ADVERTISEMENT

139 ಗಂಟೆ ಪಾಠ: ಗಿನ್ನೆಸ್‌ ದಾಖಲೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2014, 19:30 IST
Last Updated 2 ಏಪ್ರಿಲ್ 2014, 19:30 IST

ಡೆಹ್ರಾಡೂನ್‌(ಪಿಟಿಐ): ನಿರಂತರವಾಗಿ 139 ಗಂಟೆಗಳ ಕಾಲ ಪಾಠ ಮಾಡುವ ಮೂಲಕ ಇಲ್ಲಿನ ಅಧ್ಯಾಪಕರೊಬ್ಬರು  ಗಿನ್ನೆಸ್‌ ವಿಶ್ವ ದಾಖಲೆ ಪುಸ್ತಕಕ್ಕೆ ಸೇರಿದ್ದಾರೆ.

‘26 ಹರೆಯದ ಅರವಿಂದ ಮಿಶ್ರಾ ಅವರು ನಿರಂತರವಾಗಿ 139 ಗಂಟೆ 42 ನಿಮಿಷ 56 ಸೆಕೆಂಡ್‌ಗಳ ಕಾಲ ಪಾಠ ಮಾಡಿ ವಿಶ್ವ ದಾಖಲೆ ಬರೆದಿದ್ದಾರೆ. ಅವರ ಈ ಗಮನಾರ್ಹ  ಸಾಧನೆಯನ್ನು ಗಿನ್ನೆಸ್‌ ಪುಸ್ತಕದಲ್ಲಿ ಸೇರಿಸಲಾಗಿದೆ’ ಎಂದು ಗ್ರಾಫಿಕ್‌ ಎರಾ ವಿಶ್ವವಿದ್ಯಾ­ನಿಲಯದ ಸಮೂಹ ಸಂವಹನ ಮತ್ತು ಮಾಧ್ಯಮ ವಿಭಾಗ ನಿರ್ದೇಶಕ ಸುಭಾಷ್‌ ಗುಪ್ತಾ ತಿಳಿಸಿದ್ದಾರೆ.

ಈ ಮುಂಚೆ ಪೊಲೆಂಡ್‌ನ ಅಧ್ಯಾಪಕ­ರೊಬ್ಬರು 120 ಗಂಟೆಗಳ ಕಾಲ ಪಾಠ ಮಾಡಿ ವಿಶ್ವ ದಾಖಲೆ ನಿರ್ಮಿಸಿದ್ದರು. ಈ ದಾಖಲೆಯನ್ನು ಅರವಿಂದ ಮಿಶ್ರಾ ಮುರಿದಿದ್ದಾರೆ. ಮಿಶ್ರಾ ಅವರು ಮಾರ್ಚ್‌ 1ರಿಂದ ನಿರಂತರವಾಗಿ ಏಳು ದಿನ, ಏಳು ರಾತ್ರಿ  ಮಾರ್ಚ್‌ 7 ರವರೆಗೆ ಪಾಠ ಮಾಡಿ­ದ್ದರು.

ಇವರು ಪಾಠ ಮಾಡಿದ ದೃಶ್ಯಗಳ ತುಣುಕುಗಳನ್ನು ಗಿನ್ನೆಸ್‌ ಬುಕ್‌ ಆಫ್‌ ವರ್ಲ್ಡ್‌ ರಿಕಾರ್ಡ್‌ನ ಲಂಡನ್‌ ಕಚೇರಿಗೆ ಕಳುಹಿಸಲಾಗಿತ್ತು.
ರೆಕಾರ್ಡಿಂಗ್‌ ಕ್ಯಾಮೆರಾ, ಕಂಪ್ಯೂ­ಟರ್‌ ಹಾರ್ಡ್‌ ಡಿಸ್ಕ್‌, ನೇರ ಪ್ರಸಾರದ ಮಾಹಿತಿ ಮತ್ತು ಇನ್ನಿತರ ದಸ್ತಾವೇಜು­ಗಳನ್ನು ಮಿಶ್ರಾ ಲಂಡನ್‌ ಕಚೇರಿಗೆ ಕಳುಹಿಸಿದ್ದರು.

ಗಿನ್ನೆಸ್‌ ವಿಶ್ವದಾಖಲೆಯ 65 ದೇಶ­ಗಳ ಪ್ರತಿನಿಧಿಗಳು ಈ ವಿಡಿಯೊ ಚಿತ್ರಾ­ವಳಿಗಳ ನೇರಪ್ರಸಾರವನ್ನು  ನೋಡಿದ್ದರು. ಅದ್ವಿತೀಯ ಸಾಧನೆ ಮಾಡಿದ ಅಧ್ಯಾಪಕ ಅರವಿಂದ ಮಿಶ್ರಾ ಅವರಿಗೆ ವಿಶ್ವವಿದ್ಯಾನಿಲಯ ಅಧ್ಯಕ್ಷ ಕಮಲ್‌ ಘನಶಾಲಾ ಅವರು ಒಂದು ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಎರಡು ಬಡ್ತಿ ನೀಡಿದ್ದಾರೆ ಎಂದು ಗುಪ್ತಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.