ADVERTISEMENT

5 ಕೋಟಿಗೂ ಹೆಚ್ಚು ಚಾಲನಾ ಪರವಾನಗಿ ನಕಲಿ

​ಪ್ರಜಾವಾಣಿ ವಾರ್ತೆ
Published 29 ಮೇ 2016, 19:30 IST
Last Updated 29 ಮೇ 2016, 19:30 IST

ನವದೆಹಲಿ (ಪಿಟಿಐ): ದೇಶದಲ್ಲಿ ಐದು ಕೋಟಿಗೂ ಹೆಚ್ಚು ಜನರ ವಾಹನ ಚಾಲನಾ  ಪರವಾನಗಿ ನಕಲಿ ಎಂದು ತಿಳಿದು ಬಂದಿದೆ. ನಕಲಿ ಚಾಲನಾ ಪರವಾನಗಿ ಹೊಂದಿರುವವರಿಗೆ ವಿಧಿಸಲಾಗುವ ಶಿಕ್ಷೆ ಮತ್ತು ದಂಡವನ್ನು ಹೆಚ್ಚಿಸಲಾಗಿದೆ.

ಈಗ ನಕಲಿ ಪರವಾನಗಿ ಹೊಂದಿರುವವರಿಗೆ ಒಂದು ವರ್ಷದ ವರೆಗೆ ಜೈಲು ಶಿಕ್ಷೆ ಮತ್ತು ₹10 ಸಾವಿರ ದಂಡ ವಿಧಿಸಬಹುದು. ಹಿಂದೆ ಮೂರು ತಿಂಗಳವರೆಗೆ ಜೈಲು ಮತ್ತು ₹500 ದಂಡ ವಿಧಿಸಲಾಗುತ್ತಿತ್ತು.

ಬಾಲಕರು ವಾಹನ ಚಾಲನೆ ಮಾಡಿದರೆ ಅವರ ಹೆತ್ತವರಿಗೆ ಅಥವಾ ವಾಹನ ಮಾಲೀಕರಿಗೆ ಮೂರು ವರ್ಷದ ವರೆಗೆ ಜೈಲು ಶಿಕ್ಷೆ ಮತ್ತು ₹20 ಸಾವಿರ ವರೆಗೆ ದಂಡ ವಿಧಿಸಲು ಅವಕಾಶ ಇದೆ.  ಜತೆಗೆ ವಾಹನ ನೋಂದಣಿಯನ್ನು ಕೂಡ ರದ್ದುಪಡಿಸಲಾಗುತ್ತದೆ.

‘ಭಾರತದಲ್ಲಿ ಶೇ 30ರಷ್ಟು ವಾಹನ ಚಾಲನಾ ಪರವಾನಗಿ ನಕಲಿ. ಅದನ್ನು ತಡೆಯಬೇಕಿದೆ. ಚಾಲನಾ ಪರವಾನಗಿ ನೀಡಲು ಆನ್‌ಲೈನ್‌ ವ್ಯವಸ್ಥೆ ರೂಪಿಸಲಾಗುವುದು. ಕಂಪ್ಯೂಟರೀಕೃತ ಪರೀಕ್ಷೆ ನಡೆಸಲಾಗುವುದು. ಪರವಾನಗಿ ಪಡೆಯಲು ಪ್ರತಿಯೊಬ್ಬರೂ ಈ ಪರೀಕ್ಷೆ ಉತ್ತೀರ್ಣರಾಗಲೇಬೇಕು. ಈ ವ್ಯವಸ್ಥೆ ಸಂಪೂರ್ಣವಾಗಿ ಪಾರದರ್ಶಕವಾಗಿರಲಿದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

ಸಚಿವಾಲಯವು 18 ಕೋಟಿ ವಾಹನ ಚಾಲನಾ ಪರವಾನಗಿಗಳನ್ನು ಪರಿಶೀಲನೆಗೆ ಒಳಪಡಿಸಿದೆ. ಅವುಗಳಲ್ಲಿ 5.4 ಕೋಟಿ ಪರವಾನಗಿಗಳು ನಕಲಿ ಎಂದು ತಿಳಿದು ಬಂದಿದೆ. ಹಿಂದೊಮ್ಮೆ ಆರು ಕೋಟಿ ಪರವಾನಗಿಗಳನ್ನು ಪರಿಶೀಲಿಸಲಾಗಿತ್ತು. ಅವುಗಳಲ್ಲಿ 74 ಲಕ್ಷ ನಕಲಿ ಎಂದು ತಿಳಿದು ಬಂದಿತ್ತು.

ಭಾರತದ ರಸ್ತೆಗಳನ್ನು ಹೆಚ್ಚು ಸುರಕ್ಷಿತಗೊಳಿಸಲು ರಸ್ತೆ ಸಾರಿಗೆ ಮತ್ತು ಸುರಕ್ಷತಾ ಮಸೂದೆ ಅಂಗೀಕಾರ ಬಹಳ ಮುಖ್ಯ ಎಂದು ಗಡ್ಕರಿ ಹೇಳಿದ್ದಾರೆ. ದೇಶದಲ್ಲಿ ಪ್ರತಿ ವರ್ಷ 1.5 ಲಕ್ಷ ಜನರು ರಸ್ತೆ ಅಪಘಾತಗಳಲ್ಲಿ ಬಲಿಯಾಗುತ್ತಾರೆ.

ಪ್ರಸ್ತಾವಿತ ಮಸೂದೆಯಿಂದ ಇಡೀ ಸಾರಿಗೆ ವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವಿದೆ. ಅದರಲ್ಲಿ ಚಾಲನಾ ಪರವಾನಗಿ ನೀಡಿಕೆಯೂ ಸೇರಿದೆ ಎಂದು ಅವರು ತಿಳಿಸಿದ್ದಾರೆ. ಸಂಸತ್ತಿನ ಮುಂದಿನ ಅಧಿವೇಶನದಲ್ಲಿ ಈ ಮಸೂದೆ ಅಂಗೀಕಾರವಾಗುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.