ADVERTISEMENT

ಹಿಂದಿಗೆ ವಿಶ್ವಸಂಸ್ಥೆ ಮಾನ್ಯತೆ ನಿಯಮವೇ ಅಡ್ಡಿ: ಸುಷ್ಮಾ

ಪಿಟಿಐ
Published 3 ಜನವರಿ 2018, 19:38 IST
Last Updated 3 ಜನವರಿ 2018, 19:38 IST

ನವದೆಹಲಿ: ಹಿಂದಿಗೆ ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳಲ್ಲಿ ಒಂದು ಎಂಬ ಮಾನ್ಯತೆ ಪಡೆದುಕೊಳ್ಳುವುದಕ್ಕೆ ₹400 ಕೋಟಿ ವೆಚ್ಚವಾದರೂ ಭರಿ
ಸಲು ಸರ್ಕಾರ ಸಿದ್ಧವಿದೆ. ಆದರೆ ವಿಶ್ವಸಂಸ್ಥೆಯ ನಿಯಮದಲ್ಲಿ ಅದಕ್ಕೆ ಅವಕಾಶ ಇಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಲೋಕಸಭೆಗೆ ತಿಳಿಸಿದ್ದಾರೆ.

ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳ ಪೈಕಿ 129 ಸದಸ್ಯರು (ಮೂರನೇ ಎರಡು) ಅಧಿಕೃತ ಭಾಷೆಯ ಮಾನ್ಯತೆಗೆ ಬೆಂಬಲ ನೀಡಬೇಕು. ಹಿಂದಿಯನ್ನು ಅಧಿಕೃತ ಭಾಷೆಯಾಗಿಸಲು ತಗಲುವ ಖರ್ಚನ್ನು ಈ ದೇಶಗಳೇ ಭರಿಸಬೇಕು ಎಂಬುದು ವಿಶ್ವಸಂಸ್ಥೆಯ ನಿಯಮ ಎಂದು ಸುಷ್ಮಾ ಮಾಹಿತಿ ನೀಡಿದರು.

ಒಟ್ಟು ಸದಸ್ಯ ರಾಷ್ಟ್ರಗಳ ಪೈಕಿ ಮೂರನೇ ಎರಡರಷ್ಟು ದೇಶಗಳ ಬೆಂಬಲ ಪಡೆದುಕೊಳ್ಳುವುದು ಕಷ್ಟದ ಕೆಲಸವಲ್ಲ. ಆದರೆ, ವೆಚ್ಚವನ್ನು ಭರಿಸುವ ವಿಚಾರಕ್ಕೆ ಬಂದಾಗ ಸಣ್ಣ ಸಣ್ಣ ದೇಶಗಳು ಹಿಂದೇಟು ಹಾಕುತ್ತವೆ. ವೆಚ್ಚ ಭರಿಸುವ ಶಕ್ತಿ ಭಾರತಕ್ಕೆ ಇದ್ದರೂ ವಿಶ್ವಸಂಸ್ಥೆಯ ನಿಯಮದಿಂದಾಗಿ ಅದು ಸಾಧ್ಯವಾಗುತ್ತಿಲ್ಲ. ಹಾಗಿದ್ದರೂ ಪ್ರಯತ್ನ ಮುಂದುವರಿಸಲಾಗಿದೆ ಎಂದು ಅವರು ತಿಳಿಸಿದರು.

ADVERTISEMENT

ತರೂರ್‌ ಆಕ್ಷೇಪ

ಹಿಂದಿಗೆ ಅಧಿಕೃತ ಭಾಷೆಯ ಮಾನ್ಯತೆ ಪಡೆಯುವ ಪ್ರಯತ್ನಕ್ಕೆ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಆಕ್ಷೇಪ ವ್ಯಕ್ತಪಡಿಸಿದರು. ಹಿಂದಿ ಭಾರತದ ರಾಷ್ಟ್ರೀಯ ಭಾಷೆ ಅಲ್ಲ, ಇಲ್ಲಿನ ಹಲವು ಭಾಷೆಗಳಲ್ಲಿ ಒಂದು ಮಾತ್ರ ಎಂದು ಅವರು ಹೇಳಿದರು.

‘ತಮಿಳುನಾಡು ಅಥವಾ ಪಶ್ಚಿಮ ಬಂಗಾಳದ ವ್ಯಕ್ತಿ ಮುಂದೆ ಪ್ರಧಾನಿಯಾದರೆ ಅವರು ವಿಶ್ವಸಂಸ್ಥೆಯಲ್ಲಿ ಹಿಂದಿಯಲ್ಲಿ ಮಾತನಾಡುವಂತೆ ಬಲವಂತ ಮಾಡುವುದು ಯಾಕೆ’ ಎಂದು ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.