ADVERTISEMENT

‘ಪ್ರತಿಭಟನಾ ಚುಂಬನ’ ತಡೆಗೆ ಹೈಕೋರ್ಟ್‌ ನಕಾರ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2014, 19:51 IST
Last Updated 31 ಅಕ್ಟೋಬರ್ 2014, 19:51 IST

ಕೊಚ್ಚಿ (ಪಿಟಿಐ): ನೈತಿಕ ಪೊಲೀಸ್‌ಗಿರಿ ಪ್ರತಿಭಟಿಸಿ ಇಲ್ಲಿನ ಮರೀನ್‌ ಡ್ರೈವ್‌­ನಲ್ಲಿ ನ.2ರಂದು ಸಾಮಾಜಿಕ ಜಾಲ­ತಾಣ ಬಳಕೆದಾರರ ಗುಂಪು ಹಮ್ಮಿ­ಕೊಂಡಿ­ರುವ ‘ಕಿಸ್‌ ಆಫ್‌ ಲವ್‌’ ಕಾರ್ಯ­­ಕ್ರಮ ತಡೆ­ಯಲು ಮಧ್ಯ­ಪ್ರವೇಶ ಮಾಡುವುದಿಲ್ಲ ಎಂದು ಕೇರಳ ಹೈಕೋರ್ಟ್‌ ಶುಕ್ರವಾರ ಸ್ಪಷ್ಟಪಡಿಸಿದೆ.

ಈ ಕಾರ್ಯಕ್ರಮ ನಡೆ­ಯುವ ವೇಳೆ ಯಾವುದೇ ಅಕ್ರಮ ಚಟು­ವಟಿಕೆ ನಡೆಯದಂತೆ ರಾಜ್ಯ ಸರ್ಕಾರ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದ ನಂತರ ಹೈಕೋರ್ಟ್‌್ ಮಧ್ಯ­ಪ್ರವೇಶಿ­ಸದಿರಲು ನಿರ್ಧರಿಸಿದೆ. ‘ಕಿಸ್‌ ಆಫ್‌ ಲವ್‌’ ಕಾರ್ಯಕ್ರಮಕ್ಕೆ ತಡೆ ನೀಡುವಂತೆ ಎರಡು ಅರ್ಜಿಗಳನ್ನು ಹೈಕೋರ್ಟ್‌ಗೆ ಸಲ್ಲಿಸಲಾಗಿತ್ತು. ಸಾಕಷ್ಟು ಪೊಲೀಸರನ್ನು ನೇಮಿಸಿ ಅಕ್ರಮ ಚಟುವಟಿಕೆ ನಡೆಯಲು ಬಿಡದಂತೆ ನೋಡಿಕೊಳ್ಳಲಾಗುವುದು ಎಂದು ಸರ್ಕಾರ ವಿಚಾರಣೆ ವೇಳೆ ತಿಳಿಸಿತು.

ಎರ್ನಾಕುಲಂ ಸರ್ಕಾರಿ ಕಾನೂನು ಕಾಲೇಜು ಮತ್ತು ತಿರುವನಂತಪುರದ ಶ್ರೀ ಸತ್ಯ ಸಾಯಿ ಅನಾಥಶ್ರಮ ಟ್ರಸ್ಟ್‌ನ ಇಬ್ಬರು ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿ ಯನ್ನು ಪ್ರಭಾರ ಮುಖ್ಯನ್ಯಾಯ­ಮೂರ್ತಿ ಅಶೋಕ್‌ ಭೂಷಣ್ ಮತ್ತು ನ್ಯಾಯಮೂರ್ತಿ ಎ.ಎಂ.ಶಫೀಕ್‌ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

‘ಕಿಸ್‌ ಆಫ್ ಲವ್‌’ ಕಾರ್ಯಕ್ರಮವು ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಕೇರಳ ಪೊಲಿಸ್ ಕಾಯಿದೆ ಅಲ್ಲದೆ ಭಾರತೀಯ ಸಂಸ್ಕೃತಿಗೆ ವಿರುದ್ಧ ವಾಗಿದೆ. ಆದ್ದರಿಂದ ಇದಕ್ಕೆ ಅನುಮತಿ ನೀಡಬಾರದು ಎಂದು ಅರ್ಜಿ ಸಲ್ಲಿಸಿದ್ದರು.  ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲತೆ ಪ್ರದರ್ಶಿಸುವುದನ್ನು ತಡೆಯಬೇಕು ಎಂದು ಕೋರಿ ಕಾನೂನು ವಿದ್ಯಾರ್ಥಿಗಳು ಎರ್ನಾಕುಲಂ ಜಿಲ್ಲಾಧಿಕಾರಿ ಮತ್ತು ನಗರ ಪೊಲೀಸ್‌ ಕಮಿಷನರ್‌ಗೆ ದೂರು ಸಲ್ಲಿಸಿದ್ದರು.

ಪ್ರತಿಭಟನೆ ನಡೆಸುವುದು ಮೂಲಭೂತ ಹಕ್ಕು ಇದನ್ನು ಪಶ್ನಿಸುವುದು ಇಲ್ಲದೇ ನಿಗ್ರಹಿಸುವುದು ಸಾಧ್ಯವಿಲ್ಲ ಎಂದು ಗೃಹ ಸಚಿವ ರಮೇಶ್‌ ಚೆನ್ನಿತಲ ಫೇಸ್‌ಬುಕ್‌ನಲ್ಲಿ ತಿಳಿಸಿದ್ದರು. ಇದೇ ವೇಳೆ ಪ್ರತಿಭಟನಾಕಾರರು ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರಬಾರದು ಎಂದು ಹೇಳಿದ್ದರು. ನೈತಿಕ ಪೊಲೀಸ್‌ಗಿರಿ ಪ್ರದರ್ಶಿಸಲು ಮುಂದಾಗುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಚೆನ್ನಿತಲ ಎಚ್ಚರಿಸಿದ್ದಾರೆ.

ಕಿರು ಚಿತ್ರ ನಿರ್ದೇಶಕ ರಾಹುಲ್‌ ಪಶುಪಾಲನ್‌ ನೇತೃತ್ವದ ‘ಫ್ರೀ ಥಿಂಕರ್ಸ್‌’ ಎಂಬ ಹೆಸರಿನ ಗುಂಪು ‘ಕಿಸ್‌ ಆಫ್‌ ಲವ್‌’ ಪ್ರತಿಭಟನೆಗೆ ಕರೆ ನೀಡಿದೆ. ಯುವ ಮತ್ತು ಹಿರಿಯ ಜೋಡಿ­ಗಳು ನ.2 ರಂದು ಸಂಜೆ ಮರೀನ್‌ ಡ್ರೈವ್‌ಗೆ ಬಂದು ಪರಸ್ಪರ ಅಪ್ಪಿಕೊಳ್ಳುವುದು ಮತ್ತು ಚುಂಬಿಸುವ ಮೂಲಕ ಪ್ರತಿಭಟನೆ ನಡೆಸುವುದು ಇದರ ಉದ್ದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.