವರಾಗಿದ್ದಾರೆ.

ಬಿಜೆಪಿ ಖಂಡನೆ: ಈ ಹೇಳಿಕೆಯನ್ನು ಬಿಜೆಪಿ ಮುಖಂಡರು ಖಂಡಿಸಿದ್ದಾರೆ. ಇದು ‘ಅಸಾಂವಿಧಾನಿಕ ಹೇಳಿಕೆ’ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವ ರಾಮ್‌ಕೃಪಾಲ್‌ಯಾದವ್‌ ಹೇಳಿದ್ದಾರೆ. ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಮತ್ತು ಮಾಜಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಪ್ರಭಾವದಿಂದಾಗಿ ಇಂತಹ ಹೇಳಿಕೆ ನೀಡಿದ್ದಾರೆ ಎಂದು ರಾಮ್‌ಕೃಪಾಲ್‌ ಹೇಳಿದ್ದಾರೆ. ಸುದ್ದಿಯಲ್ಲಿರಬೇಕು ಎಂಬ ಕಾರಣಕ್ಕಾಗಿಯೇ ಮಾಂಝಿ ಅವರು ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಹಾರ ವಿರೋಧ ಪಕ್ಷ ನಾಯಕ ನಂದಕಿಶೋರ್‌ ಯಾದವ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.