ADVERTISEMENT

‘ಶೇ 100ರಷ್ಟು ಎಫ್‌ಡಿಐಗೆ ಅವಕಾಶ’

​ಪ್ರಜಾವಾಣಿ ವಾರ್ತೆ
Published 30 ಮೇ 2014, 19:30 IST
Last Updated 30 ಮೇ 2014, 19:30 IST

ನವದೆಹಲಿ (ಪಿಟಿಐ): ರಕ್ಷಣಾ ನೀತಿಯಲ್ಲಿ ಭಾರಿ ಬದಲಾವಣೆ ತರಲು ಹೊರಟಿರುವ ಕೇಂದ್ರ ಸರ್ಕಾರವು ಶೇ 100ರಷ್ಟು ವಿದೇಶಿ ನೇರ ಹೂಡಿಕೆಗೆ (ಎಫ್‌ಡಿಐ) ಅವಕಾಶ ನೀಡಲು ನಿರ್ಧರಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಅಧಿಕಾರ ವಹಿಸಿಕೊಂಡ ಮೂರೇ ದಿನಗಳಲ್ಲಿ ಈ ಸಂಬಂಧ ವಿಧಿವಿಧಾನಕ್ಕೆ ಚಾಲನೆ ನೀಡಲಾಗಿದೆ.
ಈ ಸಂಬಂಧ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು  ಸಂಪುಟ ಟಿಪ್ಪಣಿ ಸಿದ್ಧಪಡಿಸಿದೆ.

ಈಗ ರಕ್ಷಣಾ ಕ್ಷೇತ್ರದಲ್ಲಿ ಗರಿಷ್ಠ ಶೇ 26ರಷ್ಟು ವಿದೇಶಿ ನೇರ ಹೂಡಿಕೆಗೆ ಅವಕಾಶವಿದೆ. ಈ ಮಿತಿಯನ್ನು ತೆಗೆದು­ಹಾಕಿ ಸಂಪೂರ್ಣ ವಿದೇಶಿ ಹೂಡಿಕೆಗೆ (ಶೇ 100ರಷ್ಟು) ಅವಕಾಶ ನೀಡುವುದ­ರಿಂದ ಉತ್ಪಾದನಾ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ ಎಂಬುದು ಸರ್ಕಾರದ ಆಶಯವಾಗಿದೆ.

ಅಲ್ಲದೇ, ವಿದೇಶಿ ಕಂಪೆನಿಯು ಅತ್ಯಾಧುನಿಕ ತಂತ್ರಜ್ಞಾನವನ್ನು ಪರಿಚ­ಯಿ­ಸುವುದಾದರೆ ದೇಶೀಯ ಕಂಪೆನಿ­ಯನ್ನು ಸ್ವಾಧೀನಪಡಿಸಿಕೊಳ್ಳಲು ಅವ­ಕಾಶ ನೀಡುವ ಉದ್ದೇಶವನ್ನೂ ಸರ್ಕಾರ ಹೊಂದಿದೆ.

ರಕ್ಷಣಾ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆಗೆ ಅವಕಾಶ ನೀಡಿದರೆ, ಆಮದು ವೆಚ್ಚ ಭಾರಿ ಪ್ರಮಾಣದಲ್ಲಿ ಕಡಿತವಾಗಿ, ಉತ್ಪಾದನಾ ಕ್ಷೇತ್ರವನ್ನು ಉತ್ತೇಜಿಸಲು ಹಾಗೂ ಉದ್ಯೋಗ ಸೃಷ್ಟಿಸಲು ಅನುಕೂಲವಾಗುತ್ತದೆಂದು ಹೇಳಲಾಗಿದೆ. ನಮ್ಮ ದೇಶವು ಪ್ರಸ್ತುತ 48,000 ಕೋಟಿ ರೂಪಾಯಿಯ ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುತ್ತಿದೆ. 2006–07ನೇ ವರ್ಷದಿಂದ ರಕ್ಷಣಾ ಬಜೆಟ್‌ ಸರಾಸರಿ ಶೇ 13.4ರಷ್ಟು ಹೆಚ್ಚಾಗಿದೆ.

ಜಾವಡೇಕರ್‌ ಸಮರ್ಥನೆ: ಇದರಿಂದ ರಾಷ್ಟ್ರದಲ್ಲಿ ಉದ್ಯೋಗ ಸೃಷ್ಟಿಯಾಗುವ ಜತೆಗೆ ರಕ್ಷಣಾ ಉತ್ಪನ್ನಗಳ ತಯಾರಿಕೆ­ಯಲ್ಲಿ ಸ್ವಾವಲಂಬನೆ ಮೂಡುತ್ತದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದ್ದಾರೆ.

ಇದರಿಂದ ರಕ್ಷಣಾ ಸಾಮಗ್ರಿಗಳನ್ನು ಸಂಪೂರ್ಣವಾಗಿ (ಶೇ 100ರಷ್ಟು) ಆಮದು ಮಾಡಿಕೊಳ್ಳವುದು ತಪ್ಪುತ್ತದೆ ಎಂದು ರಕ್ಷಣಾ ಸ್ಥಾಯಿ ಸಮಿತಿಯ ಮಾಜಿ ಸದಸ್ಯರೂ ಆದ ಜಾವಡೇಕರ್‌ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.