ADVERTISEMENT

‘ಪದ್ಮಾವತ್‌’ ಪ್ರಮಾಣಪತ್ರ ರದ್ದು‌ ಅರ್ಜಿ ವಜಾ

ಪಿಟಿಐ
Published 19 ಜನವರಿ 2018, 19:30 IST
Last Updated 19 ಜನವರಿ 2018, 19:30 IST
‘ಪದ್ಮಾವತ್‌’ ಪ್ರಮಾಣಪತ್ರ ರದ್ದು‌ ಅರ್ಜಿ ವಜಾ
‘ಪದ್ಮಾವತ್‌’ ಪ್ರಮಾಣಪತ್ರ ರದ್ದು‌ ಅರ್ಜಿ ವಜಾ   

ನವದೆಹಲಿ : ‘ಪದ್ಮಾವತ್‌’ ಸಿನಿಮಾಕ್ಕೆ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ನೀಡಿರುವ ಪ್ರಮಾಣಪತ್ರವನ್ನು ರದ್ದುಪಡಿಸು
ವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿದೆ.

ಈ ಚಲನಚಿತ್ರದ ಪ್ರದರ್ಶನ ನಡೆದರೆ ಜೀವ ಮತ್ತು ಆಸ್ತಿಗೆ ಭಾರಿ ಹಾನಿ ಆಗಲಿದೆ ಹಾಗೂ ಕಾನೂನು ಸುವ್ಯವಸ್ಥೆ ಹದಗೆಡಲಿದೆ ಎಂದು ಹೇಳಿದ ಅರ್ಜಿದಾರರನ್ನು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ ತರಾಟೆಗೆ ತೆಗೆದುಕೊಂಡಿತು. ‘ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ನಮ್ಮ ಕೆಲಸ ಅಲ್ಲ. ಅದು ಸರ್ಕಾರದ ಕೆಲಸ. ಅರ್ಜಿಯನ್ನು ತಿರಸ್ಕರಿಸಲಾಗಿದೆ’ ಎಂದು ಪೀಠ ಹೇಳಿತು. ವಕೀಲ ಎಂ.ಎಲ್‌. ಶರ್ಮಾ ಈ ಅರ್ಜಿ ಸಲ್ಲಿಸಿದ್ದರು.

ಈ ಸಿನಿಮಾಕ್ಕೆ ಸಂಬಂಧಿಸಿ ಗುರುವಾರವೇ ಒಂದು ಆದೇಶ ನೀಡಲಾಗಿದೆ. ಸಿಬಿಎಫ್‌ಸಿ ಪ್ರಮಾಣಪತ್ರ ನೀಡಿದ ಮೇಲೆ ಆ ವಿಚಾರದಲ್ಲಿ ಮಧ್ಯಪ್ರವೇಶಕ್ಕೆ ಅವಕಾಶ ಇಲ್ಲ ಎಂದು ಪೀಠ ತಿಳಿಸಿತು.

ADVERTISEMENT

‘ಪದ್ಮಾವತ್‌’ ಪ್ರದರ್ಶನಕ್ಕೆ ತಡೆ ಒಡ್ಡಿದ್ದ ಗುಜರಾತ್‌ ಮತ್ತು ರಾಜಸ್ಥಾನ ಸರ್ಕಾರಗಳ ಆದೇಶಗಳನ್ನು ಸುಪ್ರೀಂ ಕೋರ್ಟ್‌ ಗುರುವಾರ ರದ್ದು ಮಾಡಿತ್ತು. ಅಷ್ಟಲ್ಲದೆ, ಈ ಸಿನಿಮಾ ಪ್ರದರ್ಶನ ನಿಷೇಧಿಸಿ ಯಾವುದೇ ರಾಜ್ಯ ಸರ್ಕಾರ ಆದೇಶ ಹೊರಡಿಸುವಂತಿಲ್ಲ ಎಂದೂ ಹೇಳಿತ್ತು.

ಮೇವಾಡದ ಮಹಾರಾಜ ರತನ್‌ ಸಿಂಗ್‌ ಮತ್ತು ದೆಹಲಿಯ ಸುಲ್ತಾನ ಅಲ್ಲಾವುದ್ದೀನ್‌ ಖಿಲ್ಜಿಯ ನಡುವೆ 13ನೇ ಶತಮಾನದಲ್ಲಿ ನಡೆದ ಯುದ್ಧದ ಕತೆಯನ್ನು ಇರಿಸಿಕೊಂಡು ‘ಪದ್ಮಾವತ್‌’ ಸಿನಿಮಾ ಮಾಡಲಾಗಿದೆ. ಈ ಸಿನಿಮಾದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ಆರೋಪಿಸಲಾಗಿತ್ತು. ಕರ್ಣಿ ಸೇನಾ ಎಂಬ ಸಂಘಟನೆ ಚಿತ್ರೀಕರಣದ ವೇಳೆ ದಾಂದಲೆಯನ್ನೂ ನಡೆಸಿತ್ತು.

ಮುಸ್ಲಿಮರು ನೋಡಬಾರದು’
ಹೈದರಾಬಾದ್ (ಪಿಟಿಐ): ‘ಪದ್ಮಾವತ್ ಒಂದು ಅಸಂಬದ್ಧ ಚಲನಚಿತ್ರ. ಹೀಗಾಗಿ ಮುಸ್ಲಿಮರ‍್ಯಾರೂ ಅದನ್ನು ನೋಡಬಾರದು’ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕರೆ ನೀಡಿದ್ದಾರೆ.

‘ಪದ್ಮಾವತ್ ಅನ್ನು ಬಿಡುಗಡೆ ಮಾಡುವುದರ ವಿರುದ್ಧ ಎಲ್ಲ ರಜಪೂತರೂ ಒಗ್ಗಟ್ಟಾಗಿದ್ದಾರೆ. ಅವರನ್ನು ನೋಡಿ ಮುಸ್ಲಿಮರು ಒಗ್ಗಟ್ಟು ಕಲಿಯಬೇಕಿದೆ. ಪದ್ಮಾವತ್ ನೋಡಲು ಯಾರೂ ಹೋಗಬೇಡಿ. ಎರಡೂವರೆ ಗಂಟೆಯ ಸಿನಿಮಾ ನೋಡಲಿ ಎಂದು ದೇವರು ನಿಮ್ಮನ್ನು ಸೃಷ್ಟಿಸಿಲ್ಲ’ ಎಂದು ಅವರು ಹೇಳಿದ್ದಾರೆ.

‘ಸಿನಿಮಾವನ್ನು ಪರಿಶೀಲಿಸಲು ಸನ್ಮಾನ್ಯ ನರೇಂದ್ರ ಮೋದಿ ಅವರು 12 ಸದ
ಸ್ಯರ ಸಮಿತಿಯನ್ನು ರಚಿಸುತ್ತಾರೆ. ಆದರೆ ನಮ್ಮ ವಿರುದ್ಧ ತ್ರಿವಳಿ ತಲಾಖ್ ನಿಷೇಧ ಮಸೂದೆ ಮಾಡುವಾಗ ಯಾರೊಬ್ಬರೂ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ’ ಎಂದು ಅವರು ಹರಿಹಾಯ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.