ADVERTISEMENT

ಆಸ್ಟ್ರೇಲಿಯಾ ಗುಂಪಿನಲ್ಲಿ ಭಾರತಕ್ಕೆ ಸದಸ್ಯತ್ವ

​ಪ್ರಜಾವಾಣಿ ವಾರ್ತೆ
Published 19 ಜನವರಿ 2018, 19:30 IST
Last Updated 19 ಜನವರಿ 2018, 19:30 IST

ನವದೆಹಲಿ: ರಾಸಾಯನಿಕ ಮತ್ತು ಜೈವಿಕ ಅಸ್ತ್ರಗಳ ಪ್ರಸರಣ ತಡೆಗಾಗಿ ರಚನೆಯಾಗಿರುವ ‘ಆಸ್ಟ್ರೇಲಿಯಾ ಗ್ರೂಪ್‌’ನಲ್ಲಿ (ಎ.ಜಿ) ಭಾರತಕ್ಕೆ ಶುಕ್ರವಾರ ಸದಸ್ಯತ್ವ ದೊರೆತಿದೆ.

ಇದರೊಂದಿಗೆ, ಶಸ್ತ್ರಾಸ್ತ್ರ ರಫ್ತು ನಿಯಂತ್ರಣಕ್ಕೆ ಸಂಬಂಧಿಸಿ ಜಗತ್ತಿನ ನಾಲ್ಕು ಮುಖ್ಯ ಗುಂ‍ಪುಗಳ ಪೈಕಿ ಮೂರರಲ್ಲಿ ಭಾರತ ಸದಸ್ಯತ್ವ ಪಡೆದುಕೊಂಡಂತಾಗಿದೆ. ಈ ನಾಲ್ಕರ ಪೈಕಿ ಮಹತ್ವದ್ದಾದ ಪರಮಾಣು ಪೂರೈಕೆದಾರರ ಗುಂಪಿಗೆ (ಎನ್‌ಎಸ್‌ಜಿ) ಸೇರಲು ಭಾರತ ಪ್ರಯತ್ನಿಸುತ್ತಿದೆ. ಆದರೆ ಈ ಪ್ರಯತ್ನಕ್ಕೆ ಚೀನಾ ನಿರಂತರವಾಗಿ ಅಡ್ಡಗಾಲು ಹಾಕುತ್ತಿದೆ.

ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದಕ್ಕೆ ಭಾರತ ಸಹಿ ಹಾಕದೇ ಇರುವುದರಿಂದ ಎನ್‌ಎಸ್‌ಜಿ ಸದಸ್ಯತ್ವ ನೀಡಬಾರದು ಎಂದು ಚೀನಾ ವಾದಿಸುತ್ತಿದೆ.

ADVERTISEMENT

ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಗುಂಪಿಗೆ ಭಾರತ 2016ರ ಜೂನ್‌ನಲ್ಲಿ ಮತ್ತು ಸಾಂಪ್ರದಾಯಿಕ ಮತ್ತು ದ್ವಿಬಳಕೆ ಅಸ್ತ್ರಗಳ ನಿಯಂತ್ರಣದ ವಾಸೆನಾರ್‌ ಗುಂಪಿಗೆ ಕಳೆದ ಡಿಸೆಂಬರ್‌ನಲ್ಲಿ ಭಾರತ ಸೇರ್ಪಡೆಯಾಗಿತ್ತು.

43ನೇ ಸದಸ್ಯ ರಾಷ್ಟ್ರವಾಗಿ ಭಾರತವನ್ನು ಸೇರಿಸಿಕೊಳ್ಳಲಾಗಿದೆ ಎಂದು ಎ.ಜಿ ಘೋಷಿಸಿದೆ. ಎ.ಜಿಯ ವಾರ್ಷಿಕ ಸಭೆ ಪ್ಯಾರಿಸ್‌ನಲ್ಲಿ ಕಳೆದ ಜೂನ್‌ನಲ್ಲಿ ನಡೆದಿತ್ತು. ಈ ಸಭೆಯಲ್ಲಿ ಭಾರತದ ಅರ್ಜಿಯು ಚರ್ಚೆಗೆ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.