ADVERTISEMENT

‘ಚರ್ಚೆಯ ನಂತರ ನಿರ್ಧಾರ’

ಲೋಕಸಭೆಯಲ್ಲಿ ಕಾಂಗ್ರೆಸ್‌ಗೆ ಪ್ರತಿಪಕ್ಷದ ಸ್ಥಾನ

​ಪ್ರಜಾವಾಣಿ ವಾರ್ತೆ
Published 6 ಜೂನ್ 2014, 19:30 IST
Last Updated 6 ಜೂನ್ 2014, 19:30 IST

ನವದೆಹಲಿ (ಪಿಟಿಐ): ಲೋಕಸಭೆ­ಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಧಿಕೃತ ಪ್ರತಿ­ಪಕ್ಷ­ವೆಂದು ಗುರು­ತಿಸಿ, ಅದರ ಸಭಾ­ನಾಯಕರಿಗೆ ವಿರೋಧ ಪಕ್ಷದ ನಾಯಕ ಸ್ಥಾನಮಾನ ನೀಡುವ ಬಗ್ಗೆ ನೂತನ ಸ್ಪೀಕರ್‌ ಸುಮಿತ್ರಾ ಮಹಾ­ಜನ್‌ ಅವರು ಯಾವುದೇ ಭರವಸೆ ನೀಡಿಲ್ಲ.

‘ಈ ವಿಷಯದ ಬಗ್ಗೆ ಚರ್ಚಿಸಿ ನಂತರ ನಿರ್ಧಾರ ಕೈಗೊಳ್ಳ­ಲಾಗು­ವುದು. ಇಂತಹ ಸನ್ನಿವೇಶ (ಅಧಿಕೃತ ವಿರೋಧ ಪಕ್ಷಕ್ಕೆ ಅಗತ್ಯವಾದ ಸಂಖ್ಯಾ­ಬಲದ ಕೊರತೆ) ಹಿಂದೆಯೂ ಉಂಟಾ­ಗಿತ್ತು. ಆಗ ತೆಗೆದು­ಕೊಂಡ ತೀರ್ಮಾ­ನ­ಗಳನ್ನು ಅಧ್ಯ­ಯನ ಮಾಡ­ಬೇ­ಕಿದೆ. ಜತೆಗೆ ಭವಿ­ಷ್ಯದ ದೃಷ್ಟಿ­ಯಿಂದಲೂ ಆಲೋ­­ಚಿಸಿ ನಿರ್ಧಾರ ತೆಗೆದುಕೊಳ್ಳ­ಲಾಗು­ವುದು’ ಎಂದು ಸ್ಪೀಕರ್‌ ಆಗಿ ಆಯ್ಕೆಯಾದ ನಂತರ ಶುಕ್ರವಾರ ನಡೆ­ಸಿದ ಮೊದಲ ಪತ್ರಿಕಾ­ಗೋಷ್ಠಿಯಲ್ಲಿ ಹೇಳಿ­ದರು. ‘ಇದು ಕಿರು ಅವಧಿಯ ಅಧಿವೇಶನ ಆಗಿ­ರುವ ಕಾರಣ ಉಪ­ಸ್ಪೀಕರ್‌ ಅವರ ಆಯ್ಕೆ ಈ ಅಧಿ­ವೇಶನ­ದಲ್ಲೇ ಆಗು­ವುದು ಕಷ್ಟ’ ಎಂದು ಪ್ರಶ್ನೆ­ಯೊಂ­ದಕ್ಕೆ ಉತ್ತರಿಸಿದರು.

‘ಜುಲೈ 28­ರೊಳಗೆ  ಬಜೆಟ್‌ಗೆ ಸಂಸತ್ತಿನ ಅಂಗೀ­­ಕಾರ ದೊರಕಬೇಕಿದೆ. ಇದಕ್ಕೆ ಲೋಕ­ಸಭೆ­ಯಲ್ಲಿ ಎಲ್ಲಾ ಪಕ್ಷ­ಗಳ ಸಹ­ಕಾರ ಅಗತ್ಯ’ ಎಂದು ಸುಮಿತ್ರಾ ಹೇಳಿದರು.

ಸುಮಿತ್ರಾ ಅವಿರೋಧ ಆಯ್ಕೆ
ಲೋಕಸಭೆಯ ಹಿರಿಯ ಸದಸ್ಯೆ ಬಿಜೆಪಿಯ ನಾಯಕಿ ಸುಮಿತ್ರಾ ಮಹಾಜನ್‌ ಅವರು 16ನೇ ಲೋಕಸಭೆಯ ಸ್ಪೀಕರ್‌ ಆಗಿ ಶುಕ್ರವಾರ ಅವಿರೋಧವಾಗಿ ಆಯ್ಕೆ ಆದರು. ಈ ಮೂಲಕ ಲೋಕ­ಸಭೆಯ ಸ್ಪೀಕರ್‌ ಹುದ್ದೆ­ಯನ್ನು ಅಲಂ­ಕರಿಸಿದ ಎರಡನೇ ಮಹಿಳೆ ಎಂಬ ಶ್ರೇಯಕ್ಕೂ ಪಾತ್ರರಾದರು.

ಕಾಂಗ್ರೆಸ್‌ನ ಮೀರಾ ಕುಮಾರ್‌ ಅವರು 15ನೇ ಲೋಕಸಭೆಯ ಸ್ಪೀಕರ್‌ ಆಗಿದ್ದರು. ಸುಮಿತ್ರಾ ಮಹಾಜನ್‌ ಅವರ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೂಚಿಸಿದರು. ಬಿಜೆಪಿ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ಅನುಮೋದಿಸಿದರು.

‘ಸ್ಪೀಕರ್‌’ ಹುದ್ದೆಗೆ ಮೃದುಭಾಷಿ
ಲೋಕ­ಸಭೆಯ ಕಲಾಪ­ಗಳನ್ನು ‘ಮಾಸ್ತರ’ರಂತೆ ಸಂಭಾ­ಳಿಸುವ ಗುರುತರವಾದ ಸ್ಪೀಕರ್‌ ಹುದ್ದೆಯ ಜವಾಬ್ದಾರಿ ಈ ಬಾರಿ  ಹಿರಿಯ ಸಂಸದೆ ಹಾಗೂ ಮೃದುಭಾಷಿ ಸುಮಿತ್ರಾ ಮಹಾ­ಜನ್‌ (71) ಅವರದ್ದಾಗಿದೆ.

ಮೂಲತಃ ಮಹಾ­ರಾಷ್ಟ್ರದ ರತ್ನ­­ಗಿರಿ ಜಿಲ್ಲೆಯ ಚಿಪ್ಲುನ್‌ ಗ್ರಾಮದ ಸುಮಿತ್ರಾ ಮಹಾ­ಜನ್‌ ವಕೀ­ಲಿಕೆ­ಯೊಂ­ದಿಗೆ ವೃತ್ತಿ ಜೀವನ ಆರಂಭಿಸಿ­ದರು. 39ನೇ ವಯಸ್ಸಿನಲ್ಲಿ ಆಕಸ್ಮಿಕ­ವಾಗಿ ರಾಜಕೀಯ ಪ್ರವೇಶಿಸಿದ ಅವರು, 1982ರಲ್ಲಿ ಮೊದಲ ಬಾರಿಗೆ ನಗರಸಭಾ ಸದಸ್ಯರಾದರು.
ನಂತರ ಮಧ್ಯಪ್ರದೇಶದ ಇಂದೋರ್‌ ಪಾಲಿಕೆಯ ಉಪ ಮೇಯರ್‌ ಹುದ್ದೆಗೆ ಆಯ್ಕೆ­ಯಾ­ದರು. ಅದಾದ ನಂತರ ಇಂದೋರ್‌ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಸ್ಪರ್ಧಿಸಿ ಸೋಲು ಕಂಡರು. 

1989ರಲ್ಲಿ ಇಂದೋರ್‌ ಲೋಕ­ಸಭಾ ಕ್ಷೇತ್ರದಿಂದ ಸಂಸತ್‌ ಪ್ರವೇಶಿಸಿದ ಅವರು ಮತ್ತೆಂದೂ ಹಿಂದಿರುಗಿ ನೋಡುವ ಪ್ರಸಂಗ ಎದುರಾಗಲಿಲ್ಲ. ಸತತ ಎಂಟನೇ ಅವಧಿಗೆ ಸಂಸತ್‌ ಪ್ರವೇಶಿಸಿ­ದ್ದಾರೆ. ಈ ಸಲ 4.67 ಲಕ್ಷ ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.