ADVERTISEMENT

1962 ಭಾರತಕ್ಕಿಂತ 2017ರ ಭಾರತ ಭಿನ್ನವಾಗಿದೆ: ಚೀನಾಕ್ಕೆ ಜೇಟ್ಲಿ ತಿರುಗೇಟು

ಏಜೆನ್ಸೀಸ್
Published 30 ಜೂನ್ 2017, 12:16 IST
Last Updated 30 ಜೂನ್ 2017, 12:16 IST
ರಕ್ಷಣಾ ಸಚಿವ ಅರುಣ್‌ ಜೇಟ್ಲಿ
ರಕ್ಷಣಾ ಸಚಿವ ಅರುಣ್‌ ಜೇಟ್ಲಿ   

ನವದೆಹಲಿ: ‘1962ರ ಯುದ್ಧದ ಇತಿಹಾಸದಿಂದ ಭಾರತ ಸೇನೆ ಪಾಠ ಕಲಿಯಲಿ’ ಎಂದು ಚೀನಾ ನೀಡಿದ್ದ ಎಚ್ಚರಿಕೆಗೆ ತಿರುಗೇಟು ನೀಡಿರುವ ರಕ್ಷಣಾ ಸಚಿವ ಅರುಣ್‌ ಜೇಟ್ಲಿ, ‘1962ರ ಭಾರತಕ್ಕಿಂತ 2017ರ ಭಾರತ ಭಿನ್ನವಾಗಿದೆ’ ಎಂದಿದ್ದಾರೆ.

ಸಿಕ್ಕಿಂನ ದೊಂಗ್‌ಲೊಂಗ್‌ ಪ್ರದೇಶದಲ್ಲಿ ಭಾರತ ನಿಯೋಜಿಸಿರುವ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಷರತ್ತು ವಿಧಿಸಿರುವ ಚೀನಾ 1962ರ ಯುದ್ಧವನ್ನು ನೆನಪಿಸುತ್ತಾ, ‘ಇತಿಹಾಸದಿಂದ ಭಾರತೀಯ ಸೇನೆ ಪಾಠ ಕಲಿತುಕೊಳ್ಳಲಿ’ ಎಂದು ಹೇಳಿತ್ತು.

ಇದಕ್ಕೆ ಪ್ರತಿಕ್ರಿಯಿಸಿರುವ ಜೇಟ್ಲಿ, ‘ಅವರು (ಚೀನಾ) ನಮಗೆ ಇತಿಹಾಸ ನೆನಪಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅಂದಿನ ಭಾರತಕ್ಕೂ ಇಂದಿನ ಭಾರತಕ್ಕೂ ತುಂಬಾ ವ್ಯತ್ಯಾಸವಿದೆ’ ಎಂದು ಜೇಟ್ಲಿ ಹೇಳಿದ್ದಾರೆ.

ADVERTISEMENT

‘ಭೂತಾನ್‌ನ ಭೂಪ್ರದೇಶವನ್ನು ಚೀನಾ ಕಬಳಿಸುತ್ತಿದೆ ಎಂದು ಭೂತಾನ್‌ ಸರ್ಕಾರ ಹೇಳಿದೆ. ಚೀನಾದ ಈ ನಡೆ ತಪ್ಪು’ ಎಂದು ಜೇಟ್ಲಿ ತಿಳಿಸಿದ್ದಾರೆ.

‘ಭೂತಾನ್‌ ಸರ್ಕಾರದ ಪ್ರಕಟಣೆಯ ಬಳಿಕ ಎಲ್ಲವೂ ಸ್ಪಷ್ಟವಾಗಿದೆ. ಚೀನಾ ತಗಾದೆ ತೆಗೆಯುತ್ತಿರುವ ಪ್ರದೇಶ ಭೂತಾನ್‌ಗೆ ಸೇರಿದ್ದು. ಭೂತಾನ್‌ ಮತ್ತು ಭಾರತದ ಗಡಿಗೆ ಹೊಂದಿಕೊಂಡಿರುವ ಪ್ರದೇಶ ಅದು. ಈ ಪ್ರದೇಶದಲ್ಲಿ ಭದ್ರತೆ ಒದಗಿಸಲು ಭೂತಾನ್‌ ಮತ್ತು ಭಾರತ ಸಿದ್ಧತೆ ನಡೆಸಿವೆ’ ಎಂದು ಅವರು ಹೇಳಿದ್ದಾರೆ.

‘ಗಡಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂಬ ನಿಯಮವನ್ನು ಚೀನಾ ಉಲ್ಲಂಘಿಸುತ್ತಿದೆ ಎಂದು ಭೂತಾನ್‌ ಹೇಳಿದೆ. ಬೇರೆ ದೇಶಗಳ ಭೂ ಪ್ರದೇಶವನ್ನು ತನಗೆ ಸೇರಿದ್ದು ಎಂದು ಚೀನಾ ಕಬಳಿಸಲು ಮುಂದಾಗುತ್ತಿರುವುದು ಸರಿಯಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.