ADVERTISEMENT

‘ಹೊಸ ಆಶಾಕಿರಣ, ಜವಾಬ್ದಾರಿಯ ಯುಗ’

ನರೇಂದ್ರ ಮೋದಿ ಭಾವುಕ ಭಾಷಣ

​ಪ್ರಜಾವಾಣಿ ವಾರ್ತೆ
Published 20 ಮೇ 2014, 19:30 IST
Last Updated 20 ಮೇ 2014, 19:30 IST

ನವದೆಹಲಿ (ಪಿಟಿಐ/ಐಎಎನ್‌ಎಸ್‌): ಬಡವರ, ಶೋಷಿತರ ಹಾಗೂ ಸೌಲಭ್ಯ ವಂಚಿತರನ್ನು ಮೇಲೆತ್ತುವುದಕ್ಕೆ ತಮ್ಮ ಸರ್ಕಾರ ಬದ್ಧ ಎಂದು ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ಮಂಗಳ­ವಾರ ನಡೆದ ಬಿಜೆಪಿ  ಸಂಸದರ ಸಭೆಯಲ್ಲಿ ಸಂಸದೀಯ ಪಕ್ಷದ ನಾಯಕನಾಗಿ  ಆಯ್ಕೆ­ಯಾದ ಬಳಿಕ ಮೋದಿ ಭಾವುಕರಾಗಿ ಸುಮಾರು 30 ನಿಮಿಷಗಳ ಕಾಲ ಭಾಷಣ ಮಾಡಿದರು.

ಮೋದಿ ಭಾಷಣದ ಪೂರ್ಣಪಾಠ: ‘ಜನ­ಸಾಮಾನ್ಯರಲ್ಲಿ ಹೊಸ ಆಶಾಕಿರಣ ಮೂಡಿದೆ. ಆ ಮೂಲಕ ಜವಾ­ಬ್ದಾರಿಯ ಯುಗ ಶುರು­ವಾಗಿದೆ. ಬಿಜೆಪಿಗೆ ಸಿಕ್ಕಿರುವ ಈ ಅಭೂತಪೂರ್ವ ವಿಜಯವು ನಂಬಿಕೆ ಹಾಗೂ ನಿರೀಕ್ಷೆಗೆ ಕೊಟ್ಟ ಜನಾದೇಶವಾಗಿದೆ. ಜನರ ನಿರೀಕ್ಷೆ ಈಡೇರಿಸು­ವುದಕ್ಕೆ ಶಕ್ತಿಮೀರಿ ಪ್ರಯತ್ನಿಸುತ್ತೇನೆ.

‘ಹಳೆಯ ಕೆಟ್ಟ ಅನುಭವಗಳನ್ನು ಮರೆ­ತು­ಬಿಡಿ. ನಿರಾಶಾವಾದದಿಂದ ಏನನ್ನೂ ಸಾಧಿಸ­ಲಾಗದು’.
‘ನಾನು ಶಿಸ್ತಿನ ಸಿಪಾಯಿ. ಕಡುಬಡ­ವರಿಗಾಗಿ ಹಾಗೂ ಯುವಜನತೆಗಾಗಿ ಕೆಲಸ ಮಾಡಲು ಬದ್ಧ. ಗ್ರಾಮೀಣ ಪ್ರದೇಶದಲ್ಲಿ ತಾಯಂದಿರ ಹಾಗೂ ಸಹೋದರಿಯ ಸುರಕ್ಷತೆಗೆ ಹೊಸ ಸರ್ಕಾರ ಬದ್ಧವಾಗಿರುತ್ತದೆ’.

‘ಪಕ್ಷಕ್ಕಿಂತ ನಾನು ದೊಡ್ಡವನಲ್ಲ. ಈ ಸಾಧನೆ ಪಕ್ಷದ ಸಂಘಟನಾ ಶಕ್ತಿಗೆ ದೊರೆತ ಜಯ. ಸ್ವತಂತ್ರ ಭಾರತದಲ್ಲಿ ಹುಟ್ಟಿದವರ ಕೈಗೆ ಮೊದಲ ಬಾರಿ ಅಧಿಕಾರ ಸಿಕ್ಕಿದೆ. ನಾವು ದೇಶದ ಸ್ವಾತಂತ್ರ್ಯ­ಕ್ಕಾಗಿ ಹೋರಾಟ ಮಾಡ­ಲಿಲ್ಲ.  ಆದರೆ, ಇನ್ನು ಮುಂದೆ ದೇಶ­ವನ್ನು ಅಭಿವೃದ್ಧಿ­ಯತ್ತ ಕೊಂಡೊಯ್ಯು­ವುದಕ್ಕೆ ಹಾಗೂ ಜನರ ಶ್ರೇಯೋಭಿ­ವೃದ್ಧಿಗೆ ನಮ್ಮ ಬದುಕನ್ನು ಮುಡಿ­ಪಾಗಿಡುತ್ತೇವೆ’

‘2019ರಲ್ಲಿ ನಮ್ಮ ಸಾಧನೆಯ ವರದಿ ಮಂಡಿ­ಸುತ್ತೇನೆ. ಸರ್ಕಾರ ನನಗಾಗಿ ಅಲ್ಲ, ದೇಶಕ್ಕಾಗಿ. ಈ ಹಿಂದಿನ ಎಲ್ಲ ಸರ್ಕಾರಗಳು ದೇಶದ ಶ್ರೇಯೋಭಿ­ವೃದ್ಧಿಗೆ ಕೊಡುಗೆ ನೀಡಿವೆ. ಹಿಂದಿನವರು ಮಾಡಿದ ಉತ್ತಮ ಕೆಲಸಗಳನ್ನು ನಾವು ಮುಂದುವರಿಸಿಕೊಂಡು ಹೋಗುತ್ತೇವೆ’.

‘ಐದು ಪೀಳಿಗೆಯ ಕಾರ್ಯಕರ್ತರ ತ್ಯಾಗ­ದಿಂದಾಗಿ ನಾವು ಈ ಮಟ್ಟಕ್ಕೆ ಬಂದಿ­ದ್ದೇವೆ. ಚುನಾವಣೆಯಲ್ಲಿ ಯಾರು ಗೆದ್ದರು, ಯಾರು ಸೋತರು ಎನ್ನುವುದೆಲ್ಲ ಮುಗಿದ ಅಧ್ಯಾಯ. ಭಾರತದ ಹಾಗೂ ವಿಶ್ವದ ಜನರಲ್ಲಿ ಭರವಸೆಯ ಹೊನ್ನ ಕಿರಣ ಮೂಡಿದೆ. ಈಗೇನಿದ್ದರೂ ಜವಾಬ್ದಾರಿಯ ಸಮಯ’.

‘ನನ್ನ ಪ್ರತಿಯೊಂದು ಕ್ಷಣವನ್ನೂ ಜನರಿಗಾಗಿ ಮೀಸಲಿಡುತ್ತೇನೆ. ಈ ಚುನಾವಣೆ ಫಲಿತಾಂಶವು ಜನರಲ್ಲಿ ಪ್ರಜಾತಂತ್ರದ ಮೇಲಿನ ನಂಬಿಕೆಯನ್ನು ಹೆಚ್ಚಿಸಿದೆ’.

‘ಯುಪಿಎ ಸರ್ಕಾರ ಏನನ್ನೂ ಮಾಡಿಲ್ಲ ಎನ್ನುವುದನ್ನು ನಾನು ನಂಬುವುದಿಲ್ಲ. ಅವರ ಕೈಯಲ್ಲಿ ಏನು ಸಾಧ್ಯವೋ ಅದನ್ನು ಮಾಡಿ­ದ್ದಾರೆ. ಒಳ್ಳೆಯ ಕೆಲಸಕ್ಕೆ ಅವರು ಪ್ರಶಂಸೆಗೆ ಅರ್ಹರು’.

ಪ್ರಜಾತಂತ್ರ ದೇಗುಲಕ್ಕೆ ಶಿರಬಾಗಿ ವಂದನೆ: ಮೋದಿ ಅವರು ಕಾರಿನಿಂದ ಇಳಿದವರೇ ಸಂಸತ್‌್ ಭವನದ ಮೆಟ್ಟಿಲುಗಳಿಗೆ ಶಿರಬಾಗಿ ವಂದಿಸಿ  ಸೆಂಟ್ರಲ್‌ ಹಾಲ್‌ ಪ್ರವೇಶಿಸಿದರು.

ಪ್ರವೇಶ ದ್ವಾರದಲ್ಲಿ ನಿಂತಿದ್ದ ಬಿಜೆಪಿ ಮುಖಂಡರಾದ ಗೋಪಿನಾಥ್‌ ಮುಂಡೆ ಹಾಗೂ ನಿತಿನ್‌್ ಗಡ್ಕರಿ ಅವರು ಮೋದಿ ಅವರನ್ನು ಅಭಿನಂದಿಸಿದರು.

ಪ್ರಧಾನಿ ಟ್ವಿಟರ್‌ ಖಾತೆ ಬದಲಾವಣೆ: ಬಿಜೆಪಿ ಆಕ್ಷೇಪ
ನವದೆಹಲಿ (ಐಎಎನ್‌ಎಸ್‌):  ನಿರ್ಗಮಿತ ಪ್ರಧಾನಿ ಮನಮೋಹನ್ ಸಿಂಗ್  ಅವಧಿ­ಯಲ್ಲಿ ತೆರೆಯಲಾಗಿದ್ದ ಸಾಮಾಜಿಕ ಜಾಲತಾಣ ಟ್ವಿಟರ್‌ ಖಾತೆಯನ್ನು ಪ್ರಧಾನಿ ಕಚೇರಿ  ಮಂಗಳವಾರ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಬದಲಾಯಿ­ಸಿರುವುದು ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದೆ. @ಪಿಎಂಒಇಂಡಿಯಾ ಎಂಬ ಹೆಸರಿನಲ್ಲಿ ಟ್ವಿಟರ್‌ ಖಾತೆಯನ್ನು ಹೊಂದಿದ್ದ ಪ್ರಧಾನಿ ಕಚೇರಿ ಖಾತೆಯನ್ನು @ಪಿಎಂಒಇಂಡಿಯಾ ಆರ್ಕೈವ್‌ ಎಂದು ಮಂಗಳವಾರ ಬದ­ಲಾಯಿಸಿದೆ.


ಪ್ರಧಾನಿ ಕಚೇರಿಯ ಈ ಕ್ರಮವನ್ನು ‘ಅಕ್ರಮ, ಅನೈತಿಕ ಹಾಗೂ ನಾಚಿಕೆಗೇಡಿನ ಸಂಗತಿ’ ಎಂದು ಬಿಜೆಪಿ ವಕ್ತಾರೆ ಮೀನಾಕ್ಷಿ ಲೇಖಿ ಕಟುವಾಗಿ ಟೀಕಿಸಿದ್ದಾರೆ. ಪ್ರಧಾನಿ ಕಚೇರಿಯಿಂದ ನಿರ್ಗಮಿಸುತ್ತಿರುವ ಹಾಗೂ ಈ ಖಾತೆಯ ನಿರ್ವಹಣೆಯ ಹೊಣೆ ಹೊತ್ತಿದ್ದ ಸಿಬ್ಬಂದಿ ಸರ್ಕಾರಕ್ಕೆ ಸೇರಿರುವ ಈ ಖಾತೆಯನ್ನು ಬದಲಿಸಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ. ‘ಟ್ವಿಟರ್‌ ಖಾತೆ ಪ್ರಧಾನಿಯ ವೈಯಕ್ತಿಕ ಖಾತೆಯಲ್ಲ. ಅದು ಪ್ರಧಾನಿ ಕಚೇರಿಯ ಅಧಿಕೃತ ಖಾತೆ. ಹೀಗಾಗಿ ಹೊಸ ಸಿಬ್ಬಂದಿಗೆ ಟ್ವಿಟರ್‌ ಖಾತೆಯನ್ನು ಹಸ್ತಾಂತರಿಸಲಾಗುವುದು’ ಎಂದು ಮನೋಹನ್ ಸಿಂಗ್ ಮಾಧ್ಯಮ ಸಲಹೆಗಾರ ಪಂಕಜ್ ಪಚೌರಿ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT