ADVERTISEMENT

‘ಸರ್ಕಾರದ ತನಿಖೆ ನಮ್ಮಕಾಲಕ್ಕೆ ಮುಗಿಯದು’

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2014, 14:38 IST
Last Updated 28 ಅಕ್ಟೋಬರ್ 2014, 14:38 IST

ನವದೆಹಲಿ (ಪಿಟಿಐ): ಕಪ್ಪುಹಣ ಪ್ರಕರಣ ಸಂಬಂಧ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್‌, ವಿದೇಶದಲ್ಲಿ ಕಪ್ಪುಹಣ ಹೊಂದಿರುವ ಎಲ್ಲಾ ಖಾತೆದಾರರ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ನಾಳೆಯ ವೇಳೆಗೆ ಸಲ್ಲಿಸುವಂತೆ ಮಂಗಳವಾರ ಕಟ್ಟುನಿಟ್ಟಾಗಿ ಸೂಚಿಸಿದೆ.

ಎಲ್ಲಾ ಹೆಸರುಗಳನ್ನು ಬಹಿರಂಗ ಪಡಿಸುವಂತೆ ನೀಡಿರುವ ಆದೇಶವನ್ನು ತಿದ್ದುಪಡಿ ಮಾಡುವಂತೆ ಕೋರಿದ ಕೇಂದ್ರ ಸರ್ಕಾರವನ್ನು ಸರ್ವೋಚ್ಛ ನ್ಯಾಯಾಲಯ ಕಟುವಾದ ಶಬ್ದಗಳಲ್ಲಿ ನಿರಾಕರಿಸಿತು. ಅಲ್ಲದೇ ಈ ಹಿಂದಿನ ಯುಪಿಎ ಸರ್ಕಾರ ಇದನ್ನು ಒಪ್ಪಿಕೊಂಡಿತ್ತು ಎಂದೂ ನ್ಯಾಯಾಲಯ ಹೇಳಿತು.

‘ವಿದೇಶದಲ್ಲಿ ಬ್ಯಾಂಕ್‌ ಖಾತೆಗಳನ್ನು ಹೊಂದಿರುವ ಜನರನ್ನು ರಕ್ಷಿಸಲು ನೀವೇಕೆ ಪ್ರಯತ್ನಿಸುತ್ತಿದ್ದೀರಿ?. ಅವರಿಗೆ ನೀವೇಕೆ ಸಹಾಯ ಮಾಡುತ್ತಿದ್ದೀರಿ?’ ಎಂದು ಪ್ರಶ್ನಿಸಿತು.

ADVERTISEMENT

ಅಲ್ಲದೇ, ‘ಸಾಲಿಸಿಟರ್ ಜನರಲ್‌ ಅವರ ಉಪಸ್ಥಿತಿಯಲ್ಲಿ ಬಹಿರಂಗವಾಗಿಯೇ ನ್ಯಾಯಾಲಯದಲ್ಲಿ ಆದೇಶವನ್ನು ಹೊರಡಿಸಲಾಗಿದೆ. ಆದೇಶವನ್ನು ತಿದ್ದುಪಡಿ ಮಾಡುವಂತೆ ಹೊಸ ಸರ್ಕಾರ ಕೋರುವಂತಿಲ್ಲ. ನಾವು ನಮ್ಮ ಆದೇಶವನ್ನು ಮತ್ತೆ ಮುಟ್ಟುವುದಿಲ್ಲ. ಅದರ ಒಂದು ಶಬ್ದವನ್ನೂ ಬದಲಿಸುವುದಿಲ್ಲ’ ಎಂದು ಮುಖ್ಯನ್ಯಾಯಮೂರ್ತಿ ಎಚ್.ಎಲ್.ದತ್ತು ಅವರ ನೇತೃತ್ವದ ಪೀಠ ಸ್ಪಷ್ಟಪಡಿಸಿತು.

ಬ್ಯಾಂಕ್‌ ಖಾತೆಗಳ ‘ಅಕ್ರಮ’ತನವನ್ನು ತನಿಖೆ ನಡೆಸಿದ ಬಳಿಕವಷ್ಟೇ ಸರ್ಕಾರ ಬಹಿರಂಗಗೊಳಿಸಲಿದೆ ಎಂದು ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರು ಸಲ್ಲಿಸಿದ ಅರ್ಜಿಯನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿದ ನ್ಯಾಯಪೀಠ, ಕೇವಲ ಎಲ್ಲಾ ಮಾಹಿತಿಯನ್ನು ನೀಡಿ ಬಿಡಿ. ಮತ್ತೇನೂ ಮಾಡಬೇಡಿ. ನ್ಯಾಯಾಲಯವೇ ವಿಶೇಷ ತನಿಖಾ ತಂಡ ಅಥವಾ ಸಿಬಿಐನಂತಹ ಸಂಸ್ಥೆಗಳಿಗೆ ತನಿಖೆ ನಡೆಸುವಂತೆ ಸೂಚಿಸುತ್ತದೆ ಎಂದು ಹೇಳಿತು.

ಜರ್ಮನಿಯಂತಹ ವಿವಿಧ ರಾಷ್ಟ್ರಗಳು ನೀಡಿರುವ 500 ಹೆಸರುಗಳು ಸರ್ಕಾರಕ್ಕೆ ಲಭಿಸಿವೆ ಎಂದು 30 ನಿಮಿಷಗಳ ವಿಚಾರಣೆಯ ಬಳಿಕ ಅಟಾರ್ನಿ ಜನರಲ್ ಅವರು ನ್ಯಾಯ ಪೀಠಕ್ಕೆ ತಿಳಿಸಿದರು.

ಕಪ್ಪುಹಣದ ಸಂಬಂಧ ಸರ್ಕಾರ ತನ್ನಷ್ಟಕ್ಕೆ ಯಾವುದೇ ತನಿಖೆ ಗೋಜಿಗೆ ಹೋಗದಂತೆ ಸೂಚಿಸಿದ ನ್ಯಾಯಾಲಯವು, ಸರ್ಕಾರ ತನಿಖೆ ನಡೆಸಿದರೆ ಈ ಜೀವನದಲ್ಲಿ ಅದು ಮುಗಿಯುವುದಿಲ್ಲ ಎಂದೂ ಕಿಡಿಕಾರಿದೆ.

‘ನೀವು ಏನೂ ಮಾಡಬೇಡಿ. ಕೇವಲ ಖಾತೆದಾರರ ಹೆಸರುಗಳನ್ನು ನಮಗೆ ತಲುಪಿಸಿ. ಮುಂದಿನ ತನಿಖೆಗೆ ನಾವು ಆದೇಶ ನೀಡುತ್ತೇವೆ’ ಎಂದು ರಂಜನಾ ಪ್ರಕಾಶ್‌ ದೇಸಾಯಿ ಹಾಗೂ ಮದನ್‌ ಬಿ.ಲೋಕೂರ್ ಅವರನ್ನೂ ಒಳಗೊಂಡಿದ್ದ ಪೀಠ ಹೇಳಿತು.

‘ಕಪ್ಪುಹಣ ಮರಳಿ ತರುವ ವಿಷಯವನ್ನು ನಾವು ಸರ್ಕಾರಕ್ಕೆ ಬಿಡಲು ಸಾಧ್ಯವಿಲ್ಲ. ಅದು ನಮ್ಮ ಕಾಲಕ್ಕೆ ಮುಗಿಯಲು ಸಾಧ್ಯವಿಲ್ಲ’ ಎಂದೂ ನ್ಯಾಯಾಲಯ ಚಾಟಿ ಬೀಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.