ADVERTISEMENT

‘ಷರಿಯತ್‌ ಕೋರ್ಟ್‌ಗಿಲ್ಲ ಕಾನೂನಿನ ಮಾನ್ಯತೆ’

​ಪ್ರಜಾವಾಣಿ ವಾರ್ತೆ
Published 7 ಜುಲೈ 2014, 12:57 IST
Last Updated 7 ಜುಲೈ 2014, 12:57 IST

ನವದೆಹಲಿ (ಪಿಟಿಐ): ಷರಿಯತ್‌ ಕೋರ್ಟ್‌ಗಳು ಫತ್ವಾ ಹೊರಡಿಸುವುದಕ್ಕೆ ‘ಆಕ್ಷೇಪ’ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌, ಅದಕ್ಕೆ ಕಾನೂನಿನ ಸಮ್ಮತಿ ಹಾಗೂ ಸ್ಥಾನಮಾನ ಇಲ್ಲ ಎಂದು ಸೋಮವಾರ ಸ್ಪಷ್ಟಪಡಿಸಿದೆ.

ಹಲವು  ಪ್ರಕರಣಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ಮುಗ್ಧ ಜನರನ್ನು ದಂಡಿಸುವ ಆದೇಶ ನೀಡಿರುವಂಥ  ಆ ನ್ಯಾಯಾಲಯಗಳಿಗೆ ಕಾನೂನುಬದ್ಧ ಸ್ಥಾನಮಾನ ಇಲ್ಲ ಎಂಬುದರಲ್ಲಿ ‘ಸಂದೇಹವಿಲ್ಲ’ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

ಇಸ್ಲಾಂ ಸೇರಿದಂತೆ ಯಾವುದೇ ಧರ್ಮವು ಮುಗ್ಧರನ್ನು ಶಿಕ್ಷಿಸಲು ಆಸ್ಪದ ನೀಡುವುದಿಲ್ಲ ಎಂದು ಅಭಿಪ್ರಾಯ ಪಟ್ಟ ನ್ಯಾಯಮೂರ್ತಿ ಸಿ.ಕೆ.ಪ್ರಸಾದ್‌ ಅವರ ನೇತೃತ್ವದ ಪೀಠ,  ವ್ಯಕ್ತಿಯೊಬ್ಬನ ಮಾನವ ಹಕ್ಕುಗಳ ಮೇಲೆ ಪರಿಣಾಮ ಬೀರುವಂತಹ ತೀರ್ಪುಗಳನ್ನು ಯಾವುದೇ ‘ದಾರುಲ್‌ ಖ್ವಾಜಾ’ ನೀಡಬಾರದು ಎಂದು ಆದೇಶಿಸಿತು.

ADVERTISEMENT

ದೇಶದ ನ್ಯಾಯಾಂಗ ವ್ಯವಸ್ಥೆಗೆ ಸಮವಾಗಿ ಕಾರ್ಯನಿರ್ವಹಿಸುತ್ತಿವೆ ಎನ್ನಲಾದ ಷರಿಯತ್‌ ಕೋರ್ಟ್‌ಗಳ ಸಂವಿಧಾನಾತ್ಮಕ ಮಾನ್ಯತೆ ಪ್ರಶ್ನಿಸಿ  ವಕೀಲರಾದ ವಿಶ್ವ ಲೋಚನ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ.

ಫತ್ವಾ ಅನ್ನು ಜನತೆಯ ಮೇಲೆ ಹೇರುತ್ತಿರಲಿಲ್ಲ. ಅದು ಕೇವಲ ‘ಮುಫ್ತಿ’ ಅವರ ಒಂದು ಅಭಿಪ್ರಾಯವಷ್ಟೇ. ಅದನ್ನು ಜಾರಿಗೊಳಿಸುವ ಅಧಿಕಾರ ಅಥವಾ ಸಾಮರ್ಥ್ಯ ಅವರಿಗಿಲ್ಲ ಎಂದು ಅಖಿಲ ಭಾರತ ವೈಯಕ್ತಿಕ ಕಾನೂನು ಮಂಡಳಿ ಈ ಮೊದಲು ನ್ಯಾಯಾಲಯಕ್ಕೆ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.