ನವದೆಹಲಿ (ಪಿಟಿಐ/ಐಎಎನ್ಎಸ್): ಭಾರತಕ್ಕೆ ಮತ್ತೊಮ್ಮೆ ಜಾಗತಿಕ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವ ಅವಕಾಶ ಇದೆ. ಅದು ಚೀನಾಗೆ ಸರಿಸಾಟಿಯಾಗಬಲ್ಲದು. ಇದಕ್ಕಾಗಿ ನನ್ನ ಬಳಿ ಸ್ಪಷ್ಟವಾದ ರೂಪುರೇಷೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
‘ಭಾರತವನ್ನು ಯಾರೂ ಮಣಿಸಲಾಗದು ಎನ್ನುವ ಭಾವನೆ ಶತಮಾನಗಳ ಹಿಂದೆ ಇತ್ತು. ನಾವು ಆ ಸ್ಥಿತಿಯಿಂದ ಕೆಳಗೆ ಇಳಿದಿದ್ದೇವೆ.
ಆದರೆ ಮತ್ತೊಮ್ಮೆ ಎದ್ದು ನಿಲ್ಲುವ ಅವಕಾಶ ನಮ್ಮ ಮುಂದೆ ಇದೆ.
ಇತಿಹಾಸವನ್ನು ಇಣುಕಿ ನೋಡಿದರೆ ಭಾರತ ಹಾಗೂ ಚೀನಾ ಸರಿಸಾಟಿಯಾಗಿ ಬೆಳೆದಿರುವುದು ಗೊತ್ತಾಗುತ್ತದೆ’ ಎಂದು ‘ಸಿಎನ್ಎನ್’ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ. ‘ಭಾರತವು ಬೇರೆ ಏನೂ ಆಗಬೇಕಾಗಿಲ್ಲ. ಅದು ಭಾರತವೇ ಆಗಬೇಕು. ದೇಶದ ನೂರು ಕೋಟಿಗೂ ಹೆಚ್ಚು ಜನರ ಉದ್ಯಮಶೀಲ ಪ್ರವೃತ್ತಿಯ ಬಗ್ಗೆ ನನಗೆ ಅಪಾರ ನಂಬಿಕೆ ಇದೆ. ಈಗ ಮತ್ತೆ ಏಷ್ಯಾ ಯುಗ ಶುರುವಾಗಿದೆ. ಭಾರತ ಹಾಗೂ ಚೀನಾ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿವೆ’ ಎಂದೂ ಅವರು ತಿಳಿಸಿದ್ದಾರೆ.
ಚೀನಾದಲ್ಲಿ ಆಡಳಿತಗಾರರಿಗೆ ಇರುವಂತೆ ಪೂರ್ಣ ಅಧಿಕಾರ ಬೇಕು ಎಂದು ನಿಮಗೆ ಯಾವತ್ತಾದರೂ ಅನಿಸಿದೆಯೇ ಎಂಬ ಪ್ರಶ್ನೆಗೆ, ‘ಪ್ರಜಾತಂತ್ರ ದೇಶಗಳು ಕೂಡ ಪ್ರಗತಿ ಸಾಧಿಸಿವೆ. ಪ್ರಜಾತಂತ್ರ ಇರದಿದ್ದಲ್ಲಿ ಬಡ ಕುಟುಂಬದಿಂದ ಬಂದ ನಾನು ಈ ಸ್ಥಾನಕ್ಕೆ ಏರುತ್ತಲೇ ಇರಲಿಲ್ಲ’ ಎಂದಿದ್ದಾರೆ.
‘ಇದು ಸಹಭಾಗಿತ್ವದ ಯುಗ. ಚೀನಾ ತನ್ನ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡಿದೆ. ತಾನು ಪ್ರತ್ಯೇಕವಾಗಿ ಇರಲು ಇಷ್ಟಪಡುವುದಿಲ್ಲ ಎನ್ನುವುದನ್ನು ಈ ಮೂಲಕ ತೋರಿಸಿಕೊಟ್ಟಿದೆ’ ಎಂದೂ ಅವರು ಹೇಳಿದ್ದಾರೆ. ಭಾರತ–ಅಮೆರಿಕ ಸಂಬಂಧದ ಬಗ್ಗೆಯೂ ಅವರು ಮಾತನಾಡಿದ್ದಾರೆ. ‘ಈ ಎರಡೂ ದೇಶಗಳಿಗೆ ಪ್ರಾಮಾಣಿಕ ಸಹಭಾಗಿತ್ವ ಬೆಳೆಸಿಕೊಳ್ಳುವ ಶಕ್ತಿ ಇದೆ. ನಮ್ಮಲ್ಲಿ ಅನೇಕ ಸಾಮ್ಯತೆಗಳು ಇವೆ. ಕಳೆದ ಶತಮಾನದಲ್ಲಿ ನಮ್ಮ ಸಂಬಂಧದಲ್ಲಿ ಏರಿಳಿತಗಳು ಕಂಡುಬಂದಿದ್ದು ನಿಜ. ಆದರೆ, ೨೧ನೇ ಶತಮಾನದ ಮೊದಲ ದಶಕದಲ್ಲಿ ನಮ್ಮ ಸಂಬಂಧ ಗಟ್ಟಿಯಾಗಿದೆ’ ಎಂದು ಹೇಳಿದ್ದಾರೆ.
ಸಾಮೂಹಿಕ ಜವಾಬ್ದಾರಿ
‘ಈ ದೇಶದ ಮಹಿಳೆಯರ ಘನತೆ–ಗೌರವ ಕಾಪಾಡುವುದು ಸಾಮೂಹಿಕ ಹೊಣೆಗಾರಿಕೆಯಾಗಿದೆ. ಈ ವಿಷಯದಲ್ಲಿ ರಾಜಿ ಮಾಡಿಕೊಳ್ಳಬಾರದು. ಹೆಣ್ಣು ಮಗುವಿನ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಆಗ ಮಾತ್ರ ಮಹಿಳಾ ಸಬಲೀಕರಣದ ಸಾಧ್ಯತೆ ಹೆಚ್ಚಾಗುತ್ತದೆ’ ಎಂದು ಮೋದಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.