ADVERTISEMENT

4 ದಶಕದಿಂದ ಕೋಮಾದಲ್ಲಿದ್ದ ಅರುಣಾ ವಿಧಿವಶ

​ಪ್ರಜಾವಾಣಿ ವಾರ್ತೆ
Published 18 ಮೇ 2015, 6:40 IST
Last Updated 18 ಮೇ 2015, 6:40 IST

ಮುಂಬೈ (ಪಿಟಿಐ): ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಕಳೆದ 42 ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿದ್ದ ಮುಂಬೈನ ಕೆ.ಇ.ಎಂ ಆಸ್ಪತ್ರೆಯ ಮಾಜಿ ನರ್ಸ್‌ ಅರುಣಾ ಶಾನಬಾಗ್‌ ಅವರು ಸೋಮವಾರ ಕೊನೆಯುಸಿರೆಳೆದಿದ್ದಾರೆ.

66 ವರ್ಷದ ಅರುಣಾ ಅವರು ತೀವ್ರತರ ‌ನ್ಯುಮೋನಿಯಾದಿಂದ ಬಳಲುತಿದ್ದರು ಹಾಗೂ ಅವರು ಕೃತಕ ಉಸಿರಾಟ ನೀಡಲಾಗಿತ್ತು ಎಂದು ಕಿಂಗ್ ಎಡ್ವರ್ಡ್‌ ಸ್ಮಾರಕ (ಕೆಇಎಂ) ಆಸ್ಪತ್ರೆ ಮೂಲಗಳು ಹೇಳಿವೆ.

ಮುಂಬೈನ ಪರೇಲ್‌ನಲ್ಲಿರುವ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದರು.

ಉಸಿರಾಟದ ಸಮಸ್ಯೆ ಎದುರಾಗಿದ್ದರಿಂದ ಅರುಣಾ ಅವರನ್ನು ಕಳೆದ ನಾಲ್ಕು ದಶಕಗಳಿಂದ ವಾಸಸ್ಥಳವಾಗಿದ್ದ ಚಿಕ್ಕಕೊಠಡಿಯಿಂದ ವಾರ್ಡ್‌ನಂಬರ್‌ 4ಕ್ಕೆ ವರ್ಗಾಯಿಸಲಾಗಿತ್ತು.

ADVERTISEMENT

ಅವರಲ್ಲಿ ಇತ್ತೀಚಿಗೆ ನ್ಯುಮೋನಿಯಾ ಕಂಡು ಬಂದಿತ್ತು. ಅವರನ್ನು ಕೃತಕ ಉಸಿರಾಟದಲ್ಲಿ ಇರಿಸಲಾಗಿತ್ತು ಎಂದು ಕೆಇಎಂ ಆಸ್ಪತ್ರೆಯ ಅಧೀಕ್ಷಕ ಡಾ. ಅವಿನಾಶ್ ಸುಪೆ ಅವರು ತಿಳಿಸಿದ್ದಾರೆ.

ಹಿನ್ನೆಲೆ: ಅದು 1973 ನವೆಂಬರ್ 27. ಅರುಣಾ ಅವರು ಕೆಇಎಂ ಆಸ್ಪತ್ರೆಯಲ್ಲಿ ತಮ್ಮ ಕಿರಿಯ ನರ್ಸ್‌ ಜತೆಗೂಡಿ ಕೆಲಸ ಮಾಡುತ್ತಿದ್ದರು. ಈ ಸಮಯದಲ್ಲಿ ಸೋಹನ್‌ಲಾಲ್ ವಾಲ್ಮಿಕಿ ಎಂಬ ವಾರ್ಡ್‌ಬಾಯ್‌ ಅರುಣಾ ಅವರ ಮೇಲೆ ಅತ್ಯಾಚಾರ ನಡೆಸಿದ್ದ. ಕೃತ್ಯದ ವೇಳೆ ನಾಯಿಯನ್ನು ಕಟ್ಟಿಹಾಕುವ ಸರಪಳಿಯಿಂದ ಕಟ್ಟಿಹಾಕಿದ್ದ.ಇದರಿಂದ ಅರುಣಾ ಅವರ ಮೆದುಳಿಗೆ ಆಮ್ಲಜನಕ ಪೂರಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಅಂದಿನಿಂದ ಅರುಣಾ ಅವರು ಕೋಮಾ ಸ್ಥಿತಿಯಲ್ಲಿದ್ದರು.

ದಯಮರಣ ಕೋರಿದ್ದರು: ದಶಕಗಳಿಂದ ಕೋಮಾದಲ್ಲಿರುವ ಅರುಣಾ ಅವರಿಗೆ ದಯಾಮರಣಕ್ಕೆ ಅನುಮತಿ ನೀಡುವಂತೆ ಕೋರಿ 2011ರ ಜನವರಿ 24ರಂದು ಅವರ ಗೆಳತಿ, ಪತ್ರಕರ್ತೆ ಪಿಂಕಿ ವಿರಾನಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಬಳಿಕ ಸುಪ್ರೀಂ ಕೋರ್ಟ್‌ ಅರುಣಾ ಅವರ ತಪಾಸಣೆಗಾಗಿ ವೈದ್ಯಕೀಯ ತಂಡವೊಂದನ್ನು ನೇಮಿಸಿತ್ತು. ಆದರೆ, ದಯಮರಣಕ್ಕೆ ಅನುಮತಿ ನೀಡಲು 2011ರ ಮಾರ್ಚ್‌ 7 ರಂದು ಸುಪ್ರೀಂ ಕೋರ್ಟ್‌ ನಿರಾಕರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.