ADVERTISEMENT

20 ವರ್ಷ ಹಳೆಯ ಪ್ರಕರಣದಲ್ಲಿ ಸಲ್ಮಾನ್‌ಗೆ 5 ವರ್ಷ ಶಿಕ್ಷೆ

ಪಿಟಿಐ
Published 7 ಏಪ್ರಿಲ್ 2018, 5:19 IST
Last Updated 7 ಏಪ್ರಿಲ್ 2018, 5:19 IST
ವಿಚಾರಣೆಗಾಗಿ ನ್ಯಾಯಾಲಯಕ್ಕೆ ಬಂದ ಸಲ್ಮಾನ್‌ ಖಾನ್‌ –ಪಿಟಿಐ ಚಿತ್ರ
ವಿಚಾರಣೆಗಾಗಿ ನ್ಯಾಯಾಲಯಕ್ಕೆ ಬಂದ ಸಲ್ಮಾನ್‌ ಖಾನ್‌ –ಪಿಟಿಐ ಚಿತ್ರ   

ಜೋಧಪುರ: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ (52)ಅವರು 1998ರ ಅಕ್ಟೋಬರ್‌ನಲ್ಲಿ ರಾಜಸ್ಥಾನದ ಜೋಧಪುರ ಸಮೀಪದ ಹಳ್ಳಿಯಲ್ಲಿ ಕೃಷ್ಣಮೃಗ ಬೇಟೆಯಾಡಿರುವುದು ಸಾಬೀತಾಗಿದೆ. ತಪ್ಪಿತಸ್ಥ ಸಲ್ಮಾನ್‌ಗೆ ನ್ಯಾಯಾಲಯ ಐದು ವರ್ಷ ಶಿಕ್ಷೆ ವಿಧಿಸಿದೆ. ಅವರನ್ನು ಜೋಧಪುರ ಕೇಂದ್ರೀಯ ಕಾರಾಗೃಹಕ್ಕೆ ಕಳುಹಿಸಲಾಗಿದೆ.

ಬೇಟೆ ಸಂದರ್ಭದಲ್ಲಿ ಅವರ ಜತೆಗಿದ್ದ ನಟರಾದ ಸೈಫ್‌ ಅಲಿ ಖಾನ್‌, ತಬು, ನೀಲಂ ಮತ್ತು ಸೋನಾಲಿ ಬೇಂದ್ರೆ ಹಾಗೂ ಸ್ಥಳೀಯ ವ್ಯಕ್ತಿ ದುಷ್ಯಂತ್‌ ಸಿಂಗ್‌ ಅವರನ್ನು ಖುಲಾಸೆ ಮಾಡಲಾಗಿದೆ.

ನ್ಯಾಯಾಲಯದಿಂದ ಹೊರಗಿನ ರಸ್ತೆಯಲ್ಲಿ ಸುಮಾರು ಎರಡು ಕಿ.ಮೀ.ವರೆಗೆ ಸಾವಿರಾರು ಸಿನಿಮಾಪ್ರೇಮಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳು ಸೇರಿದ್ದರು. ‌

ADVERTISEMENT

ಬಂದೋಬಸ್ತ್‌ಗಾಗಿ ಭಾರಿ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ನ್ಯಾಯಾಲಯವು ಶಿಕ್ಷೆ ಪ್ರಕಟಿಸಿದ ಕೂಡಲೇ ಸಲ್ಮಾನ್‌ ಅವರನ್ನು ಪೊಲೀಸರು ತಮ್ಮ ಬೊಲೆರೊ ಜೀಪ್‌ನಲ್ಲಿ ಜೈಲಿಗೆ ಕರೆದೊಯ್ದರು.

ಕೃಷ್ಣಮೃಗ ಬೇಟೆ ಪ್ರಕರಣದ ಅಂತಿಮ ಸುತ್ತಿನ ವಾದ–‍ಪ್ರತಿವಾದಗಳು ಮಾರ್ಚ್‌ 28ರಂದು ಕೊನೆಗೊಂಡಿದ್ದವು. ಮುಖ್ಯ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ದೇವ್‌ಕುಮಾರ್‌ ಖತ್ರಿ ತೀರ್ಪು ಕಾದಿರಿಸಿದ್ದರು. ಗುರುವಾರ ಮಧ್ಯಾಹ್ನ ಅವರು ತೀರ್ಪು ಪ್ರಕಟಿಸಿದರು. ಐದು ವರ್ಷ ಸಜೆ ಜತೆಗೆ ₹10 ಸಾವಿರ ದಂಡವನ್ನೂ ಸಲ್ಮಾನ್‌ಗೆ ವಿಧಿಸಲಾಗಿದೆ.

ವನ್ಯಮೃಗ ಸಂರಕ್ಷಣೆ ಕಾಯ್ದೆಯ 9/51ನೇ ಸೆಕ್ಷನ್‌ ಅಡಿಯಲ್ಲಿ ಶಿಕ್ಷೆ  ನೀಡಲಾಗಿದೆ. ಈ ಅಪರಾಧಕ್ಕೆ ಗರಿಷ್ಠ ಆರು ವರ್ಷ ಶಿಕ್ಷೆ ವಿಧಿಸಲು ಅವಕಾಶ ಇದೆ.

‘ಹಮ್‌ ಸಾಥ್‌ ಸಾಥ್‌ ಹೈ’ ಸಿನಿಮಾ ಚಿತ್ರೀಕರಣದ ವೇಳೆಯಲ್ಲಿ ಕಂಕಣೀ ಗ್ರಾಮದಲ್ಲಿ ಸಲ್ಮಾನ್‌ ಕೃಷ್ಣಮೃಗವನ್ನು ಬೇಟೆಯಾಡಿದ್ದರು. ಕೃಷ್ಣಮೃಗವನ್ನು ಅಪಾಯದ ಅಂಚಿನಲ್ಲಿರುವ ಪ್ರಾಣಿ ಎಂದು ಗುರುತಿಸಲಾಗಿದೆ.

4ನೇ ಬಾರಿ ಜೋಧಪುರ ಜೈಲಿಗೆ

ನಾಲ್ಕನೇ ಬಾರಿ ಸಲ್ಮಾನ್‌ ಅವರು ಜೋಧಪುರ ಕೇಂದ್ರೀಯ ಕಾರಾಗೃಹ ಸೇರಿದ್ದಾರೆ. 1998, 2006 ಮತ್ತು 2007ರಲ್ಲಿ ಒಟ್ಟು 18 ದಿನಗಳನ್ನು ಅವರು ಇದೇ ಜೈಲಿನಲ್ಲಿ ಕಳೆದಿದ್ದರು. ನಾಲ್ಕು ಬಾರಿ ಜೈಲು ಸೇರುವುದಕ್ಕೂ ವನ್ಯಮೃಗ ಬೇಟೆ ಪ್ರಕರಣವೇ ಕಾರಣ. ಬ್ಯಾರಕ್‌ ಎರಡರಲ್ಲಿ ಅವರ ಸೆಲ್‌ ಇದೆ. ಈ ಸೆಲ್‌ಗೆ ಭಾರಿ ಭದ್ರತೆ ಒದಗಿಸಲಾಗಿದೆ. ಅತ್ಯಾಚಾರ ಆರೋಪ ಹೊತ್ತಿರುವ ಸ್ವಯಂಘೋಷಿತ ದೇವಮಾನವ ಅಸಾರಾಮ್‌ ಬಾಪು ಕೂಡ ಇದೇ ಜೈಲಿನಲ್ಲಿ ಇದ್ದಾರೆ.

ಬಹುದೊಡ್ಡ ತಾರೆ: ‘ಸಲ್ಮಾನ್‌ ಖಾನ್‌ ಸಾಮಾನ್ಯ ನಟ ಅಲ್ಲ, ಅವರು ಬಹುದೊಡ್ಡ ತಾರೆ. ಅಸಂಖ್ಯ ಅಭಿಮಾನಿಗಳಿದ್ದಾರೆ. ಅಭಿಮಾನಿಗಳು ಅವರನ್ನು ಅನುಕರಿಸುತ್ತಾರೆ. ಹಾಗಾಗಿ ಯಾವುದೇ ಕಾನೂನು ಉಲ್ಲಂಘನೆ ಆಗದಂತೆ ನೋಡಿಕೊಳ್ಳುವುದು ಅವರ ಜವಾಬ್ದಾರಿ’ ಎಂದು ನ್ಯಾಯಾಧೀಶರು ಹೇಳಿದರು.

ತೀರ್ಪು ನೋಡಿ ಆಶ್ಚರ್ಯವಾಗಿದೆ: ಇದೇ ರೀತಿಯಲ್ಲಿ ದಾಖಲಾದ ಎರಡು ಪ್ರಕರಣಗಳಲ್ಲಿ ಸಲ್ಮಾನ್‌ ಅವರನ್ನು ರಾಜಸ್ಥಾನ ಹೈಕೋರ್ಟ್‌ ಖುಲಾಸೆ ಮಾಡಿದೆ. ಹಾಗಾಗಿ ಈ ಪ್ರಕರಣದಲ್ಲಿಯೂ ಖುಲಾಸೆ ಆಗಬಹುದು ಎಂಬ ನಿರೀಕ್ಷೆ ಇತ್ತು. ತೀರ್ಪು ನೋಡಿ ಆಶ್ಚರ್ಯವಾಗಿದೆ. ಸೆಷನ್ಸ್‌ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಸಲ್ಮಾನ್‌ ಪರ ವಕೀಲ ಆನಂದ್‌ ದೇಸಾಯಿ ಹೇಳಿದ್ದಾರೆ.

ಮೂರು ಬೇಟೆಗಳು

ಸೆಪ್ಟೆಂಬರ್ 27: ಜೋಧಪುರ ಹೊರವಲಯದ ಭಾವಡ್‌ನಲ್ಲಿ ಚಿಂಕಾರ ಕೊಂದ ಪ್ರಕರಣ

ಸೆಪ್ಟೆಂಬರ್ 28: ಜೋಧಪುರ ಸಮೀಪದ ಗೋಧಾ ಫಾರ್ಮ್‌ನಲ್ಲಿ ಎರಡು ಚಿಂಕಾರಗಳನ್ನು ಕೊಂದ ಪ್ರಕರಣ

ಅಕ್ಟೋಬರ್ 2: ಕಂಕಿಣೀ ಗ್ರಾಮದ ಬಳಿ ಎರಡು ಕೃಷ್ಣಮೃಗಗಳನ್ನು ಕೊಂದ ಪ್ರಕರಣ

ಕ್ಟೋಬರ್ 15: ಪರವಾನಗಿ ಅವಧಿ ಮುಗಿದಿದ್ದರೂ ಶಸ್ತ್ರಾಸ್ತ್ರಗಳನ್ನು ಇರಿಸಿಕೊಂಡಿದ್ದ ಮತ್ತು ಬಳಸಿದ ಪ್ರಕರಣ

ಖುಲಾಸೆಗೊಂಡವರು: ಸೈಫ್‌ ಅಲಿ ಖಾನ್‌, ತಬು ನೀಲಂ, ಸೋನಾಲಿ ಬೇಂದ್ರೆ, ದುಷ್ಯಂತ್‌ ಸಿಂಗ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.