ADVERTISEMENT

‘ಪ್ರತಿಪಕ್ಷ ಸ್ಥಾನದ ವಿಚಾರ ಸ್ಪೀಕರ್‌ಗೆ ಬಿಟ್ಟಿದ್ದು’

​ಪ್ರಜಾವಾಣಿ ವಾರ್ತೆ
Published 6 ಜುಲೈ 2014, 12:04 IST
Last Updated 6 ಜುಲೈ 2014, 12:04 IST

ಹೈದರಾಬಾದ್‌ (ಪಿಟಿಐ): ಪ್ರತಿಪಕ್ಷದ ನಾಯಕ ಸ್ಥಾನ ನೀಡುವ ವಿಚಾರ ಲೋಕಸಭಾ ಸ್ಪೀಕರ್‌ ಅಂಗಳದಲ್ಲಿ ಪರಿಶೀಲನೆಯಲ್ಲಿರುವಾಗಲೇ, ಸಭಾಧ್ಯಕ್ಷರ ನಿರ್ಧಾರಕ್ಕೆ ಪ್ರತಿಯೊಬ್ಬರು ವಿಧೇಯರಾಗಿ ಇರಬೇಕಾಗುತ್ತದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಎಂ.ವೆಂಕಯ್ಯ ನಾಯ್ಡು ಭಾನುವಾರ ಅಭಿಪ್ರಾಯ ಪಟ್ಟಿದ್ದಾರೆ.

ಜನಸಂಘ ಸಂಸ್ಥಾಪಕ ಶ್ಯಾಮ   ಪ್ರಸಾದ್‌ ಮುಖರ್ಜಿ ಅವರ ಜನ್ಮದಿನಾಚರಣೆ  ಸಮಾರಂಭದಲ್ಲಿ ಮಾತನಾಡಿದ ಅವರು, ‘ನೆಹರೂ ಹಾಗೂ ಇಂದಿರಾ ಗಾಂಧಿ ಅವರ ಆಡಳಿತಾವಧಿಯಲ್ಲಿ ಪ್ರತಿಪಕ್ಷದ ನಾಯಕರು ಇರಲಿಲ್ಲ. ರಾಜೀವ್ ಗಾಂಧಿ ಅವರ ಅಧಿಕಾರಾವಧಿಯಲ್ಲೂ ಪ್ರತಿಪಕ್ಷದ ನಾಯಕರಿರಲಿಲ್ಲ. ಆದರೆ ಬಿಜೆಪಿ ಅಧಿಕಾರಾವಧಿಯಲ್ಲಿ ಪ್ರತಿಪಕ್ಷ ನಾಯಕರ ಸ್ಥಾನಮಾನ ನೀಡಲಾಗುತ್ತದೆ. ಅದನ್ನು ಹೇಗೆ ಕೊಡಲು ಸಾಧ್ಯವಿಲ್ಲ. ಸಂವಿಧಾನ ಅದನ್ನು ಒಪ್ಪುವುದಿಲ್ಲ ಎಂದು ಅವರು (ಕಾಂಗ್ರೆಸ್‌ ಮುಖಂಡರು) ಹೇಳುತ್ತಾರೆ. ಆಗಿನ ಪರಿಸ್ಥಿತಿ ಹಾಗೂ ಈಗಿನ ಪರಿಸ್ಥಿತಿ ಭಿನ್ನ ಎಂದು ಅವರು ಹೇಳುತ್ತಾರೆ’ ಎಂದರು.

ಅಲ್ಲದೇ, ‘ನೀವು ಉದಾರವಾದಿಗಳಾಗಿ (ಪ್ರತಿಪಕ್ಷ ನಾಯಕನ ಸ್ಥಾನಮಾನ ನೀಡುವ ವಿಚಾರದಲ್ಲಿ) ಎನ್ನುತ್ತಾರೆ. ಇದು ಜನತಾ ತೀರ್ಪು. ಸಂವಿಧಾನಕ್ಕೆ ಸಂಬಂಧಿಸಿದ ವಿಷಯವಾಗಿದ್ದು,  ಸ್ಪೀಕರ್‌ ನಿರ್ಧಾರಕ್ಕೆ ವಿಧೇಯಕರಾಗಿ ಇರಬೇಕಿದೆ. ಸ್ಪೀಕರ್‌ ಅವರಿಗೆ ಕೆಲವೊಂದು ನಡವಳಿಕೆಗಳು, ನಿಯಮ ಹಾಗೂ ನಿಬಂಧನೆಗಳು, ಪೂರ್ವನಿದರ್ಶನಗಳು ಮತ್ತು ನಿರ್ದೇಶನಗಳಿವೆ. ಎಲ್ಲರೂ ಅವುಗಳನ್ನು ಅನುಸರಿಸಬೇಕು. ಸಭಾಧ್ಯಕ್ಷರು ಏನು ನಿರ್ಧಾರ ಕೈಗೊಳ್ಳುವರೋ ಕಾದು ನೋಡೋಣ’ ಎಂದು ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಲೋಕಸಭೆ ವಿರೋಧ ಪಕ್ಷದ ಸ್ಥಾನಮಾನ ನಿರೀಕ್ಷಿಸುತ್ತಿರುವ ಕಾಂಗ್ರೆಸ್‌, ಅದನ್ನು ಪಡೆಯಲು ಕೋರ್ಟ್‌ ಮೆಟ್ಟಿಲೇರುವ ಬಗ್ಗೆಯೂ ಚಿಂತನೆ ನಡೆಸಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.