ADVERTISEMENT

‘ಶಿವಸೇನೆ ಸಚಿವರ ಪ್ರಮಾಣ ಅನುಮಾನ’

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2014, 13:35 IST
Last Updated 30 ಅಕ್ಟೋಬರ್ 2014, 13:35 IST

ಮುಂಬೈ (ಪಿಟಿಐ): ನಾಳೆ ಪ್ರಮಾಣ ವಚನ ಸ್ವೀಕರಿಸಲಿರುವ ದೇವೇಂದ್ರ ಫಡ್ನವೀಸ್ ಅವರ ಮಹಾರಾಷ್ಟ್ರ ಸರ್ಕಾರವನ್ನು ಶಿವಸೇನೆ ಸೇರುವ ಸಾಧ್ಯತೆಗಳಿಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜೀವ್ ಪ್ರತಾಪ್ ರೂಡಿ ಅವರು ಗುರುವಾರ ತಿಳಿಸಿದ್ದಾರೆ.

‘ನಾಳೆ ಶಿವಸೇನೆಯ ಯಾವುದೇ ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಗಳಿಲ್ಲ ಅನ್ನಿಸುತ್ತಿದೆ. ಮಹಾರಾಷ್ಟ್ರದಲ್ಲಿ ಮೈತ್ರಿಯ ಕುರಿತ ಚರ್ಚೆಯು ಸೌಹಾರ್ದಯುತ ವಾತಾವರಣದಲ್ಲಿ ನಡೆಯುತ್ತಿದೆ. ಆದರೆ ಈವರೆಗೂ ಯಾವುದೇ ಫಲಿತಾಂಶ ಸಿಕ್ಕಿಲ್ಲ’ ಎಂದು ರೂಡಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಮಹಾರಾಷ್ಟ್ರ ಅಭಿವೃದ್ಧಿಯ ಹಿತಾಸಕ್ತಿಯಿಂದ ಬಾಹ್ಯ ಬೆಂಬಲ ನೀಡುವ ಎನ್‌ಸಿಪಿಯ ಪ್ರಸ್ತಾವನ್ನು ಬಿಜೆಪಿ ಸ್ವೀಕರಿಸಿದೆ ಎಂದಿದ್ದಾರೆ.

ADVERTISEMENT

‘ಮಹಾರಾಷ್ಟ್ರ ಅಭಿವೃದ್ಧಿಯ ಹಿತಾಸಕ್ತಿಗಾಗಿ ಮಹಾರಾಷ್ಟ್ರ ಸರ್ಕಾರಕ್ಕೆ ಯಾವುದೇ ರಾಜಕೀಯ ಪಕ್ಷ ಅಥವಾ ವೈಯಕ್ತಿಕ ವ್ಯಕ್ತಿ ನೀಡುವ ಷರತ್ತು ರಹಿತ ಬೆಂಬಲವನ್ನು ಬಿಜೆಪಿ ವಿಳಂಬವಿಲ್ಲದೇ ನಿಶ್ಚಿತವಾಗಿಯೂ ಸ್ವಾಗತಿಸಲಿದೆ’ ಎಂದೂ ಅವರು ತಿಳಿಸಿದ್ದಾರೆ.

ಗಡ್ಕರಿ ಭೇಟಿ ಮಾಡಿದ ಫಡ್ನವೀಸ್ (ನವದೆಹಲಿ, ಪಿಟಿಐ ವರದಿ): ಮಹಾರಾಷ್ಟ್ರದ ನಿಯೋಜಿತ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್್ ಅವರು ಕೇಂದ್ರ  ಸಚಿವ ನಿತಿನ್ ಗಡ್ಕರಿ ಅವರನ್ನು ಗುರುವಾರ ಭೇಟಿ ಮಾಡಿದರು.

ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿರುವ ಫಡ್ನವೀಸ್್ ಅವರು, ತಮ್ಮಲ್ಲಿ ನಂಬಿಕೆ ಇರಿಸಿ ಜವಾಬ್ದಾರಿ ನೀಡಿದ್ದಕ್ಕಾಗಿ   ಪಕ್ಷದ ಹಿರಿಯ ಮುಖಂಡರಿಗೆ ಕೃತಜ್ಞತೆ ತಿಳಿಸಲು ಗುರುವಾರ ಮುಂಬೈನಿಂದ ರಾಷ್ಟ್ರ ರಾಜಧಾನಿ ನವದೆಹಲಿಗೆ ಬಂದಿದ್ದಾರೆ.

ಮಹಾರಾಷ್ಟ್ರದ ನಾಗ್ಪುರ್ ಮೂಲದ ಫಡ್ನವೀಸ್ ಅವರು, ನವದೆಹಲಿ ವಿಮಾನ ನಿಲ್ದಾಣದಿಂದ ನೇರವಾಗಿ ಮೋತಿಲಾಲ್ ನೆಹರೂ ಮಾರ್ಗದಲ್ಲಿರುವ ಗಡ್ಕರಿ ಅವರ ನಿವಾಸಕ್ಕೆ ತೆರಳಿ ಹಲವು ವಿಷಯಗಳ ಬಗ್ಗೆ ಚರ್ಚಿಸಿದರು.

ಫಡ್ನವೀಸ್ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನೂ ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.