ADVERTISEMENT

‘ನಿಗದಿಯಂತೆ ನಡೆಯಲಿದೆ ಎನ್‌ಇಇಟಿ’

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2016, 19:30 IST
Last Updated 29 ಏಪ್ರಿಲ್ 2016, 19:30 IST

ನವದೆಹಲಿ: ವೈದ್ಯಕೀಯ ಮತ್ತು ದಂತವೈದ್ಯಕೀಯ ಕೋರ್ಸ್‌ನ 2016–17ನೇ ಶೈಕ್ಷಣಿಕ ವರ್ಷದ ಪ್ರವೇಶಕ್ಕೆ ಮೇ 1 ಮತ್ತು  ಜುಲೈ 24ರಂದು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ) ನಡೆಯಲಿದೆ ಎಂದು ಸುಪ್ರೀಂ ಕೋರ್ಟ್‌ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ದೇಶದಾದ್ಯಂತ ಒಂದೇ ಪ್ರವೇಶ ಪರೀಕ್ಷೆ (ಎನ್‌ಇಇಟಿ) ನಡೆಸುವಂತೆ ಗುರುವಾರ ನೀಡಿರುವ ಆದೇಶವನ್ನು ಮಾರ್ಪಡಿಸುವಂತೆ ಸುಪ್ರೀಂಕೋರ್ಟನ್ನು ಕೇಂದ್ರ ಸರ್ಕಾರ ಶುಕ್ರವಾರ ಕೋರಿತು. ಆದರೆ ಆದೇಶ ಮಾರ್ಪಡಿಸಲು ಕೋರ್ಟ್‌ ನಿರಾಕರಿಸಿದೆ.

ಗುರುವಾರದ ತೀರ್ಪಿನ ಪ್ರಕಾರವೇ ಮೇ 1 ಮತ್ತು ಜುಲೈ 24ರಂದು ಸಿಬಿಎಸ್‌ಇ ಪರೀಕ್ಷೆ ನಡೆಸಲಿದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೋರ್ಟ್‌ ಹೇಳಿದೆ.

ಕೊನೆಯ ಕ್ಷಣದಲ್ಲಿ ಒಂದೇ ಪರೀಕ್ಷೆ ನಡೆಸುವ ನಿರ್ಧಾರದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಹಾಗಾಗಿ ಮೇ 1ರಂದು ಪರೀಕ್ಷೆ ನಡೆಸುವ ನಿರ್ಧಾರವನ್ನು ಬದಲಾಯಿಸಬೇಕು ಎಂದು ಅಟಾರ್ನಿ ಜನರಲ್‌ ಮುಕುಲ್ ರೋಹಟಗಿ ಅವರು ಸುಪ್ರೀಂ ಕೋರ್ಟನ್ನು ಕೋರಿದರು. ಮಹಾರಾಷ್ಟ್ರ, ಗುಜರಾತ್‌, ತಮಿಳುನಾಡು ಸರ್ಕಾರಗಳು ಕೂಡ ಈ ವಾದವನ್ನು ಬೆಂಬಲಿಸಿದವು.

ಆದರೆ ಈ ವಾದಕ್ಕೆ ಮನ್ನಣೆ ದೊರೆಯಲಿಲ್ಲ. ‘ಈಗ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿ. ಮುಂದೆ ಅಗತ್ಯ ಬಿದ್ದರೆ ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ಸುಪ್ರೀಂಕೋರ್ಟ್‌ಗೆ ಇರುವ ವಿಶೇಷಾಧಿಕಾರ ಬಳಸಿ ವಿದ್ಯಾರ್ಥಿಗಳಿಗೆ ನೆರವಾಗುವುದಕ್ಕೆ ಅವಕಾಶ ಇದೆ’ ಎಂದು ಕೋರ್ಟ್‌ ಹೇಳಿತು.

ಎನ್‌ಇಇಟಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಮೇ 3ಕ್ಕೆ ನಡೆಯಲಿದೆ. ಆಗಲೇ ಕೇಂದ್ರ ಸರ್ಕಾರದ ಮನವಿಯನ್ನೂ ಪರಿಗಣಿಸಲಾಗುವುದು ಎಂದು ಕೋರ್ಟ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.