ADVERTISEMENT

‘ಬೆಲೆ ಏರಿಕೆಗೆ ಅಕ್ರಮ ದಾಸ್ತಾನು ಕಾರಣ’

​ಪ್ರಜಾವಾಣಿ ವಾರ್ತೆ
Published 4 ಜುಲೈ 2014, 10:33 IST
Last Updated 4 ಜುಲೈ 2014, 10:33 IST

ನವದೆಹಲಿ (ಪಿಟಿಐ): ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಸಂಬಂ­ಧಿಸಿದಂತೆ ಜನಸಾಮಾನ್ಯರು ತೀವ್ರ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಹಣದುಬ್ಬರ ನಿಯಂತ್ರಣಕ್ಕೆ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಶುಕ್ರವಾರ ಇಲ್ಲಿ ಹೇಳಿದರು.

ಬೆಲೆ ಏರಿಕೆಗೆ ಸಂಬಂಧಿಸಿದಂತೆ ದೇಶದೆಲ್ಲೆಡೆ ಅನಗತ್ಯ ಗೊಂದಲ ಸೃಷ್ಟಿಯಾಗಿದೆ. ಆದರೆ, ಸದ್ಯಕ್ಕೆ ಅಂತಹ ಅಪಾಯಕಾರಿ ಪರಿಸ್ಥಿತಿ ಎದುರಾಗಿಲ್ಲ.  ಈಗಾಗಲೇ ಅಗತ್ಯ ವಸ್ತುಗಳ ಅಕ್ರಮ ದಾಸ್ತಾನು ಪರಿಶೀಲಿಸುವಂತೆ ಮತ್ತು ಕಾಳಸಂತೆಯಲ್ಲಿ ಮಾರಾಟ ತಡೆಯುವಂತೆ ಆಯಾ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಇಲ್ಲಿ ನಡೆದ ಕಾರ್ಯಕ್ರ­ಮವೊಂದರಲ್ಲಿ ಹೇಳಿದರು.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಆಹಾರ ಧಾನ್ಯಗಳ ಉತ್ಪಾದನೆ ಹೆಚ್ಚಿದೆ. ಆದರೂ ಬೆಲೆ ಮಾತ್ರ ಏರುಗತಿ­ಯಲ್ಲಿದೆ. ಇದರ ಅರ್ಥ ಮಧ್ಯವರ್ತಿ­ಗಳು ಆಹಾರ ಧಾನ್ಯವನ್ನು ಅಕ್ರಮ ದಾಸ್ತಾನು ಇರಿಸಿಕೊಂಡು ಮಾರುಕಟ್ಟೆಗೆ  ಬಿಡುಗಡೆ ಮಾಡುತ್ತಿಲ್ಲ ಎನ್ನುವುದು. ಮಾರು­ಕಟ್ಟೆಯಲ್ಲಿ ಆಹಾರ ಪದಾರ್ಧಗಳ ಕೊರತೆ ಉಂಟಾಗಿರುವುದರಿಂದ ಬೆಲೆ ಏರಿಕೆ ಕಂಡಿದೆ. ಇದನ್ನು ತಡೆಯಲು ರಾಜ್ಯ ಸರ್ಕಾರಗಳು ಪ್ರಯತ್ನಿಸಬೇಕು ಎಂದು  ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜುಲೈ–ಡಿಸೆಂಬರ್ ಅವಧಿಯಲ್ಲಿ ಕೆಲವು ಆಯ್ದ ಆಹಾರ ಪದಾರ್ಥಗಳ ಬೆಲೆ ಹೆಚ್ಚುವುದು ಸಹಜ. ಈ ಬಾರಿ ಮುಂಗಾರು ಮಳೆ ಕೂಡ ಕಡಿಮೆ. ಈ ಅವಕಾಶ ಬಳಸಿಕೊಂಡು ಮಧ್ಯವರ್ತಿಗಳು ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸಿ ಬೆಲೆ ಹೆಚ್ಚಿಸುತ್ತಿದ್ದಾರೆ  ಎಂದರು.

ಮೇ ತಿಂಗಳಲ್ಲಿ ಹಣದುಬ್ಬರ ದರ ಐದು ತಿಂಗಳ ಗರಿಷ್ಠ ಮಟ್ಟವಾದ ಶೇ 6.01 ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT