ADVERTISEMENT

‘ಡಿಜಿಟಲ್ ಹಂಪಿ’ ನಡುವೆ ನಡಿಗೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2014, 19:30 IST
Last Updated 17 ನವೆಂಬರ್ 2014, 19:30 IST

ನವದೆಹಲಿ (ಪಿಟಿಐ): ಯುನೆಸ್ಕೊ ವಿಶ್ವ ಪರಂಪರೆ ಸ್ಥಳವಾದ ಕರ್ನಾ­ಟಕದ ಹಂಪಿಯ ಮೂರು ಆಯಾ­ಮದ ಚಿತ್ರ ಮತ್ತು ಅನುಭವ ಕಟ್ಟಿಕೊಡುವ ‘ಡಿಜಿಟಲ್ ಹಂಪಿ’­ಯನ್ನು ತಂತ್ರಜ್ಞರ ತಂಡವೊಂದು ರೂಪಿಸಿದೆ. ಇದು ದೇಶದಲ್ಲಿ ಮೊದಲನೇ ಪ್ರಯತ್ನ ಎನ್ನಲಾಗಿದೆ.
ಇಂತಹ ಅನುಭವ ಕಟ್ಟಿಕೊಡುವಲ್ಲಿ ದೇಶದ ಅತ್ಯುನ್ನತ ಶೈಕ್ಷಣಿಕ ಸಂಸ್ಥೆಗಳಾದ ಐಐಟಿ ದೆಹಲಿ, ಐಐಟಿ ಮುಂಬೈ ಮತ್ತು ಇತರ ಸಂಸ್ಥೆಗಳ ತಂತ್ರಜ್ಞರು ದುಡಿದಿದ್ದಾರೆ.

ಇಲ್ಲಿನ ಇಂಡಿಯಾ ಹ್ಯಾಬಿಟಾಟ್ ಸೆಂಟರ್‌ನಲ್ಲಿ 18 ಮತ್ತು 19 ರಂದು ನಡೆಯಲಿರುವ ಪ್ರದರ್ಶನ­ದಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ವೈ.ಎಸ್.ಚೌಧರಿ ಅವರು ‘ಡಿಜಿಟಲ್ ಹಂಪಿ’ಯನ್ನು ಅನಾ­­ವರಣ ಮಾಡಲಿದ್ದಾರೆ. ಪ್ರದ­ರ್ಶನದಲ್ಲಿ ವಿಜಯ ವಿಠ್ಠಲ ದೇವಾ­ಲಯ ಸಂಕೀರ್ಣ ಮತ್ತು ವಿರೂಪಾಕ್ಷ ದೇವಾಲಯದ ಎದುರಿನ ಸಂತೆ ಬೀದಿಯ ಡಿಜಿಟಲ್ ರೂಪದ ನಡುವೆ ನೋಡುಗರು ಓಡಾಡಬಹುದು.

ಈಗಾಗಲೇ ಹಾನಿಗೊಳಗಾಗಿರುವ ಹಂಪಿಯ ಸ್ಮಾರಕಗಳ ಮೂಲ ಚಿತ್ರವನ್ನು ಕಟ್ಟಿಕೊಡುವ ಸ್ಮಾರ್ಟ್‌­ಫೋನ್ ಅಪ್ಲಿಕೇಷನನ್ನು ಸಹ ಈ ತಂಡ ಅಭಿವೃದ್ಧಿ ಪಡಿಸಿದೆ. ಈ ಆ್ಯಪ್ ಇರುವ ಸ್ಮಾರ್ಟ್‌ಫೋನ್‌ನ ಕ್ಯಾಮೆ­ರಾವನ್ನು ಹಂಪಿಯ ವಿಜಯ ವಿಠ್ಠಲ ದೇವಾಲ­ಯದ ಎದುರು ಇರುವ ಕಲ್ಲಿನ ರಥದತ್ತ  ತಿರುಗಿಸಿದರೆ, ಈ ಆ್ಯಪ್ ರಥದ  ಮೂಲ ರೂಪದ ಪೂರ್ಣ ಪ್ರಮಾಣದ ಚಿತ್ರವನ್ನು ಕಟ್ಟಿ­ಕೊಡಲಿದೆ.

ಇಂಡಿಯನ್ ಡಿಜಿಟಲ್ ಹೆರಿಟೇಜ್ ಪ್ರಾಜೆಕ್ಟ್‌ನ ಅಂಗವಾಗಿ ಈ ಪ್ರದರ್ಶನ ಏರ್ಪಡಿಸಲಾಗಿದೆ. ಇದರ ಅಡಿಯಲ್ಲಿ ದೇಶದ ಸಂಸ್ಕೃತಿ ಮತ್ತು ತಂತ್ರಜ್ಞಾನವನ್ನು  ಒಂದೆಡೆ ತರಲಾಗುತ್ತದೆ ಎಂದು ವೈ.ಎಸ್. ಚೌಧರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.