ADVERTISEMENT

‘ಸುರಕ್ಷಿತವೆನಿಸಿದಾಗ ಭಾರತಕ್ಕೆ ಮರಳುವೆ’

ವಿವಾದಾತ್ಮಕ ಲೇಖಕಿ ತಸ್ಲಿಮಾ ನಸ್ರಿನ್‌ ಟ್ವೀಟ್‌

​ಪ್ರಜಾವಾಣಿ ವಾರ್ತೆ
Published 3 ಜೂನ್ 2015, 10:25 IST
Last Updated 3 ಜೂನ್ 2015, 10:25 IST

ಕೋಲ್ಕತ್ತ (ಪಿಟಿಐ): ‘ನಾನು ಶಾಶ್ವತವಾಗಿ ಭಾರತವನ್ನು ತೊರೆಯುವುದಿಲ್ಲ. ಸುರಕ್ಷಿತವೆನಿಸಿದಾಗ ನಾನು ಭಾರತಕ್ಕೆ ಮರಳುತ್ತೇನೆ’ ಎಂದು ಬಾಂಗ್ಲಾದೇಶ ಮೂಲದ ವಿವಾದಾತ್ಮಕ ಲೇಖಕಿ ತಸ್ಲಿಮಾ ನಸ್ರಿನ್‌ ಹೇಳಿದ್ದಾರೆ.

‘ಬಾಂಗ್ಲಾದೇಶದಲ್ಲಿ ನಾಸ್ತಿಕ ಬರಹಗಾರರರನ್ನು (ಬ್ಲಾಗರ್‌ಗಳನ್ನು) ಕೊಂದ ಇಸ್ಲಾಂ ಮೂಲಭೂತವಾದಿಗಳಿಂದ ನನಗೆ ಜೀವ ಬೆದರಿಕೆ ಇತ್ತು. ಭಾರತ ಸರ್ಕಾರದ ಜತೆ ನಾನು ಮಾತನಾಡಬೇಕಿದೆ. ಸುರಕ್ಷಿತ ಎನಿಸಿದಾಗ ನಾನು ಭಾರತಕ್ಕೆ ಮರಳುತ್ತೇನೆ’ ಎಂದು ನಸ್ರಿನ್‌ ಟ್ವೀಟ್‌ ಮಾಡಿದ್ದಾರೆ.

ಇದಕ್ಕೂ ಮುನ್ನಾ ಟ್ವೀಟ್‌ ಮಾಡಿರುವ ಅವರು, ‘ಉಪನ್ಯಾಸ ನೀಡಲು ಹಾಗೂ ಕುಟುಂಬ ಸದಸ್ಯರನ್ನು ಭೇಟಿಯಾಗಲು ನಾನು ಆಗಾಗ ಅಮೆರಿಕಕ್ಕೆ ಹೋಗುತ್ತಿರುತ್ತೇನೆ. ಆದರೆ, ನಾನು ಶಾಶ್ವತವಾಗಿ ಭಾರತ ತೊರೆಯುವುದಿಲ್ಲ. ಭಾರತ ಸರ್ಕಾರ ನನಗೆ ಸದಾ ಭದ್ರತೆ ಒದಗಿಸುತ್ತದೆ’ ಎಂದಿದ್ದಾರೆ.

ADVERTISEMENT

ವಿವಾದಾತ್ಮಕ ಬರಹದ ಕಾರಣಕ್ಕೆ 1994ರಲ್ಲಿ ಬಾಂಗ್ಲಾದೇಶದಿಂದ ಗಡಿಪಾರಾದ 52 ವರ್ಷದ ನರ್ಸಿನ್‌ ಅವರು ತಮ್ಮ ‘ಲಜ್ಜಾ’, ‘ದ್ವಿಖಂಡಿತೊ’ ಪುಸ್ತಕಗಳ ಮೂಲಕ ಮುಸ್ಲಿಂ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿ ನಿರಂತರ ಜೀವಬೆದರಿಕೆ ಎದುರಿಸುತ್ತಲೇ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.