ADVERTISEMENT

5 ರಾಜ್ಯಗಳಿಗೆ ಹೊಸ ಅಧ್ಯಕ್ಷರ ನೇಮಕ

ರಾಹುಲ್‌ಗೆ ಬಡ್ತಿಗೆ ಪೂರ್ವ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2015, 19:30 IST
Last Updated 2 ಮಾರ್ಚ್ 2015, 19:30 IST

ನವದೆಹಲಿ (ಪಿಟಿಐ): ಐವರು ಪ್ರದೇಶ ಕಾಂಗ್ರೆಸ್‌ ಸಮಿತಿ (ಪಿಸಿಸಿ) ಅಧ್ಯಕ್ಷರು ಮತ್ತು ಒಬ್ಬರು ಪ್ರಾದೇಶಿಕ ಸಮಿತಿ ಅಧ್ಯಕ್ಷರನ್ನು ಕಾಂಗ್ರೆಸ್‌ ಪಕ್ಷವು ನೇಮಕ ಮಾಡಿದೆ. ಇದು ಪಕ್ಷದ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಅಧ್ಯಕ್ಷರ­ನ್ನಾಗಿ ಆಯ್ಕೆ ಮಾಡುವುದಕ್ಕೆ ಪೂರ್ವ ಸಿದ್ಧತೆ ಎಂದು ವಿಶ್ಲೇಷಿಸಲಾಗಿದೆ.

ದೆಹಲಿ ಪಿಸಿಸಿಗೆ ಅಜಯ್‌ ಮಾಕನ್‌, ಮಹಾರಾಷ್ಟ್ರಕ್ಕೆ ಅಶೋಕ ಚವಾಣ್‌, ಜಮ್ಮು ಮತ್ತು ಕಾಶ್ಮೀರಕ್ಕೆ ಗುಲಾಮ್‌ ಅಹ್ಮದ್‌ ಮೀರ್‌ ಗುಜರಾತ್‌ಗೆ ಭರತ್‌ ಸಿನ್ಹಾ  ಸೋಲಂಕಿ (ಮಾಜಿ ಮುಖ್ಯ­ಮಂತ್ರಿ ಮಾಧವ ಸಿನ್ಹಾ ಸೋಳಂಕಿ ಮಗ) ಮತ್ತು ತೆಲಂಗಾಣ ಪಿಸಿಸಿಗೆ ಉತ್ತಮ ರೆಡ್ಡಿ ಅವ­ರನ್ನು ನೇಮಕ ಮಾಡ­ಲಾ­ಗಿದೆ.  ಈ ನೇಮ­ಕಗಳು ರಾಹುಲ್‌ ಗಾಂಧಿ ಅವರ ಆಣತಿ­ಯಂತೆ ನಡೆದಿದೆ ಎಂದು ಹೇಳಲಾ­ಗಿದೆ. ಸಂಜಯ್‌ ನಿರುಪಮ್‌ ಮುಂಬೈ ಪ್ರಾದೇಶಿಕ ಕಾಂಗ್ರೆಸ್‌ ಸಮಿತಿ ಮುಖ್ಯಸ್ಥರ­ನ್ನಾಗಿ ನೇಮಕ ಮಾಡ­ಲಾಗಿದೆ.

ಶಾಸಕ ಮಲ್ಲು ಭಟ್ಟಿ ವಿಕ್ರಮಾರ್ಕ ಅವ­ರನ್ನು ತೆಲಂಗಾಣ ಕಾಂಗ್ರೆಸ್‌ನ ಕಾರ್ಯಾ­­ಧ್ಯಕ್ಷರನ್ನಾಗಿ ನೇಮಕ ಮಾಡ­ಲಾ­ಗಿದೆ. ಈ ರಾಜ್ಯಗಳಲ್ಲಿ ಪ್ರದೇಶ ಕಾಂಗ್ರೆಸ್‌ ಸಮಿತಿ ಮುಖ್ಯಸ್ಥರ ಹುದ್ದೆ­ಯಲ್ಲಿ ಹೊಸ ಮುಖಗಳನ್ನು ರಾಹುಲ್‌ ಬಯಸಿದ್ದರು.

ಬಜೆಟ್‌ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲೇ ರಾಹುಲ್‌ ಗಾಂಧಿ 2 ವಾರಗಳ ವಿಶ್ರಾಂತಿ ಪಡೆದ ಅವಧಿಯಲ್ಲಿ ಈ ಬದಲಾವಣೆ ನಡೆದಿದೆ.  ರಾಹುಲ್‌ ಶೀಘ್ರದಲ್ಲೇ ವಿಶ್ರಾಂತಿಯಿಂದ ಮರಳಲಿ­ದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಮ್ಮು ಮತ್ತು ಕಾಶ್ಮೀರದ ವಿಧಾನ­ಸಭೆಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿ­ಪ್ರಸಾದ್‌, ಕಾರ್ಯದರ್ಶಿ ಮೈನುಲ್‌ ಹಖ್‌ ಅವರನ್ನು ವೀಕ್ಷಕ ಮತ್ತು ಸಹ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ.

ಪ್ರಿಯಾಂಕಾಗೆ ಸ್ಥಾನ: ಪ್ರಶ್ನೆಗೆ ಉತ್ತರಿಸದ ಸೋನಿಯಾ
ನವದೆಹಲಿ (ಪಿಟಿಐ): ವಿಶ್ರಾಂತಿ ರಜೆ ಮೇಲೆ ತೆರಳಿರುವ ಕಾಂಗ್ರೆಸ್‌ ಉಪಾ­ಧ್ಯಕ್ಷ ರಾಹುಲ್‌ ಗಾಂಧಿ ಯಾವಾಗ ಹಿಂದಿರುಗುವರು ಎಂಬ ಪ್ರಶ್ನೆ­ಗಳಿಂದ ಕಿರಿ ಕಿರಿ ಅನುಭವಿಸಿದ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮಾಧ್ಯಮ ಪ್ರತಿನಿಧಿಗಳ ಮೇಲೆ ಸಿಡುಕಿದ ಪ್ರಸಂಗ ಸೋಮವಾರ ನಡೆಯಿತು.

‘ನೀವು ಒಂದೇ ಪ್ರಶ್ನೆಯನ್ನು  ಪದೇ ಪದೇ ಕೇಳುತ್ತಿದ್ದೀರಿ. ರಾಹುಲ್‌ ಹಿಂದಿ­­ರುಗಿದ ಬಳಿಕ ನಿಮ್ಮ ಪ್ರಶ್ನೆಗಳಿಗೆ ಉತ್ತರ ದೊರೆಯಬಹುದು’ ಎಂದರು. ಮಾಧ್ಯಮ ಪ್ರತಿನಿಧಿಗಳಿಂದ ರಾಹುಲ್‌ ಮತ್ತು ಪ್ರಿಯಾಂಕಾ ಕುರಿತು  ತೂರಿಬಂದ ಪ್ರಶ್ನೆಗಳತ್ತ ಸೋನಿಯಾ ಹೆಚ್ಚಿನ ಗಮನ ನೀಡಲಿಲ್ಲ.

ಸತತ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್‌ ಪುನಶ್ಚೇತನಕ್ಕೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಪಕ್ಷದಲ್ಲಿ ಪ್ರಮುಖ ಹುದ್ದೆ ನೀಡ­ಲಾಗುತ್ತದೆ ಎಂಬ ವದಂತಿ ಕುರಿತು ಮಾಧ್ಯಮ ಪ್ರತಿನಿಧಿ­ಗಳು ಕೇಳಿದ ಪ್ರಶ್ನೆಗಳಿಗೂ ಸೋನಿಯಾ  ಸ್ಪಷ್ಟ ಉತ್ತರ ನೀಡದೆ  ನುಣುಚಿಕೊಂಡರು. ಎಐಸಿಸಿ ಕಚೇರಿ­ಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ  ಮತ್ತದೇ ಪ್ರಶ್ನೆ­ಗಳು ಎದುರಾದಾಗ ಪಕ್ಷದ ಪ್ರಧಾನ ಕಾರ್ಯದರ್ಶಿ ರಣ­ದೀಪ್ ಸುರ್ಜೆ­ವಾ­ಲಾ ‘ಪ್ರಿಯಾಂಕಾ ಅವರಿಗೆ ಎಐಸಿಸಿ­ಯಲ್ಲಿ ಮಹತ್ವದ ಜವಾಬ್ದಾರಿ ನೀಡುವ ಬಗ್ಗೆ ತಮಗೆ ಯಾವ ಮಾಹಿತಿ ಇಲ್ಲ’ ಎಂದರು.

ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಎಐಸಿಸಿ ಮಹಾ ಪ್ರಧಾನ ಕಾರ್ಯದರ್ಶಿ ಅಥವಾ ಜಂಟಿ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗುವುದು ಎಂಬ ವದಂತಿ ದಟ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT